ವಿಯೇಟ್ನಾಂನಂತೆ ಭಾರತದಲ್ಲಿಯೂ ಕೂಡ ಗೋಲ್ಡನ್ ಬ್ರಿಡ್ಜ್ ನಿರ್ಮಾಣ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. 

ನವದೆಹಲಿ: ಸೇತುವೆಗಳನ್ನು ಕೇವಲ ಉಪಯೋಗದ ದೃಷ್ಟಿಯಿಂದ ನಿರ್ಮಿಸುವ ಬದಲು ಅದನ್ನು ಪ್ರವಾಸಿ ಆಕರ್ಷಣೆಗಾಗಿಯೂ ನಿರ್ಮಿಸಬಹುದು. 

ಹೌದು, ವಿಯೆಟ್ನಾಂನಲ್ಲಿ ನಿರ್ಮಾಣಗೊಂಡಿರುವ ‘ಸ್ವರ್ಣ ಸೇತುವೆ’ಯ ಮಾದರಿಯಲ್ಲಿ ಭಾರತದಲ್ಲೂ ಪ್ರವಾಸಿ ಉದ್ದೇಶದ ಸಾಂಪ್ರದಾಯಿಕ ಶೈಲಿಯ ಸೇತುವೆಗಳನ್ನು ನಿರ್ಮಿಸಲು ಕೆಂದ್ರ ಸರ್ಕಾರ ಚಿಂತಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.

150 ಮೀಟರ್‌ ಉದ್ದದ ಪಾದಾಚಾರಿ ಸೇತುವೆಯೊಂದನ್ನು ವಿಯೆಟ್ನಾಂನ ಡ ನಂಗ್‌ನ ಬನ ಹಿಲ್ಸ್‌ ರೆಸಾರ್ಟ್‌ನಲ್ಲಿ ಜೂನ್‌ನಲ್ಲಿ ಲೋಕಾರ್ಪಣೆ ಮಾಡಲಾಗಿದೆ. ಈಗ ಇದು ಜಗತ್ತಿನಾದ್ಯಂತದ ಪ್ರವಾಸಿಗರನ್ನು ಸೆಳೆಯುತ್ತಿದೆ. ಸೇತುವೆಯನ್ನು ಕೈಗಳು ಎತ್ತಿಹಿಡಿದಂತಿದ್ದು, ಈ ಕೈಗಳ ಕೆತ್ತನೆಯಲ್ಲಿ ಮೂಡಿಸಿರುವ ಬಿರುಕುಗಳು ಅದೊಂದು ಪುರಾತನ ಕಲ್ಲಿನ ಕೆತ್ತನೆಯಂತೆ ಭಾಸವಾಗುತ್ತದೆ.

ಜಾಗತಿಕ ಪ್ರವಾಸಿಗರನ್ನು ಆಕರ್ಷಿಸಲು ಇಂತಹುದೇ ವಿನ್ಯಾಸದ ಸೇತುವೆಯನ್ನು ನಿರ್ಮಿಸಬಹುದೇ ಎಂದು ಸರ್ಕಾರ ಪರಿಶೀಲಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸೇತುವೆಗಳನ್ನು ಆಕರ್ಷಕ ಲೈಟಿಂಗ್ಸ್‌ ವ್ಯವಸ್ಥೆಯ ಮೂಲಕ ನಿರ್ಮಿಸಲಾಗುತ್ತಿದೆ. ರಾಮೇಶ್ವರಮ್‌ನಲ್ಲಿ 1.5 ಕಿ.ಮೀ. ಉದ್ದದ ದೇವಸ್ಥಾನಗಳ ವಿನ್ಯಾಸದ ಸೇತುವೆ ನಿರ್ಮಿಸುವ ಪ್ರಸ್ತಾಪವಿದೆ ಎಂದು ಎನ್‌ಎಚ್‌ಎಐ ಮೂಲಗಳು ತಿಳಿಸಿವೆ.