ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು ಈಗಾಗಲೇ ಪಕ್ಷಗಳು ಗೆಲುವಿಗಾಗಿ ಹಣವಿಸುತ್ತಿದ್ದು ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೇ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಟಿಕೆಟ್ ವಿಚಾರವಾಗಿ ನಾಯಕರ ವಾಕ್ಸಮರವೇ ನಡೆದು ಸಭೆಯನ್ನು ಬರ್ಖಾಸ್ತು ಮಾಡಲಾಯಿತು. 

ಬೆಂಗಳೂರು : ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ ನಾಯಕರ ಗುಂಪುಗಾರಿಕೆ, ಭಿನ್ನಾಭಿಪ್ರಾಯ ಹಾಗೂ ನೇರಾನೇರ ಜಗಳಕ್ಕೆ ನಿಲ್ಲುವ ಸ್ವಭಾವ ಶನಿವಾರ ರಾಜ್ಯ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯಲ್ಲೂ ಪ್ರದರ್ಶನಗೊಂಡಿದೆ. ಈ ಬಾರಿ ಬೆಳಗಾವಿ ಕಾಂಗ್ರೆಸ್‌ ನಾಯಕರ ಅಟಾಟೋಪ ಯಾವ ಪ್ರಮಾಣದಲ್ಲಿತ್ತು ಎಂದರೆ, ವಾಕ್ಸಮರಕ್ಕೆ ಇಳಿದ ನಾಯಕರನ್ನು ಹತೋಟಿಗೆ ತರಲಾಗದೆ ವೇಣುಗೋಪಾಲ್‌ ಅವರು ಕೊನೆಗೆ ಸಭೆಯನ್ನೇ ಬರ್ಖಾಸ್ತು ಮಾಡಬೇಕಾಯಿತು.

ಕೆಪಿಸಿಸಿ ಕಚೇರಿಯಲ್ಲಿ ಸಂಜೆ ಬೆಳಗಾವಿ ಜಿಲ್ಲೆಯ ಕಾಂಗ್ರೆಸ್‌ ನಾಯಕರ ಸಭೆ ನಡೆದಿದ್ದು, ಬೆಳಗಾವಿ ಹಾಗೂ ಚಿಕ್ಕೋಡಿ (ಸದಲಗಾ) ಲೋಕಸಭಾ ಕ್ಷೇತ್ರಗಳಿಗೆ ಅರ್ಹರ ಪಟ್ಟಿಸಿದ್ಧಪಡಿಸಲು ಚರ್ಚೆ ನಡೆಸುವ ಉದ್ದೇಶ ಹೊಂದಿದ್ದರು. ಸಭೆ ಆರಂಭವಾಗುತ್ತಿದ್ದಂತೆಯೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿ ಅವರು ಇರುವುದರಿಂದ ಅವರ ಏಕೈಕ ಹೆಸರನ್ನು ಪಟ್ಟಿಯಲ್ಲಿ ಇಡುವುದು ಸೂಕ್ತ ಎಂಬ ಚರ್ಚೆ ನಡೆದಿದೆ.

