Asianet Suvarna News Asianet Suvarna News

ಪೇಜಾವರ ಶ್ರೀಗಳಿಗೆ ಲಿಂಗಾಯತರ ಸವಾಲ್

ಹಿಂದುಗಳೇ ಎಂಬ ಬಗ್ಗೆ ಚರ್ಚೆಗೆ ಬನ್ನಿ, ಯಾರನ್ನಾದರೂ ಕರೆ ತನ್ನಿ : ಜಾಮದಾರ್

Lingayats Challenge Pejawara Shri

ಬೆಂಗಳೂರು: ಶಿವನ ಆರಾಧಕರಾದ ಲಿಂಗಾಯತರು ಕೂಡ ಹಿಂದುಗಳೇ ಎಂಬ ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ ಹೇಳಿಕೆಯನ್ನು ಅಲ್ಲಗಳೆದಿರುವ ಲಿಂಗಾಯತ ಸ್ವತಂತ್ರ ಧರ್ಮ ಹೋರಾಟ ಸಮಿತಿಯ ಪ್ರಧಾನ ಸಂಚಾಲಕ ಡಾ.ಶಿವಾನಂದ ಜಾಮದಾರ್, ಈ ಬಗ್ಗೆ ಪೇಜಾವರರು ಆರೆಸ್ಸೆಸ್ ಮುಖಂಡರ ಜತೆಗೂಡಿ ಬಹಿರಂಗ ಚರ್ಚೆಗೆ ಬಂದರೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಚರ್ಚಿಸಲು ಸಿದ್ಧ ಎಂದು ಸವಾಲು ಹಾಕಿದ್ದಾರೆ.

ಪೇಜಾವರ ಸ್ವಾಮೀಜಿ ಹೇಳಿಕೆಗೆ ಗುರುವಾರ ಖಾಸಗಿ ಹೋಟೆಲ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದ ಅವರು, ಕಳೆದ ಮೂರು ತಿಂಗಳಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿಯವರು ಸತತವಾಗಿ ಶಿವನ ಆರಾಧಕರಾದ ಲಿಂಗಾಯತರು ಹಿಂದುಗಳು ಎಂದು ಹೇಳುತ್ತಾ ಬಂದಿದ್ದಾರೆ. ಆದರೆ, ಲಿಂಗಾಯತರ ಶಿವನ ಪರಿಕಲ್ಪನೆಯು ಹಿಂದುಗಳ ಶಿವನ ಕಲ್ಪನೆಗೆ ಸಂಪೂರ್ಣವಾಗಿ ಭಿನ್ನವಾಗಿದೆ. ಇದನ್ನು ನಾವು ಐತಿಹ್ಯಗಳ ಮೂಲಕ ನಿರೂಪಿಸಬಲ್ಲೆವು. ಈ ಬಗ್ಗೆ ಪೇಜಾವರ ಶ್ರೀಗಳು ಲಿಂಗಾಯತ ಧರ್ಮದ ಕುರಿತಂತೆ ಚರ್ಚಿಸಲು ಕಾದಂಬರಿಕಾರ ಎಸ್.ಎಲ್.ಭೈರಪ್ಪ, ಆರ್‌ಎಸ್ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಮುಖಂಡರಾದ ಸು.ರಾಮಣ್ಣ, ಕಲ್ಲಡ್ಕ ಪ್ರಭಾಕರ್ ಭಟ್, ಸಂಸದ ಪ್ರತಾಪ್‌ಸಿಂಹ ಸೇರಿದಂತೆ ಯಾರನ್ನು ಬೇಕಾದರೂ ಕರೆ ತರಲಿ. ಬಹಿರಂಗ ಚರ್ಚೆಗೆ ನಾವು ಸಿದ್ಧ ಎಂದು ಹೇಳಿದರು.

