ನವದೆಹಲಿ: ಕೋಲಾರದಲ್ಲಿ ತಮ್ಮ ಪಕ್ಷದ ಶಾಸಕರೇ ನನ್ನನ್ನು ಸೋಲಿಸಿದರು ಎಂದು ಕೋಲಾರ ಲೋಕಸಭಾ ಕ್ಷೇತ್ರದ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ, ಕೇಂದ್ರದ ಮಾಜಿ ಸಚಿವ ಕೆ.ಎಚ್ ಮುನಿಯಪ್ಪ ಅವರು ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಸೋನಿಯಾ ಗಾಂಧಿ ಅವರ ಭೇಟಿಯ ಬಳಿಕ ತಮ್ಮ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಮುನಿಯಪ್ಪ, ನನಗೆ ಟಿಕೆಟ್ ನೀಡಬೇಡಿ ಎಂದು ಕೆಲ ಶಾಸಕರು ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಮನವಿ ಮಾಡಿಕೊಂಡಿದ್ದರು. ಆದರೂ ಹೈಕಮಾಂಡ್ ನನಗೆ ಟಿಕೆಟ್ ನೀಡಿತ್ತು. 

ನನಗೆ ಟಿಕೆಟ್  ಘೋಷಣೆಯಾದ ಬಳಿಕ ಪಕ್ಷದ ಎಲ್ಲ ಮುಖಂಡರು, ಶಾಸಕರು ನನ್ನ ಪರವಾಗಿ ಕೆಲಸ ಮಾಡಬೇಕಿತ್ತು. ಆದರೆ ನನ್ನ ವಿರುದ್ಧ ಕೆಲಸ ಮಾಡಿದರು. ಇಂತಹ ಶಾಸಕರ ಮೇಲೆ ಶಿಸ್ತು ಕ್ರಮ ಕೈಗೊಳ್ಳುವುದು ಹೈಕಮಾಂಡ್‌ಗೆ ಬಿಟ್ಟದ್ದು ಎಂದು ಮುನಿಯಪ್ಪ ಹೇಳಿದ್ದಾರೆ.