ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ಮುಂದುವರಿದಿದೆ. ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ  ನೂರಾರು ಸ್ವಯಂಸೇವಕರು ಬಕೆಟ್‌'ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ.

ಚೆನ್ನೈ(ಫೆ.03): ಕಾಮರಾಜರ್ ಬಂದರಿಗೆ ಹೊಂದಿಕೊಂಡಿರುವ ಕಡಲಿನ ನೀರಿನಲ್ಲಿ ಚೆಲ್ಲಿರುವ ತೈಲವನ್ನು ತೆರವು ಮಾಡುವ ಕಾರ್ಯ ಮುಂದುವರಿದಿದೆ. ಚೆನ್ನೈನ ವಿವಿಧ ಪ್ರಾಧಿಕಾರಗಳ 1025 ಸಿಬ್ಬಂದಿ ಹಾಗೂ ವಿವಿಧ ಸಂಘಟನೆಗಳ ನೂರಾರು ಸ್ವಯಂಸೇವಕರು ಬಕೆಟ್‌'ಗಳಲ್ಲಿ ತೈಲವನ್ನು ಮೊಗೆದು ತೆರವು ಮಾಡುತ್ತಿದ್ದಾರೆ.

ಈವರೆಗೆ ಸುಮಾರು 40ಟನ್‌ ಬಗ್ಗಡನ್ನು ನೀರಿನಿಂದ ಹೊರತೆಗೆಯಲಾಗಿದೆ. ಇನ್ನೂ ತೈಲ ಶೇಖರವಾಗಿರುವ ತೀರದಲ್ಲಿ ಈವರೆಗೆ 20 ಕಡಲಾಮೆಗಳ ಶವಗಳು ಪತ್ತೆಯಾಗಿವೆ. ಅವೆಲ್ಲವೂ ತೈಲದ ಕಾರಣದಿಂದಲೇ ಮೃತಪಟ್ಟಿವೆ ಎಂದು ಮೇಲ್ನೋಟಕ್ಕೆ ಕಾಣುತ್ತಿದೆ.

ಜನವರಿ 28ರ ಮಧ್ಯರಾತ್ರಿ 2 ಗಂಟೆ ಸುಮಾರಿಗೆ ಎರಡು ಹಡಗುಗಳ ನಡುವೆ ಡಿಕ್ಕಿ ನಡೆದು, ಒಂದು ಹಡಗಿನಿಂದ (ಟ್ಯಾಂಕರ್‌) ತೈಲ ಸೋರಿಕೆ ಆಗಿತ್ತು. ಕಾಮರಾಜರ್‌ ಬಂದರು ಪ್ರದೇಶ ಮತ್ತು ಮರೀನಾ ಕಡಲ ತೀರದಲ್ಲಿ ತೈಲ ಶೇಖರವಾಗಿದೆ. ತೀರದಲ್ಲಿರುವ ನೀರಿನ ಮೇಲೆ ಸುಮಾರು ಮೂರ್ನಾಲ್ಕು ಇಂಚು ದಪ್ಪನೆಯ ಪದರದಷ್ಟು ತೈಲ ನಿಂತಿದೆ. ಅಲ್ಲದೆ ಕಡಲ ಕೊರೆತ ತಪ್ಪಿಸಲು ಹಾಕಿರುವ ಕಲ್ಲುಗಳ ಮೇಲೆ ಭಾರಿ ಪ್ರಮಾಣದಲ್ಲಿ ತೈಲ ಅಂಟಿಕೊಂಡಿದೆ.