ಮಂಡ್ಯ : ಒಂದೊಮ್ಮೆ ಕಾಂಗ್ರೆಸ್‌ ಟಿಕೆಟ್‌ ದೊರೆಯದಿದ್ದರೆ, ಸ್ವತಂತ್ರ ಅಭ್ಯರ್ಥಿಯಾಗಿ ಮಂಡ್ಯ ಲೋಕಸಭಾ ಕ್ಷೇತ್ರದಿಂದಲೇ ಸ್ಪರ್ಧಿಸುವುದಾಗಿ ಸುಮಲತಾ ಅಂಬರೀಷ್‌ ಘೋಷಿಸಿದ್ದು, ಇದೀಗ ಅವರನ್ನು ತನ್ನತ್ತ ಸೆಳೆಯಲು ಬಿಎಸ್‌ಪಿ ಮುಂದಾಗಿದೆ. 

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ 6 ಕ್ಷೇತ್ರಗಳನ್ನೂ ಬಹಳ ಗಂಭೀರವಾಗಿ ಪರಿಗಣಿಸಲಾಗಿದ್ದು, 3ರಲ್ಲಾದರೂ ಗೆಲ್ಲಲೇಬೇಕೆಂಬ ಗುರಿಯನ್ನಿಟ್ಟುಕೊಂಡಿದ್ದೇವೆ. ಮಂಡ್ಯ ಕ್ಷೇತ್ರವನ್ನು ಸಹ ಗಂಭೀರವಾಗಿ ಪರಿಗಣಿಸಿದ್ದು, ಪ್ರಬಲ ಅಭ್ಯರ್ಥಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ ಎಂದು ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ ತಿಳಿಸಿದರು.

ಪಕ್ಷಕ್ಕೆ ಸುಮಲತಾ ಅವರನ್ನು ಕರೆತರುವ ಪ್ರಯತ್ನದಲ್ಲಿದ್ದೇವೆ. ಒಂದೊಮ್ಮೆ ಸುಮಲತಾ ಬರದಿದ್ದರೆ, ಮಂಡ್ಯದ ಹುತಾತ್ಮ ಯೋಧ ಗುರು ಅವರ ಪತ್ನಿ ಕಲಾವತಿ ಅವರ ಮನವೊಲಿಕೆಗೆ ಯತ್ನಿಸಲಾಗುವುದು. ಬಿಎಸ್‌ಪಿ ಸಂಸ್ಥಾಪಕರಾದ ಕಾನ್ಷೀರಾಂ ಜನ್ಮದಿನವಾದ ಮಾ.15ರಂದು ಮಂಡ್ಯದಲ್ಲಿ ಸಮಾವೇಶ ನಡೆಸಿ, ಅಧಿಕೃತ ಅಭ್ಯರ್ಥಿಯನ್ನು ಘೋಷಿಸುತ್ತೇವೆ ಎಂದಿದ್ದಾರೆ.