ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾತನಾಡಿ, ಮಾಧ್ಯಮದವರ ಮೇಲೂ ಸಾಕಷ್ಟು ಆರೋಪಗಳಿವೆ. ಇವರೆಲ್ಲಾ ಸಾಚಾಗಳಾ? ಮಾಧ್ಯಮದಲ್ಲಿ ಇರೋರೆಲ್ಲಾ ಸತ್ಯಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.
ಬೆಂಗಳೂರು(ಮಾ. 22): "ನಮ್ಮ ತಪ್ಪಿಲ್ಲದಿದ್ದರೂ ಮಾಧ್ಯಮಗಳು ತಪ್ಪು ತೋರಿಸುತ್ತಿವೆ. ಬಾಯಿಗೆ ಬಂದಂತೆ ಸ್ಟುಡಿಯೋದಲ್ಲಿ ಕುಳಿತು ಮಾತನಾಡುತ್ತಾರೆ. ಏನು ಬೇಕಾದ್ರೂ ಹೇಳುತ್ತಾರೆ. ಟಿವಿ ಮಾಧ್ಯಮದವರು ಮಾತನಾಡುವ ಬದಲು, ಗ್ರಾ.ಪಂ. ಪಂಚಾಯ್ತಿಗೆ ಸ್ಪರ್ಧಿಸಲಿ. ಆಗ ಗೊತ್ತಾಗುತ್ತೆ ಜನರ ಸಮಸ್ಯೆ ಏನು ಅಂತ..." - ಇದು ಕಾಂಗ್ರೆಸ್ ಶಾಸಕ ಶಿವರಾಜ್ ತಂಗಡಿಗೆ ಮಾಧ್ಯಮಗಳ ವಿರುದ್ಧ ಹೊರಹಾಕಿದ ಅಸಮಾಧಾನದ ಮಾತುಗಳು.
ಬುಧವಾರ ವಿಧಾನಸಭಾ ಕಲಾಪದಲ್ಲಿ ನಿಯಮ 69ರ ಅಡಿ ನಡೆದ ಚರ್ಚೆಯಲ್ಲಿ ಮಾತನಾಡಿದ, ಶಾಸಕರಾದ ತಂಗಡಗಿ, ಬಿಆರ್ ಪಾಟೀಲ್, ರಾಜು ಕಾಗೆ, ಸುರೇಶ್ ಗೌಡ ಟಿವಿ ಮಾಧ್ಯಮಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಮಾಧ್ಯಮದವರಿಂದ ರಕ್ಷಣೆ ಕೊಡಿಸಿ ಎಂದು ಮನವಿ ಮಾಡಿದ ಪ್ರಸಂಗ ನಡೆಯಿತು. ಯಾರು ಎಲ್ಲಿ ಕುಳಿತು ಏನು ಬೇಕಾದರೂ ಮಾತನಾಡಬಹುದು. ಸ್ವಾತಂತ್ರ್ಯದ ಹೆಸರಲ್ಲಿ ಏನು ಬೇಕಾದರೂ ಮಾಡಬಹುದು. ಸದನದಲ್ಲಿ ತೂಕಡಿಸಿದ್ರು ಅದು ಸುದ್ದಿ. ನಾವೇನು ಮನುಷ್ಯರಲ್ಲವಾ? ಎಂದು ಅಳಂದದ ಕೆಜೆಪಿ ಶಾಸಕ ಬಿಆರ್ ಪಾಟೀಲ್ ಕಿಡಿಕಾರಿದರು.
ನಮ್ಮನ್ನು ಗೂಂಡಾಗಳು, ರೌಡಿಗಳು ಎಂದೆಲ್ಲಾ ಸಂಬೋಧಿಸಿ ಸುದ್ದಿ ಪ್ರಸಾರ ಮಾಡ್ತಾರೆ ಎಂದು ಶಾಸಕ ಸುರೇಶ್ ಗೌಡ ಅಸಮಾಧಾನ ವ್ಯಕ್ತಪಡಿಸಿದರೆ, ಜೆಡಿಎಸ್ ಶಾಸಕ ಸಾರಾ ಮಹೇಶ್ ಮಾತನಾಡಿ, ಮಾಧ್ಯಮದವರ ಮೇಲೂ ಸಾಕಷ್ಟು ಆರೋಪಗಳಿವೆ. ಇವರೆಲ್ಲಾ ಸಾಚಾಗಳಾ? ಮಾಧ್ಯಮದಲ್ಲಿ ಇರೋರೆಲ್ಲಾ ಸತ್ಯಹರಿಶ್ಚಂದ್ರರಾ? ಎಂದು ಪ್ರಶ್ನಿಸಿದರು.
