ಬ್ಯಾಂಕುಗಳಿಂದ ಪಡೆದ ಸಹಸ್ರಾರು ಕೋಟಿ ರು. ಸಾಲ ಮರುಪಾವತಿಸಲು ಆಗದೇ ಲಂಡನ್‌ಗೆ ಪರಾರಿಯಾಗಿರುವ ‘ಮದ್ಯದ ದೊರೆ’ ವಿಜಯ್ ಮಲ್ಯ, ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜೈಲುಗಳ ಬಗ್ಗೆಯೇ ಗೂಬೆ ಕೂರಿಸಿದ್ದಾರೆ.
ನವದೆಹಲಿ: ಬ್ಯಾಂಕುಗಳಿಂದ ಪಡೆದ ಸಹಸ್ರಾರು ಕೋಟಿ ರು. ಸಾಲ ಮರುಪಾವತಿಸಲು ಆಗದೇ ಲಂಡನ್ಗೆ ಪರಾರಿಯಾಗಿರುವ ‘ಮದ್ಯದ ದೊರೆ’ ವಿಜಯ್ ಮಲ್ಯ, ಭಾರತಕ್ಕೆ ಗಡೀಪಾರಾಗುವುದರಿಂದ ತಪ್ಪಿಸಿಕೊಳ್ಳಲು ಇಲ್ಲಿನ ಜೈಲುಗಳ ಬಗ್ಗೆಯೇ ಗೂಬೆ ಕೂರಿಸಿದ್ದಾರೆ.
ಜೂ.23ರಂದು ಮುಂಬೈನ ಬೈಕುಲ್ಲಾ ಜೈಲಿನಲ್ಲಿ ಮಹಿಳಾ ಕೈದಿ ಮಂಜುಳಾ ಶೇಟ್ಯೆ ಎಂಬಾಕೆಯನ್ನು ಜೈಲಿನ ಸಿಬ್ಬಂದಿಯೇ ಹತ್ಯೆ ಮಾಡಿದ್ದಾರೆ. ಇದು ಭಾರತದ ಜೈಲುಗಳಲ್ಲಿನ ವಾಸ್ತವ ದರ್ಶನ ಮಾಡಿಸುತ್ತದೆ. ಹೀಗಾಗಿ ತನ್ನನ್ನು ಭಾರತಕ್ಕೆ ಗಡೀಪಾರು ಮಾಡಬಾರದು. ಒಂದು ವೇಳೆ ಗಡೀಪಾರು ಮಾಡಿದರೆ ಜೀವಕ್ಕೆ ಅಪಾಯವಿದೆ ಎಂದು ಲಂಡನ್’ನ ವೆಸ್ಟ್ಮಿನಿಸ್ಟರ್ ಕೋರ್ಟಿಗೆ ಆತಂಕ ವ್ಯಕ್ತಪಡಿಸಿದ್ದಾರೆ.
ಆದರೆ ಮಲ್ಯ ಅವರ ಈ ಕುಂಟುನೆಪಕ್ಕೆ ಸೂಕ್ತ ಪ್ರತಿಕ್ರಿಯೆಯನ್ನು ಭಾರತೀಯ ಅಧಿಕಾರಿಗಳು ಸಲ್ಲಿಸಿದ್ದಾರೆ ಎಂದು ಮಾಧ್ಯಮ ವರದಿ ಹೇಳಿದೆ. ಮಲ್ಯರನ್ನು ಲಂಡನ್ನಿಂದ ಗಡೀಪಾರು ಮಾಡಿಸಿಕೊಂಡು ಬರಲು ಶ್ರಮಿಸುತ್ತಿರುವ ಅಧಿಕಾರಿಗಳಿಗೆ ಈಗ ಹೊಸದೊಂದು ತಲೆನೋವು ಎದುರಾಗಿದೆ. ನ.21ರಂದು ತಿಹಾರ್ ಜೈಲಿನಲ್ಲಿ 18 ಕೈದಿಗಳನ್ನು ಜೈಲು ಸಿಬ್ಬಂದಿ ಅತ್ಯಂತ ಕ್ರೂರವಾಗಿ ಥಳಿಸಿದ್ದರು.
ಮುಂದಿನ ವಾರ ಮಲ್ಯ ಗಡೀಪಾರು ಅರ್ಜಿ ವೆಸ್ಟ್’ಮಿನಿಸ್ಟರ್ ಕೋರ್ಟ್ನಲ್ಲಿ ವಿಚಾರಣೆಗೆ ಬರಲಿದೆ. ಆ ಸಂದರ್ಭದಲ್ಲಿ ಮಲ್ಯ ಅವರು ತಿಹಾರ್ ಜೈಲಿನ ಪ್ರಕರಣವನ್ನು ಗಡೀಪಾರು ವಿರೋಧಕ್ಕೆ ಪ್ರಮುಖವಾಗಿ ಬಳಸಿಕೊಳ್ಳಬಹುದು ಎಂಬ ಆತಂಕ ಆ ಅಧಿಕಾರಿಗಳದ್ದಾಗಿದೆ.
2000ರಲ್ಲಿ ಬೆಳಕಿಗೆ ಬಂದಿದ್ದ ಮ್ಯಾಚ್ ಫಿಕ್ಸಿಂಗ್ ಹಗರಣದಲ್ಲಿ ಸಂಜೀವ್ ಚಾವ್ಲಾ ಎಂಬಾತ ಭಾರತೀಯ ತನಿಖಾಧಿಕಾರಿಗಳಿಗೆ ಬೇಕಾಗಿದ್ದ. ಆತನ ಗಡೀಪಾರಿಗೆ ಅಧಿಕಾರಿಗಳು ಸಲ್ಲಿಸಿದ್ದ ಅರ್ಜಿಯನ್ನು ತಿಹಾರ್ ಜೈಲು ಕಳಪೆಯಾಗಿದೆ ಎಂಬ ಕಾರಣ ಮುಂದೊಡ್ಡಿ ಇದೇ ವೆಸ್ಟ್ ಮಿನಿಸ್ಟರ್ ಕೋರ್ಟ್ ಇತ್ತೀಚೆಗೆ ತಿರಸ್ಕರಿಸಿತ್ತು.
