Asianet Suvarna News Asianet Suvarna News

ಕುಕ್ಕೆ ಸುಬ್ರ​ಹ್ಮ​ಣ್ಯ: ಕುಮಾರಧಾರ ನದಿ ದಡದಲ್ಲಿ ​ಇನ್ನು ಜೀವ ರಕ್ಷಕರ ಸೇವೆ

ಸುಬ್ರಹ್ಮಣ್ಯದ 10 ಜನ ಯುವಕರನ್ನು ಒಳಗೊಂಡ ತಂಡವಿದು | ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ತುರ್ತು ಸಂದರ್ಭದಲ್ಲಿ ಕಾರ್ಯಾಚರಣೆ

Life Guard Service At Kukke Subramanya Launched

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ): ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಂದ ಭಕ್ತರು ಕುಮಾರಧಾರ ನದಿಯಲ್ಲಿ ತೀರ್ಥ ಸ್ನಾನ ಮಾಡಲು ತೆರಳಿದಾಗ ನದಿ ಕಿನಾರೆಯಲ್ಲಿ ಸಂಭವಿಸಬಹುದಾದ ಆಕಸ್ಮಿಕ ಅವಘಡಗಳನ್ನು ತಪ್ಪಿಸಲು ರಕ್ಷಣಾ ತಂಡವನ್ನು ನಿಯೋಜಿಸಲಾಗಿದೆ. ಸುಬ್ರಹ್ಮಣ್ಯದ 10 ಜನ ಯುವಕರನ್ನು ಒಳಗೊಂಡ ತಂಡ ಈ ಕಾರ್ಯಕ್ಕೆ ತಯಾರಾಗಿದೆ. 

ಸುಬ್ರಹ್ಮಣ್ಯ ಠಾಣಾಧಿಕಾರಿ ಗೋಪಾಲ್‌ ಮಂಗಳವಾರ ಸಂಜೆ ರಕ್ಷಣಾ ತಂಡದ ಕಾರ್ಯಾಚರಣೆಗೆ ಚಾಲನೆ ನೀಡಿದರು. ಕುಮಾರಧಾರ ನದಿಯಲ್ಲಿ ಮಳೆಗಾಲ ಮಾತ್ರವಲ್ಲದೇ ಇತರ ಸಮಯದಲ್ಲಿ ಕೂಡಾ ಸಂಭವಿಸುವ ಆಕಸ್ಮಿಕ ಅವಘಡ ತಪ್ಪಿಸಲು ನುರಿತ ಈಜುಗಾರ ಸ್ಥಳೀಯ ಯುವಕರನ್ನು ಸುಬ್ರಹ್ಮಣ್ಯ ಠಾಣಾಧಿಕಾರಿಗಳು ಆಯ್ಕೆ ಮಾಡಿದ್ದಾರೆ.

ಪೊಲೀಸ್‌ ಇಲಾಖೆಯ ಆಶ್ರಯದಲ್ಲಿ ತುರ್ತು ಸಂದರ್ಭದಲ್ಲಿ ತಕ್ಷಣ ಕಾರ್ಯಾಚರಣೆ ಮಾಡಿ ನದಿ ನೀರಿನಲ್ಲಿ ಮುಳುಗುತ್ತಿದ್ದವರನ್ನು ರಕ್ಷಿಸಲು ಈ ತಂಡವನ್ನು ರಚಿಸಲಾಗಿದೆ. ತಂಡದ ಸದಸ್ಯರಿಗೆ ಇಲಾಖಾ ವತಿಯಿಂದ 9 ಲೈಫ್‌ ಜಾಕೆಟ್‌ ಮತ್ತು ಸೇಫ್‌ ಜಾಕೆಟ್‌ ಹಾಗೂ 2 ಪೈಬರ್‌ ಟಯರ್‌ ನೀಡಲಾಗಿದೆ. 

ರವಿ ಕಕ್ಕೆಪದವು, ದಯಾನಂದ ದೋಣಿಮನೆ, ಉದಯ ಕುಮಾರ್‌ ಶೆಟ್ಟಿ, ಶಿವಕುಮಾರ್‌ ಪರ್ವತಮುಖಿ, ಪವನ್‌ ಎಂ.ಡಿ, ಮೋಹನ್‌ ಹೊಸೋಳಿಕೆ, ಗಿರೀಶ್‌ ಹೊಸೋಳಿಕೆ, ಚಿದಾನಂದ ದೋಣಿಮಕ್ಕಿ, ಕುಶಾಲಪ್ಪ ಪರ್ವತಮುಖಿ, ಪ್ರಸಾದ್‌ ರೈ ಕೆ. ರಕ್ಷಣಾ ತಂಡದಲ್ಲಿರುವ ಸದಸ್ಯರು.

ರಕ್ಷಣಾ ತಂಡವು ಕುಮಾರಧಾರ ಸ್ನಾನ ಘಟ್ಟದ ಪರಿಸರದಲ್ಲಿ ಮಂಗಳವಾರ ಅಣಕು ಕಾರ್ಯಾಚರಣೆ ಮಾಡಿತು. ಗ್ರಾ.ಪಂ.ಸದಸ್ಯ ಮೋಹನದಾಸ ರೈ, ಭಾರತೀಯ ಜೇಸಿಸ್‌ನ ರಾಷ್ಟ್ರೀಯ ನಿರ್ದೇಶಕ ಚಂದ್ರಶೇಖರ್‌ ನಾಯರ್‌, ಪೊಲೀಸ್‌ ಸಿಬ್ಬಂದಿ ನಾರಾಯಣ ಪಾಟಾಳಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು. 

ಕೃಪೆ:  ಕನ್ನಡಪ್ರಭ

Follow Us:
Download App:
  • android
  • ios