ತಮಿಳಿನವರ ಒಗ್ಗಟ್ಟಿನ ಧೋರಣೆ ಕರುನಾಡಿಗರಿಗ್ಯಾಕಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ತಮಿಳರ ಒಗ್ಗಟ್ಟು ಮತ್ತು ಕರ್ನಾಟಕದವರ ಎಡವಟ್ಟುಗಳ ಪಾಯಿಂಟ್ಸ್ ಈ ಕೆಳಕಂಡಂತಿವೆ.
ಬೆಂಗಳೂರು(ಜ. 20): ಜಲ್ಲಿಕಟ್ಟು ವಿಚಾರದಲ್ಲಿ ಕೇಂದ್ರ ಸರಕಾರದಿಂದ ಸುಗ್ರೀವಾಜ್ಞೆಯನ್ನೇ ಹೊರಡಿಸುವ ಮಟ್ಟಕ್ಕೆ ತಮಿಳುನಾಡಿನ ಜನರು ಒಗ್ಗಟ್ಟಿನ ಪ್ರದರ್ಶನ ತೋರುತ್ತಿದ್ದಾರೆ. ಕಾವೇರಿ ವಿಷಯದಲ್ಲಿ ಕರ್ನಾಟಕಕ್ಕೆ ಅನ್ಯಾಯ ಆಗುತ್ತಿದ್ದರೂ ಕ್ಯಾರೇ ಅನ್ನದೇ ಬಿಗಿಪಟ್ಟು ಹಿಡಿದು ತನ್ನ ಬೇಳೆ ಬೇಯಿಸಿಕೊಳ್ಳುವ ತಮಿಳುನಾಡಿನಿಂದ ಕರ್ನಾಟಕ ಕಲಿಯಬೇಕಾದ ಪಾಠಗಳು ಬಹಳ ಇವೆ. ತಮಿಳಿನವರ ಒಗ್ಗಟ್ಟಿನ ಧೋರಣೆ ಕರುನಾಡಿಗರಿಗ್ಯಾಕಿಲ್ಲ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಈ ನಿಟ್ಟಿನಲ್ಲಿ ತಮಿಳರ ಒಗ್ಗಟ್ಟು ಮತ್ತು ಕರ್ನಾಟಕದವರ ಎಡವಟ್ಟುಗಳ ಪಾಯಿಂಟ್ಸ್ ಈ ಕೆಳಕಂಡಂತಿವೆ.
ತಮಿಳಿಗರ ಒಗ್ಗಟ್ಟು:
* ಜಲ್ಲಿಕಟ್ಟು ವಿಚಾರದಲ್ಲಿ ತಮಿಳುನಾಡಿನ ಶಕ್ತಿ ಪ್ರದರ್ಶನ; ಜಲ್ಲಿಕಟ್ಟು ಆಚರಣೆಗೆ ಪಟ್ಟು ಹಿಡಿದು ಹೋರಾಟಕ್ಕಿಳಿದ ಇಡೀ ತಮಿಳುನಾಡು
* ಸಂಪ್ರದಾಯ, ನಾಡು, ನುಡಿ ಮತ್ತು ಭಾಷೆ ವಿಚಾರದಲ್ಲಿ ತಮಿಳರ ಒಗ್ಗಟ್ಟು ಕಂಡು ಇಡೀ ದೇಶವೇ ಬೆಕ್ಕಸ ಬೆರಗಾಗಿದೆ. ಯಾವುದೇ ಹೋರಾಟವಿರಲಿ ಒಗ್ಗಟ್ಟಾಗಿ ಮುನ್ನುಗುವುದೇ ತಮಿಳರ ಶಕ್ತಿ
* ಜನರ ಒಳತಿಗಾಗಿ ಪಕ್ಷಾತೀತವಾಗಿ ಹೋರಾಟ ನಡೆಸುವ ತಮಿಳುನಾಡು ರಾಜಕಾರಣಿಗಳು; ಭಿನಾಭಿಪ್ರಾಯ ಮರೆತು ಒಟ್ಟಾಗಿ ಟೊಂಕ ಕಟ್ಟಿ ನಿಲ್ಲುವ ತಮಿಳುನಾಡು ಸಂಸದರು, ಶಾಸಕರು
