ಬೆಂಗಳೂರು[ಜು.25]:  ಸರ್ಕಾರ ರಚನೆಯ ಪ್ರಕ್ರಿಯೆ ಆರಂಭವಾಗುವ ಮೊದಲೇ ಬಿಜೆಪಿಯಲ್ಲಿ ಸಚಿವ ಸ್ಥಾನಕ್ಕಾಗಿ ಬಿರುಸಿನ ಲಾಬಿ ಆರಂಭವಾಗಿದ್ದು, ಯಾರಿಗೆ ಸಚಿವ ಸ್ಥಾನ ನೀಡಬೇಕು ಎಂಬುದು ಸವಾಲಾಗಿ ಪರಿಣಮಿಸಿದೆ.

ಈಗ ರಾಜೀನಾಮೆ ನೀಡಿರುವ ಕಾಂಗ್ರೆಸ್‌ ಮತ್ತು ಜೆಡಿಎಸ್‌ನ 15 ಮಂದಿ ಶಾಸಕರನ್ನು ಗಮನದಲ್ಲಿಟ್ಟುಕೊಂಡು ಸಚಿವ ಸಂಪುಟ ರಚನೆ ಮಾಡಬೇಕಾಗಿದೆ. ಈ ಬಗ್ಗೆ ಬುಧವಾರ ಬೆಳಗ್ಗೆ ಬಿಜೆಪಿಯ ಮುಖ್ಯಮಂತ್ರಿ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಆಪ್ತ ನಾಯಕರೊಂದಿಗೆ ಪ್ರಾಥಮಿಕ ಹಂತದ ಸಮಾಲೋಚನೆ ನಡೆಸಿದರು. ಅನೇಕ ಶಾಸಕರು ಮತ್ತು ಅವರ ಬೆಂಬಲಿಗರು ಯಡಿಯೂರಪ್ಪ ಅವರಿಗೆ ದುಂಬಾಲು ಬಿದ್ದಿದ್ದಾರೆ.

ಆದರೆ, ಜಾತಿವಾರು ಮತ್ತು ಪ್ರದೇಶವಾರು ಪ್ರಾತಿನಿಧ್ಯವನ್ನು ಸಮತೋಲನದಿಂದ ಪಾಲಿಸಬೇಕು ಎಂದುಕೊಂಡರೆ ಅದು ಸುಲಭವಾಗಿಲ್ಲ. ಅದನ್ನು ಮೀರಿ ಹಿರಿಯರಿಗೇ ನೀಡಬೇಕು ಎಂದುಕೊಂಡರೆ ಕಿರಿಯ ಶಾಸಕರು ಮುನಿಸಿಕೊಳ್ಳಬಹುದು ಎಂಬ ಆತಂಕವೂ ಎದುರಾಗಿದೆ. ಅಂತಿಮವಾಗಿ ವರಿಷ್ಠರ ಜೊತೆ ಚರ್ಚಿಸಿಯೇ ಮುಂದಿನ ತೀರ್ಮಾನ ಕೈಗೊಳ್ಳಲು ಯಡಿಯೂರಪ್ಪ ಅವರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಅತೃಪ್ತ ಶಾಸಕರ ಪೈಕಿ 15 ಮಂದಿಯಲ್ಲಿ ಹೆಚ್ಚೂ ಕಡಿಮೆ 10ರಿಂದ 12 ಮಂದಿಗೆ ಸಚಿವ ಸ್ಥಾನ ನೀಡುವುದು ನಿಶ್ಚಿತವಾಗಿದೆ. ಈ ಬಗ್ಗೆ ಮುಂಚಿತವಾಗಿಯೇ ಮಾತುಕತೆ ನಡೆದಿರುವುದರಿಂದ ಈಗ ನಿರಾಕರಿಸಲೂ ಸಾಧ್ಯವಿಲ್ಲ. ಒಂದು ವೇಳೆ ಆ ಶಾಸಕರು ಅನರ್ಹಗೊಂಡು ತಕ್ಷಣ ಸಚಿವ ಸ್ಥಾನ ಅಲಂಕರಿಸಲು ಅರ್ಹರಾಗದಿದ್ದರೆ ಮಾತ್ರ ಸದ್ಯಕ್ಕೆ ಸಮಸ್ಯೆ ಉಂಟಾಗಲಿಕ್ಕಿಲ್ಲ. ಆದರೆ, ಉಪಚುನಾವಣೆ ನಂತರವಾದರೂ ಅವರಿಗೆ ಸಚಿವ ಸ್ಥಾನ ನೀಡಲೇಬೇಕಾಗುತ್ತದೆ.

