ರಾಂಚಿ[ಆ.20]: ಮನೆ ಬಳಕೆಯ ವಸ್ತುಗಳನ್ನು ಖರೀದಿಸುವ ಅಂಗಡಿಯಲ್ಲೇ ಮದ್ಯದ ಬಾಟಲಿಗಳು ಕೂಡ ಸಿಕ್ಕಿದರೆ ಎಷ್ಟೊಂದು ಅನುಕೂಲ ಎಂದು ಮದ್ಯ ಪ್ರೀಯರು ಅಂದುಕೊಂಡಿದ್ದಿರಬಹುದು. ಮದ್ಯ ಪ್ರಿಯರ ಈ ಆಸೆ ಜಾರ್ಖಂಡ್‌ನಲ್ಲಿ ಶೀಘ್ರದಲ್ಲೇ ಸಾಕಾರಗೊಂಡರೂ ಅಚ್ಚರಿ ಇಲ್ಲ. ಏಕೆಂದರೆ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವಂತೆ ಜಾರ್ಖಂಡ್‌ ಅಬಕಾರಿ ಇಲಾಖೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ.

ಮುಖ್ಯಮಂತ್ರಿಗಳ ಕಚೇರಿಗೆ ಇಂಥದ್ದೊಂದು ಪ್ರಸ್ತಾವನೆ ಬಂದಿದ್ದು, ಈ ಸಂಬಂಧ ಮುಖ್ಯಮಂತ್ರಿಗಳ ಕಚೇರಿ ಕೆಲವೊಂದು ಸ್ಪಷ್ಟನೆಗಳನ್ನು ಕೇಳಿದೆ.

ಪ್ರಸ್ತಾನೆಯ ಪ್ರಕಾರ, 30 ಲಕ್ಷ ಆದಾಯಕ್ಕೆ ಜಿಎಸ್‌ಟಿ ಪಾವತಿಸುತ್ತಿರುವ ಯಾವುದೇ ಕಿರಾಣಿ ಅಂಗಡಿಗೆ ಮದ್ಯ ಮಾರಾಟಕ್ಕೆ ಅನುಮತಿ ನೀಡಬಹುದಾಗಿದೆ.

ಜಾರ್ಖಂಡ್‌ನಲ್ಲಿ ಈ ಹಿಂದೆ ಸರ್ಕಾರದಿಂದ ಪರವಾನಗಿ ಪಡೆದವರು ಮಾತ್ರವೇ ಮದ್ಯ ಮಾರಾಟಕ್ಕೆ ಅನುಮತಿ ನೀಡಲಾಗಿತ್ತು. ಬಳಿಕ ಅಬಕಾರಿ ನಿಯಮಕ್ಕೆ ತಿದ್ದುಪಡಿ ತಂದು ಸರ್ಕಾದ ಮದ್ಯದ ಅಂಗಡಿಯಲ್ಲಿ ಮದ್ಯ ಮಾರಾಟ ಆರಭಿಸಲಾಗಿತ್ತು. ಆದರೆ, ನೀರೀಕ್ಷಿಸಿದ ಮಟ್ಟದ ಆದಾಯ ಸಂದಾಯವಾಗದ ಹಿನ್ನೆಲೆಯಲ್ಲಿ ಸರ್ಕಾರಿ ಮದ್ಯ ಅಂಗಡಿಗಳನ್ನು ಹರಾಜು ಹಾಕಲಾಗಿತ್ತು.

ಇದೀಗ ಕಿರಾಣಿ ಅಂಗಡಿಯಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡುವ ಮೂಲಕ ವಾರ್ಷಿಕ 1,500 ಕೋಟಿ ರು. ಆದಾಯವನ್ನು ಸರ್ಕಾರ ನಿರೀಕ್ಷಿಸುತ್ತಿದೆ. ಅಲ್ಲದೇ ಪಂಚಾಯತ್‌ ಮಟ್ಟದ ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ಉದ್ದೇಶಿಸಿದೆ.