ಬೆಂಗಳೂರು[ಆ.24]: ಬಿಜೆಪಿ ರಾಜ್ಯಾಧ್ಯಕ್ಷರನ್ನಾಗಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರ ಹೆಸರನ್ನು ದಿಢೀರನೆ ಘೋಷಿಸಿದ ಮಾದರಿಯಲ್ಲೇ ಪಕ್ಷದ ನೂತನ ರಾಜ್ಯ ಪದಾಧಿಕಾರಿಗಳ ಪಟ್ಟಿಯನ್ನೂ ಪ್ರಕಟಿಸುವ ಸಾಧ್ಯತೆಯಿದೆ.

ಕಟೀಲ್‌ ಅವರು ಭಾನುವಾರ ಬೆಳಗ್ಗೆ ಪಕ್ಷದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿದ್ದು, ಹಾಲಿ ಅಧ್ಯಕ್ಷರಾಗಿರುವ ಬಿ.ಎಸ್‌.ಯಡಿಯೂರಪ್ಪ ಅವರು ಅಧಿಕಾರ ಹಸ್ತಾಂತರಿಸಲಿದ್ದಾರೆ. ಅದೇ ದಿನ ಮಧ್ಯಾಹ್ನ ಈಗಿರುವ ಹಾಲಿ ಪದಾಧಿಕಾರಿಗಳ ಸಭೆ ಕರೆದು ಬರ್ಖಾಸ್ತು ಮಾಡುವ ನಿರೀಕ್ಷೆಯಿದೆ.

ನೂತನ ಪದಾಧಿಕಾರಿಗಳ ನೇಮಕಕ್ಕೆ ಹೆಚ್ಚು ವಿಳಂಬ ಮಾಡದೆ ಆದಷ್ಟುಶೀಘ್ರ ಪಟ್ಟಿಬಿಡುಗಡೆ ಮಾಡಲು ಬಿಜೆಪಿ ವರಿಷ್ಠರು ಹಾಗೂ ಸಂಘ ಪರಿವಾರದ ಮುಖಂಡರು ಚಿಂತನೆ ನಡೆಸಿದ್ದಾರೆ. ಜೊತೆಗೆ ಈ ಪದಾಧಿಕಾರಿಗಳ ನೇಮಕದಲ್ಲಿ ಸಂಘ ಪರಿವಾರದ ಮೂಲದವರಿಗೆ ಹೆಚ್ಚಿನ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ಮಂಗಳವಾರ ಬೆಳಗ್ಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದ ಸರ್ಕಾರದ ಮೊದಲ ಹಂತದ ಸಂಪುಟ ವಿಸ್ತರಣೆ ನಡೆದ ಬೆನ್ನಲ್ಲೇ ಅದೇ ದಿನ ರಾತ್ರಿ ದೆಹಲಿಯಿಂದ ನಳಿನ್‌ ಕುಮಾರ್‌ ಅವರನ್ನು ನೂತನ ರಾಜ್ಯಾಧ್ಯಕ್ಷರನ್ನಾಗಿ ಪಕ್ಷದ ಹೈಕಮಾಂಡ್‌ ಘೋಷಣೆ ಮಾಡಿತ್ತು. ಇದರಿಂದಾಗಿ ರಾಜ್ಯದ ನಾಯಕರಿಗೆ ಅಧ್ಯಕ್ಷಗಿರಿಗಾಗಿ ಲಾಬಿ ಮಾಡಲು ಅವಕಾಶವೇ ಸಿಗದಂತಾಗಿತ್ತು.

ಈಗಲೂ ಅಷ್ಟೆ. ರಾಜ್ಯ ಪದಾಧಿಕಾರಿಗಳ ನೇಮಕದಲ್ಲಿ ರಾಜ್ಯ ನಾಯಕರಿಗೆ ಲಾಬಿ ಮಾಡಲು ಅವಕಾಶ ಸಿಗಬಾರದು ಎಂಬ ಉದ್ದೇಶದಿಂದ ನೂತನ ಅಧ್ಯಕ್ಷರ ಅಧಿಕಾರ ಸ್ವೀಕಾರ ಬೆನ್ನಲ್ಲೇ ಪದಾಧಿಕಾರಿಗಳನ್ನೂ ನೇಮಕ ಮಾಡಲು ನಿರ್ಧರಿಸಲಾಗಿದೆ. ಈಗಾಗಲೇ ಹೆಚ್ಚೂಕಡಿಮೆ ಪಟ್ಟಿಯೂ ಸಿದ್ಧವಾಗಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.

ಸರ್ಕಾರ ರಚನೆ ಪ್ರಕ್ರಿಯೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಅಂದುಕೊಂಡಷ್ಟುವೇಗವಾಗಿ ನಡೆದಿಲ್ಲ. ಹೀಗಾಗಿ, ನೂತನ ಅಧ್ಯಕ್ಷರ ನೇತೃತ್ವದಲ್ಲಿ ಹೊಸ ಪದಾಧಿಕಾರಿಗಳನ್ನು ಮುಂದಿಟ್ಟುಕೊಂಡು ಸದಸ್ಯತ್ವ ಅಭಿಯಾನ ಮತ್ತು ಪಕ್ಷ ಸಂಘಟನೆ ತೀವ್ರಗೊಳಿಸುವ ಆಲೋಚನೆ ವರಿಷ್ಠರಲ್ಲಿದೆ.