ಇದಾದ ನಂತರ ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ಅರ್ಹ ಅಭ್ಯರ್ಥಿ ಆಯ್ಕೆ ವಿಚಾರ ಪ್ರಸ್ತಾಪವಾದಾಗ, ಶಾಸಕ ಫಿರೋಜ್‌ ಸೇಠ್‌ ಅವರು ಜಿಲ್ಲೆಯಲ್ಲಿ ಎರಡು ಲೋಕಸಭಾ ಕ್ಷೇತ್ರಗಳಿದ್ದು ಈ ಪೈಕಿ ಒಂದರಲ್ಲಿ ಮುಸ್ಲಿಮರಿಗೆ ಅವಕಾಶ ನೀಡಬೇಕು ಎಂದು ಆಗ್ರಹಿಸಿದ್ದಾರೆ. ಆಗ ಸಚಿವ ರಮೇಶ್‌ ಜಾರಕಿಹೊಳಿ ಅವರು, ಎರಡರಲ್ಲಿ ಒಂದು ಕ್ಷೇತ್ರ ಮುಸ್ಲಿಮರಿಗೆ ನೀಡಬೇಕು ಎಂದರೆ ಹೇಗೆ? ಈಗಾಗಲೇ ಚಿಕ್ಕೋಡಿ-ಸದಲಗಾ ಕ್ಷೇತ್ರದಲ್ಲಿ ಹಾಲಿ ಸಂಸದ ಪ್ರಕಾಶ್‌ ಹುಕ್ಕೇರಿ ಅವರಿದ್ದಾರೆ. ಅವರಿಗೇ ಮತ್ತೆ ಟಿಕೆಟ್‌ ನೀಡಬೇಕಾಗುತ್ತದೆ. ಇನ್ನು ಉಳಿದಿರುವುದು ಬೆಳಗಾವಿ ಕ್ಷೇತ್ರ. ಅದನ್ನು ಕಡ್ಡಾಯವಾಗಿ ಮುಸ್ಲಿಮರಿಗೇ ನೀಡಬೇಕು ಎಂದು ನೀವು ಹೇಳಿದಂತಾಗುತ್ತದೆ. ಇದು ಸರಿಯಲ್ಲ ಎಂದು ವಾದಿಸಿದರು ಎನ್ನಲಾಗಿದೆ.

ಇದಕ್ಕೊಪ್ಪದ ಫಿರೋಜ್‌ ಸೇಠ್‌, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿರುವುದೇ ಮುಸ್ಲಿಮರು. ಮುಸ್ಲಿಮರಿಗೆ ಟಿಕೆಟ್‌ ನೀಡದಿದ್ದರೆ ಹೇಗೆ? ಟಿಕೆಟ್‌ಗಾಗಿ ಒತ್ತಾಯ ಮಾಡುತ್ತಿರುವ ನಾಯಕರ ಸಮುದಾಯಗಳು ಕಾಂಗ್ರೆಸ್‌ಗೆ ಬೆಂಬಲ ನೀಡಿಲ್ಲ. ಆದರೆ, ಬೆಂಬಲ ನೀಡಿದ ಸಮುದಾಯವನ್ನು ನಿರ್ಲಕ್ಷಿಸುವುದು ಸರಿಯಲ್ಲ ಎಂದು ವಾದಿಸಿದರು ಎನ್ನಲಾಗಿದೆ. ಫಿರೋಜ್‌ ಸೇಠ್‌ ಈ ಮಾತು ರಮೇಶ್‌ ಜಾರಕಿಹೊಳಿ ಅವರನ್ನು ಕೆರಳಿಸಿದ್ದು, ಬೆಳಗಾವಿಯಲ್ಲಿ ಮುಸ್ಲಿಮರಿಗೆ ಟಿಕೆಟ್‌ ನೀಡಿದರೆ ನಾವು ಪಕ್ಷದ ಪರ ಕೆಲಸ ಮಾಡುವುದಿಲ್ಲ ಎಂದು ಘೋಷಿಸಿದರು. ಈ ಹಂತದಲ್ಲಿ ಫಿರೋಜ್‌ ಹಾಗೂ ರಮೇಶ್‌ ನಡುವೆ ತೀವ್ರ ವಾಕ್ಸಮರವೂ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಅರಿತ ಸಚಿವ ಡಿ.ಕೆ. ಶಿವಕುಮಾರ್‌ ಮಧ್ಯಪ್ರವೇಶಿಸಲು ಮುಂದಾದಾಗ ರಮೇಶ್‌ ಜಾರಕಿಹೊಳಿ ಹಾಗೂ ಶಿವಕುಮಾರ್‌ ನಡುವೆಯೂ ಮಾತಿನ ಚಕಮಕಿ ನಡೆಯಿತು.

