ಸಾಮಾಜಿಕ ಜಾಲತಾಣಗಳನ್ನು ಬಳಸುವ ವಿಚಾರವಾಗಿ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ನಡುವೆ ಸಮರ ಶುರುವಾಗಿದೆ.
ಪುದುಚೇರಿ (ಜ.05): ಸಾಮಾಜಿಕ ಜಾಲತಾಣಗಳನ್ನು ಬಳಸುವ ವಿಚಾರವಾಗಿ ರಾಜ್ಯಪಾಲ ಹಾಗೂ ಮುಖ್ಯಮಂತ್ರಿ ನಡುವೆ ಸಮರ ಶುರುವಾಗಿದೆ.
ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಮತ್ತು ಮುಖ್ಯಮಂತ್ರಿ ವಿ. ನಾರಾಯಣಸಾಮಿ ರಾಜಕೀಯವಾಗಿ ಮುಖಾಮುಖಿಯಾಗಿದ್ದಾರೆ.
ಆಡಳಿತ ವಿಚಾರ ಕೆಲಸಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಬಳಸಬಾರದು ಎಂದು ನಾರಾಯಣ ಸಾಮಿ ಹೊರಡಿಸಿರುವ ಸುತ್ತೋಲೆಯನ್ನು ಕಿರಣ್ ಬೇಡಿ ರದ್ದುಗೊಳಿಸಿದ್ದಾರೆ. ಜ.3 ರಂದು ಪುದುಚೆರಿ ಸರ್ಕಾರ ಆಡಳಿತದ ವಿಚಾರಕ್ಕೆ ಸಾಮಾಜಿಕ ಮಾಧ್ಯಮವನ್ನು ಬಳಸುವುದನ್ನು ನಿಷೇಧಿಸಿತ್ತು.
ಸರ್ಕಾರಿ ಇಲಾಖೆಗಳು ಜಾರಿಗೊಳಿಸುವ ವಿವಿಧ ಯೋಜನೆಗಳ ಬಗೆಗಿನ ವಿವರವನ್ನು ಮತ್ತು ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು ಕಿರಣ್ ಬೇಡಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡಿದ್ದರು. ವಾಟ್ಸಾಪ್, ಟ್ವಿಟರ್ ಹಾಗೂ ಫೇಸ್ ಬುಕ್ ನ್ನು ಮಾಹಿತಿ ವಿನಿಮಯ ಮಾಡಿಕೊಳ್ಳಲು ಬಳಸಬಾರದು ಎಂದು ಎಲ್ಲಾ ಸರ್ಕಾರಿ ಅಧಿಕಾರಿಗಳಿಗೆ, ಇಲಾಖೆ ಮುಖ್ಯಸ್ಥರಿಗೆ, ಸಿಬ್ಬಂದಿಗಳಿಗೆ ಸೂಚನೆ ನೀಡಿತ್ತು.
ಸಾಮಾಜಿಕ ಜಾಲತಾಣದ ಕೆಲ ಕಂಪನಿಗಳು ವಿದೇಶ ಆಧಾರಿತವಾಗಿದೆ. ಅವು ನಮ್ಮ ಗೌಪ್ಯ ಮಾಹಿತಿಯನ್ನು ಸುಲಭವಾಗಿ ಪಡೆಯುವ ಸಾಧ್ಯತೆಗಳಿರುತ್ತದೆ. ಕೇಂದ್ರೀಯ ಮಾಹಿತಿ ತಂತ್ರಜ್ಞಾನ ಸಚಿವಾಲಯದ ನಿಯಮವನ್ನು ಉಲ್ಲಂಘನೆ ಮಾಡಿದಂತಾಗುತ್ತದೆ ಎಂದು ಸರ್ಕಾರ ಸಮರ್ಥಿಸಿಕೊಂಡಿದೆ.