ಹಿಂದುಗಳಂತೆ ಲಿಂಗಾಯತರು ಶಿವನ ಸ್ಥಾವರ ಲಿಂಗ ಆರಾಧಕರಲ್ಲ, ಇಷ್ಟಲಿಂಗವೇ ಶಿವನೆಂದು ಲಿಂಗಾಯತರು ಪೂಜಿಸುತ್ತಾರೆ. ಈ ವಿಚಾರ ಪೇಜಾವರ ಸ್ವಾಮೀಜಿಗಳಿಗೆ ಗೊತ್ತಿಲ್ಲ ಎಂದಲ್ಲ. ಅವರಿಗೆ ಎಲ್ಲವೂ ಗೊತ್ತಿದೆ. ಆದರೂ, ಲಿಂಗಾಯತ ಧರ್ಮ ವನ್ನು ಪ್ರಶ್ನಿಸುತ್ತಿದ್ದಾರೆ. 1963ರಲ್ಲಿ ಸಿಖ್ ಧರ್ಮಕ್ಕೆ, 1993ರಲ್ಲಿ ಬೌದ್ಧರಿಗೆ ಹಾಗೂ 2014ರಲ್ಲಿ ಜೈನರಿಗೆ ಅಲ್ಪಸಂಖ್ಯಾತ ಧರ್ಮ ಸ್ಥಾನಮಾನ ಸಿಕ್ಕಾಗ ಸಂಘ ಪರಿವಾರ ಅಥವಾ ಬಿಜೆಪಿ ವಿರೋಧ ವ್ಯಕ್ತ ಮಾಡಲಿಲ್ಲ. ಅದೇ ಲಿಂಗಾಯತರು ಸ್ವತಂತ್ರ ಧರ್ಮಕ್ಕೆ ಹೋರಾಟ ಆರಂಭಿಸಿದಾಗ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.

12ನೇ ಶತಮಾನದಿಂದಲೇ ಲಿಂಗಾಯತರು ಹಿಂದು ಧರ್ಮದ ಭಾಗವಾಗಿಲ್ಲ. ಲಿಂಗಾಯತರು ಸ್ವತಂತ್ರ ಧರ್ಮವಾಗಿಯೇ ಬದುಕಿದ್ದಾರೆ. ಆದರೆ ಯಾವತ್ತಿಗೂ ಅವರು ದೇಶ ಭಕ್ತಿ ಸಾಬೀತುಪಡಿಸುವಲ್ಲಿ ಹಿಂದೆ ಬಿದ್ದಿಲ್ಲ. ವಿಜಯ ನಗರ ಸಾಮ್ರಾಜ್ಯದಿಂದ ಹಿಡಿದು ಶಿವಾಜಿ ಮಹಾರಾಜನಿಗೆ ಆಶ್ರಯ ನೀಡಿದ ಕೆಳದಿ ಸಂಸ್ಥಾನದವರೆಗೂ ಲಿಂಗಾಯತರ ದೇಶಭಕ್ತಿ ಪ್ರಶ್ನಾತೀತ ಎಂದರು.

ಲಿಂಗಾಯತರು ಆರಾಧಿಸುವ ಶಿವನು ಅಗಮ್ಯ, ಅಗೋಚರ ಮತ್ತು ನಿರಾಕಾರನಾಗಿದ್ದು, ಶಿವನನ್ನು ಇಷ್ಟಲಿಂಗವೆಂದು ಮೈಮೇಲೆ ಧರಿಸಿಕೊಳ್ಳುತ್ತಾರೆ. ಆದರೆ ಆಗಮಗಳಲ್ಲಿ ಬರುವ ಶಿವನು ಸಾಕಾರನೂ, ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿಕೊಳ್ಳುವವನೂ ಆಗಿದ್ದಾನೆ. ಲಿಂಗಾಯತರು ಸ್ಥಾವರ ಪೂಜಕರಲ್ಲ. ಈ ಬಗ್ಗೆ ಪೇಜಾವರ ಸ್ವಾಮೀಜಿ ಆರ್‌ಎಸ್‌ಎಸ್ ಮುಖಂಡರೊಂದಿಗೆ ಚರ್ಚೆಗೆ ಬರಲಿ, ಸಮಯ ಮತ್ತು ದಿನಾಂಕ ಅವರೇ ನಿಗದಿಪಡಿಸಲಿ ಎಂದರು.

ಹಿಂದುಗಳು ನಂಬುವಂತೆ ಶಿವನು ತ್ರಿಮೂರ್ತಿಗಳಾದ ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಒಬ್ಬನು. ಲಿಂಗಾಯತರಿಗೆ ಶಿವನೊಬ್ಬನೇ ಸೃಷ್ಟಿಕರ್ತನು. ಲಿಂಗಪುರಾಣ, ಶಿವಪುರಾಣ, ವಾಯುಪುರಾಣ, ಸ್ಕಂದ ಪುರಾಣಗಳಲ್ಲಿ ತ್ರಿಮೂರ್ತಿ ಶಿವನ ಕಲ್ಪನೆ ಇದ್ದರೂ ಅವು ಪುರಾಣಗಳು. ಪುರಾಣಗಳನ್ನು ಲಿಂಗಾಯತರು ಒಪ್ಪುವುದಿಲ್ಲ. ಆದ್ದರಿಂದಲೇ ಶರಣರು ‘ಪುರಾಣಗಳು ಪುಂಡರ ಗೋಷ್ಠಿ’ ಎಂದು ಕರೆದಿದ್ದಾರೆ. ಹಿಂದುಗಳ ಹಳೆಯ ಮೂರು

