ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವ ಮುನ್ನ ಬಿಜೆಪಿಯ ಲೆಹರ್‌ಸಿಂಗ್‌ ಅವರು, ಭ್ರಷ್ಟಾಚಾರ ನಡೆಸಿದ, ಜಾತಿ ರಾಜಕೀಯ ಮಾಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಸಚಿವರಾಗಿರುವ ಜಿ.ಟಿ.ದೇವೇಗೌಡರಿಗೆ ಅಭಿನಂದನೆ ಎಂದರು.

ವಿಧಾನ ಪರಿಷತ್‌ :  ರಾಜ್ಯಪಾಲರ ಭಾಷಣದ ಮೇಲೆ ಮಾತನಾಡುವ ಮುನ್ನ ಬಿಜೆಪಿಯ ಲೆಹರ್‌ಸಿಂಗ್‌ ಅವರು, ಭ್ರಷ್ಟಾಚಾರ ನಡೆಸಿದ, ಜಾತಿ ರಾಜಕೀಯ ಮಾಡಿದ ಸಿದ್ದರಾಮಯ್ಯ ಅವರನ್ನು ಸೋಲಿಸಿ ಸಚಿವರಾಗಿರುವ ಜಿ.ಟಿ.ದೇವೇಗೌಡರಿಗೆ ಅಭಿನಂದನೆ. 

ಚುನಾವಣೆ ವೇಳೆ ಯಾವ ಪಕ್ಷದ ವಿರುದ್ಧ ಆರೋಪ ಮಾಡಿದ್ದಿರೋ ಈಗ ಅದೇ ಪಕ್ಷದ ಬೆಂಬಲದಿಂದ ಸಚಿವರಾಗಿದ್ದೀರಿ ಎಂದು ಹೇಳಿದ್ದು ತೀವ್ರ ಮಾತಿನ ಚಕಮಕಿ, ವಾಗ್ವಾದಕ್ಕೆ ಕಾರಣವಾಯಿತು. ಈ ಮಾತಿಗೆ ಸಚಿವರಾದ ಆರ್‌.ವಿ.ದೇಶಪಾಂಡೆ, ಕೆ.ಜೆ. ಜಾರ್ಜ್, ಕೃಷ್ಣ ಬೈರೇಗೌಡ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ವಾಗ್ವಾದ ನಡೆಯಿತು.

ಲೆಹರ್‌ಸಿಂಗ್‌ ಚರ್ಚೆ ಆರಂಭಿಸುವ ಮುನ್ನ ಪೀಠಿಕೆ ರೂಪದಲ್ಲಿ ಜಯಮಾಲ ಅವರು ಮೊದಲ ಬಾರಿಗೆ ಸಚಿವರಾಗಿ, ಸಭಾನಾಯಕರಾಗಿದ್ದಾರೆ. ಅನೇಕರು ಮೊದಲ ಬಾರಿಗೆ ಮಂತ್ರಿಯಾಗಿದ್ದಾರೆ. ಅವರಿಗೆಲ್ಲ ಅಭಿನಂದನೆಗಳು. 

ವಿಶೇಷವಾಗಿ ಜಿ.ಟಿ.ದೇವೇಗೌಡರಿಗೆ ಅಭಿನಂದನೆ ಹೇಳಬೇಕಾಗುತ್ತದೆ. ಯಾಕೆಂದರೆ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಚಾರ ಹಾಗೂ ಜಾತಿ ರಾಜಕೀಯದ ಆರೋಪ ಮಾಡಿ ಚುನಾವಣೆಯಲ್ಲಿ ಗೆದ್ದಿದ್ದೀರಿ ಎಂದು ಚುಚ್ಚಿದರು. ಈ ಮಾತಿಗೆ ಸಚಿವರಾದ ಆರ್‌.ವಿ.ದೇಶಪಾಂಡೆ, ಕೆ.ಜೆ.ಜಾಜ್‌ರ್‍, ಕೃಷ್ಣ ಬೈರೇಗೌಡ ಸೇರಿದಂತೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಸಚಿವ ದೇಶಪಾಂಡೆ, ಸದನದ ಸದಸ್ಯರಲ್ಲದವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದರೆ, ಕೆ.ಜೆ.ಜಾರ್ಜ್ ಐದು ವರ್ಷಗಳ ಕಾಲ ಅತ್ಯುತ್ತಮವಾಗಿ ಆಡಳಿತ ಮಾಡಿದ ಸಿದ್ದರಾಮಯ್ಯ ಬಗ್ಗೆ ಈ ರೀತಿ ಮಾತನಾಡಿದರೆ ಹೇಗೆ ಸಹಿಸಿಕೊಳ್ಳಲು ಸಾಧ್ಯ? 