* ತಮಿಳುನಾಡು ಸರ್ಕಾರವೂ ತಮ್ಮ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ಸದಾ ಮುಂದಿರುತ್ತದೆ
* ಯಾವುದೇ ರಾಜ್ಯ, ದೇಶದಲ್ಲಿರುವ ತಮಿಳು ಜನರ ಹಿತಾಸಕ್ತಿ ಕಾಪಾಡುವ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ
* ಶ್ರೀಲಂಕಾದಲ್ಲಿರುವ ತಮಿಳರು ಹಾಗೂ ಮಲೇಷಿಯಾದಲ್ಲಿನ ಅಲ್ಪಸಂಖ್ಯಾತ ತಮಿಳರ ಪರ ಹೋರಾಟಕ್ಕೆ ನಿಲ್ಲುವ ತಮಿಳುನಾಡು ಸರ್ಕಾರ
* ಶ್ರೀಲಂಕಾದಲ್ಲಿರುವ ತಮಿಳರ ಮೇಲಿನ ದೌರ್ಜನ್ಯ ಖಂಡಿಸಿ ಇಂದಿಗೂ ಪಕ್ಷಾತೀತವಾಗಿ ಹೋರಾಟ ನಡೆಸುವ ತಮಿಳು ರಾಜಕಾರಣಿಗಳು; ವಿಶ್ವಸಂಸ್ಥೆ ಮಾನವ ಹಕ್ಕುಗಳ ಸಮ್ಮೇಳನದಲ್ಲಿ ಶ್ರೀಲಂಕಾದ ವಿರುದ್ಧ ಮತ ಚಲಾಯಿಸಬೇಕು ಎಂದು ಒಕ್ಕೊರಲಿನಿಂದ ಒತ್ತಾಯಿಸಿದ್ದರು
* ಕಾವೇರಿ ನೀರು ಹಂಚಿಕೆ ವಿಷಯದಲ್ಲೂ ಸಂಸತ್ನಲ್ಲಿ ಪಕ್ಷಾತೀತವಾಗಿ ಹೋರಾಡುವ ಸಂಸದರು; ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವುದರಲ್ಲಿ ತಮಿಳುನಾಡು ಸಂಸದರು ಸದಾ ಮುಂದು
* ಒಗ್ಗಟ್ಟಾಗಿ ನಿಂತು ಕರ್ನಾಟಕಕ್ಕೆ ಸೆಡ್ಡು ಹೊಡೆಯುತ್ತಿರುವ ರಾಜಕಾರಣಿಗಳು
* ಜಲ್ಲಿಕಟ್ಟು ಆಚರಣೆ ವಿಚಾರದಲ್ಲೂ ಕೂಡ ತಮಿಳರ ಒಗ್ಗಟ್ಟು ಜಗಜ್ಜಾಹೀರಾಗಿದೆ; ಆಡಳಿತರೂಢ ಎಐಎಡಿಎಂಕೆ, ವಿಪಕ್ಷ ಡಿಎಂಕೆ, ಡಿಎಂಡಿಕೆ, ಪಿಎಂಕೆ, ಬಿಜೆಪಿ ಸೇರಿ ಎಲ್ಲರದ್ದೂ ಒಂದೇ ನಿಲುವು
