ಬೆಂಗಳೂರು :  ಈ ಬಾರಿ ಕರ್ನಾಟಕದಿಂದ 22 ಲೋಕಸಭಾ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಬೇಕು ಎಂಬ ಗುರಿಯೊಂದಿಗೆ ಪೂರ್ವ ಸಿದ್ಧತೆ ಆರಂಭಿಸಿರುವ ಬಿಜೆಪಿಯು ಆರಂಭದಲ್ಲಿ ಇತರೆ ಪಕ್ಷಗಳಿಗೆ ಹೋಲಿಸಿದರೆ ತುಸು ಹಿಂದೆ ಇದ್ದರೂ ನಂತರದ ದಿನಗಳಲ್ಲಿ ಆಗ್ರ ಸ್ಥಾನ ಪಡೆದಿದೆ.

ರಾಜ್ಯದ ಒಟ್ಟು 28 ಕ್ಷೇತ್ರಗಳ ಪೈಕಿ ಕಳೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಜಯಭೇರಿ ಬಾರಿಸಿತ್ತು. ಇತ್ತೀಚೆಗೆ ನಡೆದ ಉಪಚುನಾವಣೆಯಲ್ಲಿ ತನ್ನ ವಶದಲ್ಲಿದ್ದ ಬಳ್ಳಾರಿ ಕ್ಷೇತ್ರವನ್ನು ಕಳೆದುಕೊಂಡು 16ಕ್ಕೆ ಕುಸಿಯಿತು. ಆದರೆ, ಈ ಬಾರಿ 22 ಸ್ಥಾನಗಳನ್ನು ಗೆಲ್ಲಬೇಕು ಎಂಬ ಗುರಿಯನ್ನು ಪಕ್ಷದ ಹೈಕಮಾಂಡ್‌ ನೀಡಿದ್ದು, ಅದನ್ನು ಅನುಷ್ಠಾನಗೊಳಿಸುವತ್ತ ರಾಜ್ಯ ನಾಯಕರು ನಿರತರಾಗಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು ಮತ್ತು ಅವರ ನೇತೃತ್ವದ ಕೇಂದ್ರ ಸರ್ಕಾರದ ಸಾಧನೆಗಳನ್ನು ಮುಂದಿಟ್ಟುಕೊಂಡು ಚುನಾವಣೆ ಎದುರಿಸುವ ಉತ್ಸಾಹ ಬಿಜೆಪಿ ಪಾಳೆಯದಲ್ಲಿ ಕಂಡು ಬರುತ್ತಿದೆ. ಹಾಲಿ ಸಂಸದರು ಈಗಾಗಲೇ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಪ್ರಚಾರ ಕಾರ್ಯ ಆರಂಭಿಸಿದ್ದಾರೆ. ಹಾಲಿ ಸಂಸದರು ಇಲ್ಲದ ಕ್ಷೇತ್ರಗಳಲ್ಲಿ ಪಕ್ಷದ ಮುಖಂಡರು ಸಂಘಟನೆ ಬಲಗೊಳಿಸುವತ್ತ ಗಮನಹರಿಸಿದ್ದಾರೆ.

ಈಗಾಗಲೇ ರಾಜ್ಯದ ಮುಂಬೈ ಕರ್ನಾಟಕ ಮತ್ತು ಹೈದ್ರಾಬಾದ್‌ ಕರ್ನಾಟಕ ಪ್ರದೇಶಗಳಲ್ಲಿ ಒಂದೊಂದು ಬಾರಿ ಸ್ವತಃ ಪ್ರಧಾನಿ ಅವರೇ ಆಗಮಿಸಿ ಬೃಹತ್‌ ಸಾರ್ವಜನಿಕ ಸಮಾವೇಶಗಳನ್ನು ಉದ್ದೇಶಿಸಿ ಮಾತನಾಡುವ ಮೂಲಕ ಆ ಭಾಗದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಪ್ರೋತ್ಸಾಹಕರ ಸಂದೇಶ ರವಾನಿಸಿರುವುದು ಬರ ಬಂದಂತಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಪ್ರಧಾನಿ ಮೋದಿ, ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಇನ್ನಷ್ಟುಕಾರ್ಯಕ್ರಮಗಳು ರಾಜ್ಯದಲ್ಲಿ ನಿಗದಿಯಾಗಲಿವೆ.

ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಮತ್ತು ಮುಂದೆ ಹಮ್ಮಿಕೊಳ್ಳಬೇಕಾದ ಪ್ರಚಾರ ಕಾರ್ಯಕ್ರಮಗಳ ಬಗ್ಗೆ ನಿರ್ಧಾರ ಕೈಗೊಳ್ಳುವ ಸಂಬಂಧ ರಾಜ್ಯದ ಹಿರಿಯ ನಾಯಕರನ್ನು ಒಳಗೊಂಡ ಕೋರ್‌ ಕಮಿಟಿ ಸಭೆ ಶೀಘ್ರದಲ್ಲೇ ನಡೆಯಲಿದೆ. ಯಾವಾಗ ಸಭೆ ನಡೆಸಬೇಕು ಎಂಬುದರ ಸ್ಪಷ್ಟಚಿತ್ರಣ ಇನ್ನೆರಡು ದಿನಗಳಲ್ಲಿ ಹೊರಬೀಳುವ ನಿರೀಕ್ಷೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಈಗಾಗಲೇ ಬಿಜೆಪಿ ರಾಜ್ಯಾಧ್ಯಕ್ಷ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ನೇತೃತ್ವದಲ್ಲಿ ಮೋದಿ ವಿಜಯ ಸಂಕಲ್ಪ ಯಾತ್ರೆ ಚಾಲನೆಯಲ್ಲಿದ್ದು, ಬಹುತೇಕ ಮುಕ್ಕಾಲು ಭಾಗ ಮುಗಿದಿದೆ. ಈ ಯಾತ್ರೆಯ ಮೂಲಕ ರಾಜ್ಯದ ಎಲ್ಲ ಜಿಲ್ಲೆಗಳನ್ನೂ ತಲುಪುತ್ತಿರುವ ಯಡಿಯೂರಪ್ಪ ಮತ್ತಿತರ ಹಿರಿಯ ಮುಖಂಡರು ಅಲ್ಲಿ ಪಕ್ಷದ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸುವ ಮೂಲಕ ಅವರನ್ನು ಚುನಾವಣೆಗೆ ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ, ಸ್ಥಳೀಯ ಮಟ್ಟದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಜವಾಬ್ದಾರಿಗಳನ್ನೂ ಕೊಡುವ ಕೆಲಸ ನಡೆಯುತ್ತಿದೆ.

ಹಾಲಿ ಸಂಸದರೆಲ್ಲರಿಗೂ ಟಿಕೆಟ್‌ ಪಕ್ಕಾ?

ಈ ನಡುವೆ ಬಿಜೆಪಿಯ ಎಲ್ಲ ಹಾಲಿ ಸಂಸದರಿಗೂ ಟಿಕೆಟ್‌ ಸಿಗುತ್ತದೆಯೇ ಎಂಬುದು ಕುತೂಹಲ ಕೆರಳಿಸಿದೆ.

ಬಹುತೇಕ ಎಲ್ಲ ಸಂಸದರಿಗೂ ಟಿಕೆಟ್‌ ನೀಡಲಾಗುತ್ತದೆ ಎಂಬ ಮಾತುಗಳು ಬಿಜೆಪಿ ಪಾಳೆಯದಿಂದ ಗಟ್ಟಿಯಾಗಿ ಕೇಳಿಬರುತ್ತಿದ್ದರೂ ಮೂರ್ನಾಲ್ಕು ಕ್ಷೇತ್ರಗಳಲ್ಲಿನ ಸಂಸದರ ಬಗ್ಗೆ ಸ್ಥಳೀಯ ಮಟ್ಟದಲ್ಲಿ ಅಪಸ್ವರಗಳು ಕೇಳಿಬರುತ್ತಿರುವುದರಿಂದ ತುಸು ಅನುಮಾನವೂ ಇದೆ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಯಾರನ್ನೇ ಆಗಲಿ ಬದಲಾಯಿಸಿ ಅನಗತ್ಯ ತೊಂದರೆಯನ್ನು ಎದುರು ಹಾಕಿಕೊಳ್ಳುವುದು ಬೇಡ ಎಂಬ ನಿಲವಿಗೆ ಪಕ್ಷದ ವರಿಷ್ಠರು ಬರುತ್ತಿದ್ದಾರೆ ಎಂದು ತಿಳಿದು ಬಂದಿದೆ.