ಚುನಾವಣೆಯಲ್ಲಿ ಸೋಲು-ಗೆಲುವು ಸಾಮಾನ್ಯ. ಹಿಂದೆ ಚುನಾವಣೆಯಲ್ಲಿ ವಾಜಪೇಯಿ ಅವರೇ ಸೋತಿದ್ದರು. ಸೋತ ತಕ್ಷಣ ಈ ರೀತಿ ಮಾತನಾಡುವುದು ಎಷ್ಟರ ಮಟ್ಟಿಗೆ ಸರಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಆಗ ಬಿಜೆಪಿಯ ತೇಜಸ್ವಿನಿ ರಮೇಶ್‌ ಮಾತನಾಡಿ, ಜಾತಿ ರಾಜಕಾರಣ ಮಾಡಿದವರು, ಸಮಾಜ ಒಡೆದವರು ಎಂದು ಟೀಕಿಸಿದವರು ಜೆಡಿಎಸ್‌ ಮುಖಂಡರೇ ಹೊರತು ಬಿಜೆಪಿಯವರಲ್ಲ. ಈ ರೀತಿ ಟೀಕಿಸಿದವರನ್ನೇ ನೀವು (ಕಾಂಗ್ರೆಸ್‌) ಬೆಂಬಲಿಸಿದ್ದೀರಿ ಎಂದು ಏರಿದ ದನಿಯಲ್ಲಿ ಹೇಳಿದರು. ಈ ಹಂತದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ಪರಸ್ಪರ ಮಾತಿನ ಚಕಮಕಿ ನಡೆಯಿತು. ಗದ್ದಲದಿಂದ ಯಾರು ಏನು ಹೇಳುತ್ತಿದ್ದಾರೆಂದು ಕೇಳದಂತಾಯಿತು. ಸಭಾಪತಿಗಳು ಯಾರ ಮಾತೂ ಕಡತಕ್ಕೆ ಹೋಗದಂತೆ ಸೂಚನೆ ನೀಡಿದರು.

ಕೊನೆಗೆ ಸಭಾಪತಿಗಳು ರಾಜ್ಯಪಾಲರ ಭಾಷಣ ಕುರಿತಂತೆ ಮಾತ್ರ ಮಾತನಾಡುವಂತೆ ಲೆಹರ್‌ ಸಿಂಗ್‌ಗೆ ಸೂಚನೆ ನೀಡಿದರು. ಸರಿ ಎಂದ ಲೆಹರ್‌ಸಿಂಗ್‌ ದೇವೇಗೌಡರು ಪ್ರಧಾನಿ ಹುದ್ದೆಯಿಂದ ರಾಜೀನಾಮೆ ನೀಡುವಾಗ ಮಾಡಿದ ಭಾಷಣದಲ್ಲಿನ ಕೆಲವು ಅಂಶಗಳನ್ನು ಉಲ್ಲೇಖಿಸಿತೊಡಗಿದರು. ಆಡಳಿತ ಪಕ್ಷದ ಸದಸ್ಯರು ವಿಷಯ ಬಿಟ್ಟು ಬೇರೆಯದರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.

ಇದರಿಂದ ಅಸಮಾಧಾನಗೊಂಡ ಸಭಾಪತಿ ಹೊರಟ್ಟಿಅವರು ಲೆಹರ್‌ ಸಿಂಗ್‌ ಅವರಿಗೆ ಮಾತನಾಡಿದ್ದು ಸಾಕು ಎಂದು ಅಬ್ದುಲ್‌ ಜಬ್ಬಾರ್‌ ಅವರಿಗೆ ಮಾತನಾಡುವಂತೆ ಸೂಚಿಸಿದರು. ಕೊನೆಗೆ ಮೂರು ನಿಮಿಷದಲ್ಲಿ ಮಾತು ಮುಗಿಸುವುದಾಗಿ ಲೆಹರ್‌ಸಿಂಗ್‌ ಹೇಳಿದ್ದರಿಂದ ಅವಕಾಶ ನೀಡಿದರು. ನಂತರ ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ಮಾದಕ ದ್ರವ್ಯ ಸೇವನೆ, ಟ್ರಾಫಿಕ್‌ ಸಮಸ್ಯೆಗಳ ನಿವಾರಣೆಗೆ ಮುಂದಾಗಬೇಕು ಎಂದು ಸರ್ಕಾರದ ಗಮನ ಸೆಳೆದರು.