ವೇದಗಳಾದ ಋಗ್ವೇದ, ಸಾಮವೇದ ಹಾಗೂ ಅಥರ್ವಣ ವೇದಗಳಲ್ಲಿ ಶಿವನ ಹೆಸರೇ ಇಲ್ಲ. ಅಲ್ಲಿರುವ ರುದ್ರನೇ ಶಿವನೆಂದು ನಂಬುವುದು ನಂತರದ ಕಲ್ಪನೆ ಮಾತ್ರ. ಯಜುರ್ವೇದದಲ್ಲಿ ಬರುವ ಶಿವನು ಹಿಂದುಗಳು ಸ್ವೀಕರಿಸಿದ ಸ್ಥಾವರ ಶಿವನಾಗಿದ್ದಾನೆ. ಲಿಂಗಾಯತರು ವೇದಗಳನ್ನೇ ಒಪ್ಪುವುದಿಲ್ಲ. ಅದಕ್ಕಾಗಿಯೇ ‘ವೇದಗಳನ್ನು ಒರೆಗೆ ಹಚ್ಚುವೆ, ಮಾದಾರ ಚೆನ್ನಯ್ಯನ ಮನೆಯಲ್ಲಿ ಉಂಡನಾಗಿ ವೇದ ಗಡ ಗಡ ನಡುಗಿತ್ತು’ ಎಂದು

ಬಸವಣ್ಣ ಹೇಳಿರುವುದಾಗಿ ವಿಶ್ಲೇಷಿಸಿದರು.

ಲಿಂಗಾಯತರಿಗೆ ಶಿವನೊಬ್ಬನೇ ದೇವರು. ಆಗ ಮಗಳಲ್ಲಿ ಬರುವ ಶಿವನು ಆಗಮಿಕ ಶಿವನಾಗಿದ್ದಾನೆ. ಆದರೆ ಲಿಂಗಾಯತರು ಆಗಮಗಳನ್ನು ನಂಬುವುದಿಲ್ಲ. ಅದಕ್ಕಾಗಿಯೇ ಬಸವಣ್ಣನವರು, ‘ಆಗಮದ ಮೂಗು ಕೊಯ್ಯುವೆ’ ಎಂದಿದ್ದಾರೆ. ಲಿಂಗಾಯತರ ಶಿವನು ಕೈಲಾಸದಲ್ಲಿ ಇಲ್ಲ. ಕೈಲಾಸವು ಸ್ವರ್ಗವಲ್ಲ. ಲಿಂಗಾಯತರಿಗೆ ಸ್ವರ್ಗ-ನರಕಗಳಿಲ್ಲ. ಜನ್ಮ- ಪುನರ್ಜನ್ಮಗಳಲ್ಲಿ ನಂಬಿಕೆ ಇಲ್ಲ. ಅದಕ್ಕಾಗಿಯೇ ಲಿಂಗಾಯತರು ಸತ್ತಾಗ ಲಿಂಗೈಕ್ಯರಾಗುತ್ತಾರೆ. ಕೈಲಾಸವಾಸಿಗಳಾಗುವುದಿಲ್ಲ. ಹಿಂದುಗಳಂತೆ ದಕ್ಷ ಬ್ರಹ್ಮನ ಯಜ್ಞ, ಶಿವನ ತಾಂಡವ ನೃತ್ಯ, ಯಾಗಾದಿ, ಹೋಮ-ಹವನ, ಮಡಿ-ಮೈಲಿಗೆ, ಮುಹೂರ್ತ- ಸುಮುಹೂರ್ತಗಳನ್ನು ಲಿಂಗಾಯತರು ನಂಬುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಸಮಿತಿಯ ಸಂಚಾಲಕರಾದ ಜಿ.ಬಿ.ಪಾಟೀಲ್, ಡಾ.ಜಯಣ್ಣ ಮತ್ತಿತರರಿದ್ದರು

Latest Videos
Follow Us:
Download App:
  • android
  • ios