ಕಾಂಗ್ರೆಸ್‌ ಘಟಾನುಘಟಿ ನಾಯಕರಾದ ಸಿದ್ದರಾಮಯ್ಯ, ಪರಮೇಶ್ವರ್‌, ಡಿ.ಕೆ.ಶಿವಕುಮಾರ್‌ ಅವರ ಸಮ್ಮುಖದಲ್ಲೇ ತಾರಕ ಸ್ವರದಲ್ಲಿ ನಡೆದ ಈ ವಾಕ್ಸಮರವನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಪರಿಸ್ಥಿತಿ ಹತೋಟಿ ಮೀರುತ್ತಿದ್ದಂತೆಯೇ ವೇಣುಗೋಪಾಲ್‌ ಅವರು ಸಭೆಯನ್ನು ಅರ್ಧದಲ್ಲೇ ಬರ್ಖಾಸ್‌್ತ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೇಣು ಮುಂದೆ ಬಂದ ರಮೇಶ್‌-ಲಕ್ಷ್ಮೀ ಸಮರ!

ಕಾಂಗ್ರೆಸ್‌ನ ರಾಜ್ಯ ಉಸ್ತುವಾರಿ ವೇಣುಗೋಪಾಲ್‌ ಬೆಳಗ್ಗೆಯಿಂದಲೇ ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ವಿವಿಧ ಲೋಕಸಭಾ ಕ್ಷೇತ್ರಗಳ ನಾಯಕರ ಸಭೆ ನಡೆಸಿದ್ದು, ಬೆಳಗಾವಿ ಜಿಲ್ಲೆಯ ನಾಯಕರ ಸಭೆ ಸಂಜೆಗೆ ನಿಗದಿಯಾಗಿತ್ತು. ಆದರೆ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್‌ ಹಾಗೂ ರಮೇಶ್‌ ಜಾರಕಿಹೊಳಿ ನಡುವೆ ಪಿಎಲ್‌ಡಿ ಬ್ಯಾಂಕ್‌ ಚುನಾವಣೆ ವಿಷಯವಾಗಿ ನಡೆದಿರುವ ಜಟಾಪಟಿ ವಿಚಾರ ಬೆಳಗ್ಗೆಯೇ ವೇಣುಗೋಪಾಲ್‌ ಮುಂದೆ ಪ್ರಸ್ತಾಪಗೊಂಡಿತ್ತು. 

ವೇಣುಗೋಪಾಲ್‌ ಹಾಗೂ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದ ಲಕ್ಷ್ಮೀ ಹೆಬ್ಬಾಳಕರ್‌ ಅವರು ಜಾರಕಿಹೊಳಿ ಸಹೋದರರು ತಮ್ಮ ಮೇಲೆ ನಡೆಸುತ್ತಿರುವ ವಾಗ್ದಾಳಿ ಬಗ್ಗೆ ದೂರು ನೀಡಿದ್ದರು. ಈ ಬಗ್ಗೆ ರಮೇಶ್‌ ಜಾರಕಿಹೊಳಿ ಅವರೊಂದಿಗೆ ಖುದ್ದು ಮಾತನಾಡುವುದಾಗಿ ಆಗ ವೇಣುಗೋಪಾಲ್‌ ತಿಳಿಸಿದ್ದರು ಎನ್ನಲಾಗಿದೆ.

ಆದರೆ, ಸಂಜೆ ಬೆಳಗಾವಿ ಜಿಲ್ಲಾ ನಾಯಕರ ಸಭೆ ವಾಕ್ಸಮರದಿಂದಾಗಿ ಬರ್ಖಾಸ್ತು ಆಗಿದೆ. ಹೀಗಾಗಿ ವೇಣುಗೋಪಾಲ್‌ ಕುಮಾರಕೃಪಾ ಅತಿಥಿ ಗೃಹಕ್ಕೆ ಬಂದು ಪ್ರತ್ಯೇಕವಾಗಿ ಭೇಟಿ ಮಾಡುವಂತೆ ರಮೇಶ್‌ ಜಾರಕಿಹೊಳಿಗೆ ಸೂಚನೆ ನೀಡಿ, ಕೆಪಿಸಿಸಿ ಕಚೇರಿಯಿಂದ ತೆರಳಿದರು ಎಂದು ಮೂಲಗಳು ಹೇಳಿವೆ.