* ಮೊದಲು ಸಂಸ್ಕೃತಿಗೆ ಅವಕಾಶ ನೀಡಿ ಬಳಿಕ ಕೋರ್ಟ್ ಆದೇಶ ಎನ್ನುತ್ತಿದ್ದಾರೆ ತಮಿಳರು; ಒಗ್ಗಟ್ಟಿನ ಹೋರಾಟದಿಂದ ಸುಪ್ರೀಂಕೋರ್ಟ್ ಆದೇಶವನ್ನೇ ಧಿಕ್ಕರಿಸಿ ನಿಂತಿದ್ದಾರೆ; ಸುಪ್ರೀಂಕೋರ್ಟ್ ಆದೇಶ ನ್ಯಾಯಾಂಗ ನಿಂದನೆಯಾದರೂ ಪರವಾಗಿಲ್ಲ ಅನ್ನೋ ದಾರ್ಷ್ಯ್ಟ ಮನೋಭಾವ ತಮಿಳರದ್ದು
* ಗಡಿ ಭಾಗದ ಶಾಲೆಗಳಲ್ಲೂ ತಮಿಳು ಭಾಷೆಗೆ ಮೊದಲ ಆದ್ಯತೆ, ಸ್ಥಳೀಯ ಭಾಷೆಗೆ ಕ್ಯಾರೆ ಎನ್ನದ ತಮಿಳುನಾಡು ಸರ್ಕಾರ
* ತಮಗೆ ಬೇಕಾದದ್ದನ್ನು ಪ್ರತಿಭಟಿಸಿ, ಒತ್ತಡ ಹೇರಿ ಪಡೆದುಕೊಳ್ಳುವುದರಲ್ಲಿ ತಮಿಳರದ್ದು ಮೇಲುಗೈ
ತಮಿಳು ಚಿತ್ರರಂಗದ ಒಗ್ಗಟ್ಟು
* ತಮಿಳುನಾಡು ರಾಜಕಾರಣ, ತಮಿಳು ಚಿತ್ರರಂಗ ಒಂದಕ್ಕೊಂದು ಬೆಂಬಲಕ್ಕೆ ನಿಲ್ಲುತ್ತವೆ; ತಮಿಳುನಾಡು ಜನರ ಹೋರಾಟಕ್ಕೆ ಚಿತ್ರರಂಗದ ಪ್ರತಿಯೊಬ್ಬ ನಟ, ನಟಿಯರೂ ಬೆನ್ನೆಲುಬಾಗಿ ನಿಲ್ಲುತ್ತಾರೆ; ಕಾವೇರಿ ನೀರು ಹಂಚಿಕೆ, ಹೊಗೇನೆಕಲ್ ವಿಷಯವಾಗಿ, ತಮಿಳು ಭಾಷೆ ವಿಚಾರದ ಹೋರಾಟಕ್ಕೆ ಎಲ್ಲ ನಟರೂ ಬೀದಿಗಿಳಿಯುತ್ತಾರೆ.
* ಜಲ್ಲಿ ಕಟ್ಟು ವಿಚಾರದಲ್ಲಿಯೂ ಇಡೀ ತಮಿಳು ಚಿತ್ರರಂಗದ ನಟಿಯರು ಬೀದಿಗಿಳಿದಿದ್ದಾರೆ; ಇಡೀ ಚಿತ್ರರಂಗವೇ ಜಲ್ಲಿ ಕಟ್ಟು ನಿಷೇಧ ವಾಪಸ್ ತೆಗೆದುಕೊಳ್ಳುವಂತೆ ಹೋರಾಟ ಮಾಡುತ್ತಿದೆ.
* ಸೂಪರ್ ಸ್ಟಾರ್ ರಜನಿಕಾಂತ್, ಕಮಲಹಾಸನ್ ಪ್ರತಿ ಪ್ರತಿಭಟನೆ, ಹೋರಾಟದ ಮುಂಚೂಣಿಯಲ್ಲಿರುತ್ತಾರೆ; ಖ್ಯಾತ ನಟರಾದ ಸೂರ್ಯ, ಧನುಷ್, ವಿಶಾಲ್, ನಟಿ ತ್ರಿಷಾ, ಖ್ಯಾತ ಸಂಗೀತ ನಿರ್ದೇಶಕ ಎ.ಆರ್ ರೆಹಮಾನ್ ಸೇರಿದಂತೆ ಖ್ಯಾತ ನಟ-ನಟಿಯರೆಲ್ಲರೂ ಪ್ರತಿಭಟನೆ ಕೂಗಿಗೆ ದನಿ ಗೂಡಿಸಿದ್ದಾರೆ
ಕರ್ನಾಟಕದವರು ಎಡವುತ್ತಿರುವುದೆಲ್ಲಿ?
