45000 ಸಿಬ್ಬಂದಿಗೆ ಹೊಸ ಹೆಸರು | ಲೈನ್‌ಮ್ಯಾನ್‌ಗಳ ಬೇಡಿಕೆ ಈಡೇರಿಕೆ | ಎಂಜಿನಿಯರ್‌ಗಳು, ಪವರ್‌ಮ್ಯಾನ್‌ಗಳಿಗೆ 28ಕ್ಕೆ ‘ಪವರ್ ಅವಾರ್ಡ್’

ಬೆಂಗಳೂರು : ವಿದ್ಯುತ್ ಇಲಾಖೆ ಅಸ್ತಿತ್ವಕ್ಕೆ ಬಂದಾಗಿನಿಂದ ಸೇವೆ ಸಲ್ಲಿಸುತ್ತಿರುವ ಲೈನ್‌ಮ್ಯಾನ್‌ಗಳ ಹೆಸರು ಇನ್ನು ಮುಂದೆ ‘ಪವರ್ ಮ್ಯಾನ್’ ಆಗಲಿದೆ. ತಮ್ಮ ಹುದ್ದೆಯ ಹೆಸರನ್ನು ಬದಲಾವಣೆ ಮಾಡಬೇಕೆಂದು ಲೈನ್‌ಮನ್‌ಗಳು ಅನೇಕ ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಈವರೆಗೆ ಈಡೇರಿರಲಿಲ್ಲ.

ಸಾರ್ವಜನಿಕರೂ ಸೇರಿದಂತೆ ವಿವಿಧ ವಲಯದಿಂದ ಬಂದ ಸಲಹೆಯ ಮೇಲೆ ಇನ್ನು ಮುಂದೆ ಲೈನ್‌ಮನ್ ಆಗಿ ಸೇವೆ ಸಲ್ಲಿಸುವವರ ಹೆಸರನ್ನು ಪವರ್ ಮ್ಯಾನ್ ಎಂದು ಬದಲಾವಣೆ ಮಾಡಲು ನಿರ್ಧರಿಸಲಾಗಿದೆ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಬ್ರಿಟಿಷರ ಕಾಲದಿಂದಲೂ ತಳ ಸ್ತರದಲ್ಲಿ ಇಂಧನ ಇಲಾಖೆಯಲ್ಲಿ ಕೆಲಸ ಮಾಡುತ್ತಿರುವ ಇವರ ಸೇವೆಯನ್ನು ಗುರುತಿಸಿ, ಸ್ಥಾನಮಾನ ಹೆಚ್ಚಿಸುವ ಉದ್ದೇಶದಿಂದ 45 ಸಾವಿರ ಲೈನ್‌ಮ್ಯಾನ್‌ಗಳನ್ನು ‘ಪವರ್ ಮ್ಯಾನ್’ ಎಂದು ಕರೆಯಲಾಗುವುದೆಂದು ಸಚಿವರು ಹೇಳಿದರು.

ಪವರ್ ಅವಾರ್ಡ್: ಎಂಜಿನಿಯರ್‌ಗಳು, ಲೈನ್‌ಮ್ಯಾನ್’ಗಳು ಸೇರಿದಂತೆ ಇಂಧನ ಇಲಾಖೆಯ ಏಳು ಹುದ್ದೆಗಳ 174 ಮಂದಿಗೆ 2017ನೇ ಸಾಲಿನ ‘ ಪವರ್ ಅವಾರ್ಡ್’ನ್ನು ಅಕ್ಟೋಬರ್ 28ರಂದು ಸಂಜೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು ಎಂದು ಶಿವಕುಮಾರ್ ತಿಳಿಸಿದರು