ಉದಾಹರಣೆಗೆ ರಾಜಧಾನಿ ಬೆಂಗಳೂರಿನಲ್ಲೇ ಪಕ್ಷದ ಆರ್‌.ಅಶೋಕ್‌, ಅರವಿಂದ್‌ ಲಿಂಬಾವಳಿ, ವಿ.ಸೋಮಣ್ಣ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ. ಅವರೊಂದಿಗೆ ಇದುವರೆಗೆ ಸಚಿವ ಸ್ಥಾನ ಅಲಂಕರಿಸದ ಎಸ್‌.ಆರ್‌.ವಿಶ್ವನಾಥ್‌, ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರೂ ಈ ಬಾರಿ ಸಚಿವ ಸ್ಥಾನ ಸಿಗುವ ನಿರೀಕ್ಷೆಯಲ್ಲಿದ್ದಾರೆ. ಆದರೆ, ಅನ್ಯ ಪಕ್ಷಗಳಿಂದ ವಲಸೆ ಬರಲಿರುವ ನಾಲ್ವರು ಶಾಸಕರಿಗೆ ಸಚಿವ ಸ್ಥಾನ ನೀಡಬೇಕಾಗಿದೆ. ಎಸ್‌.ಟಿ.ಸೋಮಶೇಖರ್‌, ಕೆ.ಗೋಪಾಲಯ್ಯ, ಬೈರತಿ ಬಸವರಾಜು ಹಾಗೂ ಮುನಿರತ್ನ ಅವರ ಪೈಕಿ ಇಬ್ಬರು ಅಥವಾ ಮೂವರಿಗೆ ಸಚಿವ ಸ್ಥಾನ ಖಚಿತ ಎನ್ನಲಾಗಿದೆ.

ಅದೇ ರೀತಿ ಬಳ್ಳಾರಿಯಲ್ಲಿ ಅತೃಪ್ತ ಶಾಸಕ ಆನಂದ್‌ ಸಿಂಗ್‌ ಅವರಿಗೆ ನೀಡಬೇಕಾಗುತ್ತದೆ. ಅಲ್ಲಿನ ಪಕ್ಷದ ಶಾಸಕರಾದ ಗಾಲಿ ಸೋಮಶೇಖರರೆಡ್ಡಿ, ಗಾಲಿ ಕರುಣಾಕರರೆಡ್ಡಿ ಅವರೂ ಆಕಾಂಕ್ಷಿಗಳಾಗಿದ್ದಾರೆ. ಇನ್ನು ರಾಯಚೂರಿನಲ್ಲಿ ಅತೃಪ್ತ ಶಾಸಕ ಪ್ರತಾಪ್‌ಗೌಡ ಪಾಟೀಲ ಅವರಿಗೆ ನೀಡಿದರೆ ಆಕಾಂಕ್ಷಿಯಾಗಿರುವ ಶಿವನಗೌಡ ನಾಯಕ್‌ ಅವರಿಗೆ ಕಷ್ಟವಾಗುತ್ತದೆ. ಇನ್ನು ಬೆಳಗಾವಿಯ ಅತೃಪ್ತರಾದ ರಮೇಶ್‌ ಜಾರಕಿಹೊಳಿ, ಶ್ರೀಮಂತ್‌ ಪಾಟೀಲ್‌, ಮಹೇಶ್‌ ಕುಮಟಳ್ಳಿ ಅವರ ಪೈಕಿ ಇಬ್ಬರಿಗೆ ನೀಡಿದರೂ ಪಕ್ಷದ ಉಮೇಶ್‌ ಕತ್ತಿ, ಅಭಯ್‌ ಪಾಟೀಲ್‌, ಬಾಲಚಂದ್ರ ಜಾರಕಿಹೊಳಿ ಅವರಿಗೆ ಸಚಿವ ಸ್ಥಾನ ಲಭಿಸುವುದು ಅನುಮಾನ.