* ಕಾವೇರಿ ವಿಷಯದಲ್ಲಿ ಎಂದೂ ಒಗ್ಗಟ್ಟು ಪ್ರದರ್ಶಿಸದ ಕರ್ನಾಟಕದ ರಾಜಕೀಯ ಪಕ್ಷಗಳು
* ಕೇಂದ್ರದ ಮೇಲೆ ಒತ್ತಡ ಹೇರಲು ಮೀನಾಮೇಷ ಎಣಿಸುವ ಪ್ರತಿಪಕ್ಷಗಳ ಸಂಸದರು, ಶಾಸಕರು
* ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಯತ್ನಿಸುವ ಪ್ರತಿಪಕ್ಷಗಳು
* ಮಹಾರಾಷ್ಟ್ರದ ನೆಲ ಅಂತ ಬರೆದಿರೋ ಬೋರ್ಡ್ ತೆಗೆಸಲು ಮೀನಾಮೇಷ ಎಣಿಸುವ ಸರ್ಕಾರ
* ಗೋವಾದಲ್ಲಿರುವ ಕನ್ನಡಿಗರ ಮೇಲೆ ದೌರ್ಜನ್ಯ ನಡೆದಾಗಲೂ ಒಗ್ಗಟ್ಟಿನಿಂದ ಹೋರಾಟಕ್ಕಿಳಿದ ರಾಜಕಾರಣಿಗಳು
* ಗೋವಾ ಕನ್ನಡಿಗರ ಮೇಲಿನ ದೌರ್ಜನ್ಯದ ಬಗ್ಗೆ ಸಂಸತ್ನಲ್ಲೂ ದನಿ ಎತ್ತುವುದಿಲ್ಲ, ಗೋವಾ ವಿರುದ್ಧ ಪ್ರತಿಭಟಿಸೋದಿಲ್ಲ
* ಗಡಿಭಾಗದ ಕನ್ನಡಿಗರ ಸಮಸ್ಯೆಗಳ ಕುರಿತು ನೆರೆ ರಾಜ್ಯದ ಜತೆ ಜಗಳಕ್ಕೂ ಇಳಿಯುವುದಿಲ್ಲ
* ಮಹದಾಯಿ ನದಿ ನೀರು ಹಂಚಿಕೆ ವಿಷಯದಲ್ಲೂ ಕರ್ನಾಟಕದ ರಾಜಕಾರಣಿಗಳು, ಜನರ ಒಗ್ಗಟ್ಟು ಕಾಣೋದಿಲ್ಲ
* ಕರಾವಳಿಯ ಪ್ರಮುಖ ಆಚರಣೆಯಾದ ಕಂಬಳ ನಿಷೇಧಿಸಿದ್ದರೂ ಇದರ ಪರ ಯಾರೋ ಸೊಲ್ಲೆತ್ತೋದಿಲ್ಲ
* ಜಲ, ನೆಲ, ಭಾಷೆ ವಿಷಯದಲ್ಲಿ ಕರ್ನಾಟಕ ಎಂದೂ ಒಗ್ಗಟ್ಟಿನಿಂದ ಹೋರಾಟ ನಡೆಸಿದ ಇತಿಹಾಸವೇ ಇಲ್ಲ
* ಡಾ.ರಾಜ್ಕುಮಾರ್ ನೇತೃತ್ವದಲ್ಲಿ ನಡೆದ ಗೋಕಾಕ್ ಚಳವಳಿ ಬಿಟ್ಟರೆ ಮತ್ತೆ ಅಂತಹದ್ದೊಂದು ಹೋರಾಟ ನಡೆದೇ ಇಲ್ಲ
* ಕನ್ನಡ ನೆಲದಲ್ಲಿ ಕನ್ನಡಿಗರಿಗೆ ಮೊದಲ ಆದ್ಯತೆ ಎನ್ನುವ ವಿಷಯದಲ್ಲೂ ರಾಜಕಾರಣಿಗಳದ್ದು ದಿವ್ಯ ಮೌನ
* ಕನ್ನಡಿಗರಿಗೆ ಉದ್ಯೋಗ ಕಲ್ಪಿಸುವ ಸರೋಜನಿ ಮಹಿಷಿ ವರದಿ ಜಾರಿಯಾಗದೇ ೩ ದಶಕಗಳು ಕಳೆದು ಹೋಗಿರುವುದ ರಾಜಕಾರಣಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ
* ನಮ್ಮ ರಾಜ್ಯದಲ್ಲಿರುವ ರಾಜಕೀಯ ಪಕ್ಷಗಳು, ಮುನ್ನುಗ್ಗಿ ರಾಜ್ಯಕ್ಕೆ ಯೋಜನೆಗಳನ್ನು ತರಬೇಕು ಎನ್ನುವ ಛಲದ ಕೊರತೆ
* ರಾಜ್ಯಕ್ಕೆ ಅನ್ಯಾಯವಾದರೂ ಪರವಾಗಿಲ್ಲ ಹೈಕಮಾಂಡ್ ಹೇಳಿದಂತೆ ಕೇಳಬೇಕು ಎನ್ನುವ ಗುಲಾಮಗಿರಿ ಸಂಸ್ಕತಿ ಪಾಲಿಸುವ ಪಕ್ಷಗಳು
