Asianet Suvarna News Asianet Suvarna News

ಅನಾಥರಿಗೂ ಒಬಿಸಿ ಪಟ್ಟಿಯಲ್ಲಿ ಸ್ಥಾನ ನೀಡಲು ಶಿಫಾರಸು

Let O in OBC stand for orphans too says NCBC panel

ನವದೆಹಲಿ(ಸೆ.23): ಇತರೆ ಹಿಂದುಳಿದ ವರ್ಗ(ಒಬಿಸಿ) ಗಳ ಪಟ್ಟಿಜಾತಿಗಳಿಗಷ್ಟೇ ಸೀಮಿತವಾಗಿತ್ತು. ಆದರೆ, ಇದರಲ್ಲಿ ‘ಒ’ ಅಂದರೆ ಇತರೆ ಹಿಂದುಳಿದವರ ಸಾಲಿಗೆ ಅನಾಥ ನಿರ್ಗತಿಕ ಮಕ್ಕಳನ್ನೂ ಸೇರ್ಪಡೆ ಮಾಡುವಂತೆ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ(ಎನ್‌ಸಿಬಿಸಿ) ಆಗ್ರಹಿಸಿದೆ. ಈ ಸಂಬಂಧ ಎನ್‌ಸಿಬಿಸಿ ಮುಖ್ಯಸ್ಥ ವಿ.ಈಶ್ವರಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಣಯವೊಂದನ್ನು ಕೈಗೊಳ್ಳಲಾಗಿದ್ದು, ಅದನ್ನು ಸರ್ಕಾರದ ಮುಂದಿಡಲಾಗಿದೆ.

ಒಂದು ವೇಳೆ ಆಯೋಗದ ಈ ಶಿಫಾರಸು ಜಾರಿಗೊಂಡದ್ದೇ ಆದಲ್ಲಿ, ಇದೇ ಮೊದಲ ಬಾರಿ ಜಾತಿ ಅಥವಾ ಸಮುದಾಯವನ್ನು ಹೊರತುಪಡಿಸಿದ ಗುಂಪೊಂದು ಒಬಿಸಿ ಪಟ್ಟಿಯಲ್ಲಿ ಸ್ಥಾನ ಪಡೆದಂತಾಗಲಿದೆ. ಆ ಮೂಲಕ ಸರ್ಕಾರಿ ಶಿಕ್ಷಣ, ಉದ್ಯೋಗಗಳಲ್ಲಿ ಅನಾಥ ನಿರ್ಗತಿಕ ಮಕ್ಕಳಿಗೂ ಶೇ.27ರಷ್ಟು ಮೀಸಲು ಹಾಗೂ ಇತರೆ ಸೌಲಭ್ಯ ಪಡೆಯಲು ಸಾಧ್ಯವಾಗಲಿದೆ.

ಎನ್‌ಸಿಬಿಸಿಯು ತನ್ನ ನಿರ್ಣಯದಲ್ಲಿ 10 ವರ್ಷದೊಳಗೆ ಹೆತ್ತವರನ್ನು ಕಳೆದುಕೊಂಡು ಸರ್ಕಾರಿ ಅನಾಥಾಶ್ರಮ ಅಥವಾ ಸರ್ಕಾರಿ/ ಅನುದಾನಿತ ಶಾಲೆಗಳಲ್ಲಿ ಶಿಕ್ಷಣ ಪಡೆಯುತ್ತಿರುವ ಹಾಗೂ ನಿರ್ಗತಿಕ ಮಕ್ಕಳನ್ನು ಒಬಿಸಿ ಪಟ್ಟಿಗೆ ಸೇರ್ಪಡೆ ಮಾಡುವಂತೆ ಶಿಫಾರಸು ಮಾಡಿದೆ.

‘ನಮ್ಮ ನಿರ್ಧಾರದ ಬಗ್ಗೆ ಸಾಮಾಜಿಕ ನ್ಯಾಯ ಸಚಿವಾಲಯದೊಂದಿಗೆ ಮಾತುಕತೆ ನಡೆಸಿದ್ದೇವೆ. ಅಂತಿಮವಾಗಿ ಸಚಿವಾಲಯವೇ ಈ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗಿದೆ. ಹಿಂದುಳಿದಿರುವಿಕೆಯನ್ನು ಗುರುತಿಸಲು ಜಾತಿಯೊಂದೇ ಮಾನದಂಡವಲ್ಲ ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ನೀಡಿರುವ ತೀರ್ಪನ್ನು ಗಮನದಲ್ಲಿಟ್ಟುಕೊಂಡು, ಈ ಪ್ರಸ್ತಾಪ ಮುಂದಿಡಲಾಗಿದೆ’’ ಎಂದು ಎನ್‌ಸಿಬಿಸಿ ಸದಸ್ಯ ಅಶೋಕ್‌ ಸೈನಿ ಹೇಳಿದ್ದಾರೆ.

Latest Videos
Follow Us:
Download App:
  • android
  • ios