ಲಘು ಮೋಟಾರು ವಾಹನ (ಎಲ್‌ಎಂವಿ) ಪರವಾನಗಿ ಹೊಂದಿರುವ ಚಾಲಕರು ಹಳದಿ ಬಣ್ಣದ ಫಲಕದ ಲಘು ಸಾರಿಗೆ ವಾಹನಗಳನ್ನು ಚಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.

ಬೆಂಗಳೂರು(ಆ.11): ಲಘು ಮೋಟಾರು ವಾಹನ (ಎಲ್‌ಎಂವಿ) ಪರವಾನಗಿ ಹೊಂದಿರುವ ಚಾಲಕರು ಹಳದಿ ಬಣ್ಣದ ಫಲಕದ ಲಘು ಸಾರಿಗೆ ವಾಹನಗಳನ್ನು ಚಲಾಯಿಸಬಹುದು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಶೀಘ್ರದಲ್ಲೇ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ನ ಆದೇಶ ಅನುಷ್ಠಾನಕ್ಕೆ ತರುವ ಸಾಧ್ಯತೆ ಇದೆ.

ಪ್ರಸ್ತುತ ಹಳದಿ ಬಣ್ಣದ ಫಲಕ ಹೊಂದಿರುವ ವಾಹನಗಳನ್ನು ಚಲಾಯಿಸಲು ಪರವಾನಗಿ ಜೊತೆಗೆ ಬ್ಯಾಡ್ಜ್ ಕಡ್ಡಾಯವಾಗಿದೆ. ಹಳದಿ ಬಣ್ಣದ ಫಲಕ ಹೊಂದಿರುವ ಗರಿಷ್ಠ ೭೫೦೦ ಕೆ.ಜಿ. ಸಾಗಣೆಯ ವಾಹನಗಳು ಲಘು ಮೋಟಾರು ವಾಹನ ವರ್ಗದಲ್ಲಿವೆ. ಅಂದರೆ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್, ಟೆಂಪೋ, ಜೀಪು, ಸ್ವರಾಜ್ ಮಜ್ದಾ ಇನ್ನಿತರ ವಾಹನಗಳು ಈ ವರ್ಗಕ್ಕೆ ಸೇರಲಿವೆ.

ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಮಾಹಿತಿ ಇದೆ, ಆದರೆ ಆದೇಶದ ವ್ಯಾಪ್ತಿ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಸಂಬಂಧ ಕೇಂದ್ರದಿಂದ ಅಧಿಕೃತ ಸೂಚನೆ ಬಂದ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಸಾರಿಗೆ ಇಲಾಖೆ ಜಂಟಿ ಆಯುಕ್ತೆ ಎಂ.ಪಿ.ಓಂಕಾರೇಶ್ವರಿ ತಿಳಿಸಿದರು.

ಸುಪ್ರೀಂ ಕೋರ್ಟ್ ಆದೇಶ ಸಂತಸ ತಂದಿದೆ. ಬ್ಯಾಡ್ಜ್ ಇಲ್ಲದಿದ್ದರೂ ಹಳದಿ ಬಣ್ಣದ ಫಲಕದ ವಾಹನಗಳ ಚಾಲನೆ ಮಾಡಲು ಅವಕಾಶ ಕಲ್ಪಿಸುವುದರಿಂದ ಚಾಲಕರಿಗೆ ಅನುಕೂಲವಾಗಲಿದೆ. ಪ್ರಸ್ತುತ ಸಾರಿಗೆ ಇಲಾಖೆಯು ಲಘು ಮೋಟಾರು ವಾಹನ ಬ್ಯಾಡ್ಜ್ ನೀಡಲು ಚಾಲಕನಿಗೆ ೮ನೇ ತರಗತಿ ಶೈಕ್ಷಣಿಕ ಅರ್ಹತೆ ಕಡ್ಡಾಯಗೊಳಿಸಿದೆ. ಇದರಿಂದ ಬಹುತೇಕ ಚಾಲಕರು ಬ್ಯಾಡ್ಜ್ ಮಾಡಿಸಲು ತೊಡಕಾಗಿದೆ. ಇದೀಗ ಸುಪ್ರೀಂ ಕೋಟ್ ಆದೇಶ ಜಾರಿಯಾದರೆ ಸಾವಿರಾರು ಚಾಲಕರಿಗೆ ಸಹಕಾರಿಯಾಗಲಿದೆ. ಐಟಿ-ಬಿಟಿ, ಕಾರ್ಖಾನೆ, ಕಂಪನಿಗಳಲ್ಲಿರುವ ಚಾಲಕರ ಕೊರತೆಯೂ ಕಡಿಮೆಯಾಗಲಿದೆ ಎಂದು ಚಾಲಕರ ಮುಖಂಡ ರಾಧಾಕೃಷ್ಣ ಹೊಳ್ಳ ಹೇಳಿದರು.

ಐದಾರು ವರ್ಷಗಳ ಹಿಂದೆಯೇ ದೆಹಲಿ ಮತ್ತು ಮಹಾರಾಷ್ಟ್ರದ ಸಾರಿಗೆ ಇಲಾಖೆಯು ಆಲ್ ಇಂಡಿಯಾ ಪರ್ಮಿಟ್ ಹೊಂದಿರುವ ಹಳದಿ ಬಣ್ಣದ ಫಲಕದ ಲಘು ಮೋಟಾರು ವಾಹನ ಹಾಗೂ ಖಾಸಗಿ ಸೇವೆಯಲ್ಲಿರುವ ಲಘು ಮೋಟಾರು ವಾಹನಗಳ ಚಾಲನೆಗೆ ಬ್ಯಾಡ್ಜ್‌ನಿಂದ ವಿನಾಯಿತಿ ನೀಡಿವೆ. ಸುಪ್ರೀಂ ಕೋರ್ಟ್ ಆದೇಶದ ಹೊರತಾಗಿಯೂ ಬ್ಯಾಡ್ಜ್ ಕಡ್ಡಾಯ ನಿಯಮ ಸಡಿಲಿಸುವ ಅಧಿಕಾರ ಸಾರಿಗೆ ಇಲಾಖೆಗೆ ಇದೆ. ರಾಜ್ಯ ಸರ್ಕಾರ ಮನಸ್ಸು ಮಾಡಿದರೆ ಕರ್ನಾಟಕ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ಚಾಲಕರಿಗೆ ಅನುಕೂಲ ಕಲ್ಪಿಸಬಹುದಾಗಿದೆ ಎಂದರು.