ಈ ಕೆಳಗಿನ ಕಾರಣಗಳಿಂದ ಗೋವಿಂದರಾಜು ಅವರ ಡೈರಿಗೆ ಸಾಕ್ಷಿಯಾಗುವ ಎಲ್ಲ ಅರ್ಹತೆಯಿದೆ. ಆದರೆ, ಇದರ ಅಂತಿಮ ಅರ್ಹತೆಯನ್ನು ನ್ಯಾಯಾಲಯವೇ ನಿರ್ಧರಿಸಬೇಕು.
ಬೆಂಗಳೂರು(ಫೆ. 24): ಕೆಲವು ವಾರಗಳ ಹಿಂದೆ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದರು - ‘ಸಹಾರಾ ಕಂಪನಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಹಿಂದೆ ಲಂಚ ನೀಡಿದ್ದರ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಇವನ್ನು ನಾನು ಲೋಕಸಭೆಯಲ್ಲಿ ಬಹಿರಂಗಪಡಿಸಿ ಮಾತನಾಡಿದರೆ ಭೂಕಂಪವಾಗುತ್ತದೆ' ಎಂದು. ಅವರು ಮಾತನಾಡಿದರೂ ಭೂಕಂಪವಾಗಲಿಲ್ಲ. ಆದರೆ, ಇದೀಗ ಸಾರ್ವಜನಿಕವಾಗಿ ಬಹಿರಂಗವಾಗಿರುವ, ಗೋವಿಂದರಾಜು ಅವರದು ಎನ್ನಲಾದ ಡೈರಿ ಪುಟದಿಂದ ರಾಜ್ಯ ಕಾಂಗ್ರೆಸ್‌ನಲ್ಲಿ ಭೂಕಂಪವಾಗದಿದ್ದರೂ ನಡುಕವಂತೂ ಆಗಿದೆ. ಸಹಾರಾ ಡೈರಿ ಮೋದಿಯವರ ವಿರುದ್ಧ ಸಾಕ್ಷ್ಯವಲ್ಲ ಎನ್ನುವುದಾದರೆ ಗೋವಿಂದರಾಜು ಅವರ ಡೈರಿ ಕಾಂಗ್ರೆಸ್ ವಿರುದ್ಧ ಸಾಕ್ಷ್ಯ ಹೇಗಾಗುತ್ತದೆ? ಎಂಬುದು ಕಾಂಗ್ರೆಸ್ ವಾದ. ಹಾಗಾದರೆ, ಸಹಾರಾ ಡೈರಿಗೂ, ಗೋವಿಂದರಾಜು ಡೈರಿಗೂ ಕಾನೂನಾತ್ಮಕವಾಗಿ ಏನು ವ್ಯತ್ಯಾಸವಿದೆ ಎಂಬ ಬಗ್ಗೆ ಇಲ್ಲಿದೆ ವಿವರಣೆ.
1) ಮೋದಿ ವಿರುದ್ಧ ರಾಹುಲ್ ಬಳಸಿದ್ದ ಸಹಾರಾ- ಬಿರ್ಲಾ ಕಾಗದಪತ್ರಗಳು ಏಕೆ ‘ಅಕೌಂಟ್ ಪುಸ್ತಕ'ವಲ್ಲ ಎನ್ನಲು ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ವಿವರವಾಗಿ ಕಾರಣಗಳನ್ನು ತಿಳಿಸಿದೆ. ಆದರೆ, ಈಗ ಗೋವಿಂದರಾಜು ಡೈರಿ ಸುಪ್ರೀಂಕೋರ್ಟ್ ನೀಡಿರುವ ‘ಅಕೌಂಟ್ ಪುಸ್ತಕ'ದ ವಿವರಣೆಗೆ ಅನುಗುಣವಾಗಿದೆ.
2) ಸುಪ್ರೀಂಕೋರ್ಟಿನ ವ್ಯಾಖ್ಯಾನದ ಪ್ರಕಾರ ಒಂದು ಅಕೌಂಟ್ ಪುಸ್ತಕ ಅಂದರೆ - ಬಿಡಿ ಬಿಡಿ ಹಾಳೆಗಳ ಸಂಗ್ರಹವಾಗಿರಬಾರದು. ಹಲವು ಹಾಳೆಗಳನ್ನು ಸೇರಿಸಿ ಮಾಡಿದ ಪುಸ್ತಕವಾಗಿರಬೇಕು. ಸಹಾರಾ ಡೈರಿ ಹಾಗಿರಲಿಲ್ಲ. ಕಂಪ್ಯೂಟರ್‌ನ ಎಕ್ಸೆಲ್'ಶೀಟ್'ಗಳ ಪ್ರಿಂಟ್‌ಔಟ್ ಹಾಗೂ ಇತರ ಹಲವು ಬಿಡಿ ಕಾಗದಗಳು ಅವು. ಆದ್ದರಿಂದ ಅವುಗಳನ್ನು ಅಕೌಂಟ್ ಪುಸ್ತಕದ ವ್ಯಾಖ್ಯೆಯಲ್ಲಿ ನೋಡಲು ಸಾಧ್ಯವಿಲ್ಲ ಎಂದು ವ್ಯಾಖ್ಯಾನಿಸಿ ಸುಪ್ರೀಂಕೋರ್ಟು ತೀರ್ಪು ನೀಡಿತ್ತು.
3) ಆದರೆ, ಗೋವಿಂದರಾಜು ಅವರದು ಎನ್ನಲಾದ ಡೈರಿ ಹಾಗಲ್ಲ. ಅದು ಪಕ್ಕಾ ಪುಸ್ತಕದಲ್ಲೇ ಇದೆ. ಕೈಯಲ್ಲಿ ಬರೆದ ಅಕ್ಷರಗಳು ಅದರಲ್ಲಿವೆ. ಈ ಕಾಗದಗಳನ್ನು ಆಮೇಲೆ ಸೇರಿಸಿದ ಡೈರಿ ಅದಲ್ಲ. ಆದ್ದರಿಂದ ಈ ಡೈರಿಗೂ, ಸಹಾರಾ ಡೈರಿಗೂ ಹೋಲಿಕೆ ಮಾಡುವುದು ಸರಿಯಲ್ಲ ಎನ್ನುವುದು ಬಿಜೆಪಿಯ ಲಾ ಪಾಯಿಂಟ್.
4) ಸಹಾರಾ ಕಾಗದಗಳು ಸಿಕ್ಕಿದ್ದು, ಸಂಬಂಧವಿಲ್ಲದ ಯಾರೋ ಮೂರನೇ ವ್ಯಕ್ತಿಗಳ ಬಳಿ. ಆದರೆ, ಗೋವಿಂದರಾಜು ಅವರ ಡೈರಿ ಸಿಕ್ಕಿರುವುದು ಸ್ವತಃ ಗೋವಿಂದರಾಜು ಅವರ ಮನೆಯಲ್ಲಿ. ಗೋವಿಂದರಾಜು ಅವರು ಮುಖ್ಯಮಂತ್ರಿಯವರ ಅತ್ಯಂತ ನಿಕಟವರ್ತಿಗಳೂ ಹಾಲಿ ವಿಧಾನ ಪರಿಷತ್ ಸದಸ್ಯರೂ ಆಗಿದ್ದಾರೆ. ಆದ್ದರಿಂದ ಗೋವಿಂದರಾಜು ಅವರ ಡೈರಿಗೆ ಕಾನೂನಾತ್ಮಕವಾಗಿ ಹೆಚ್ಚು ಮಹತ್ವವಿದೆ. ಇನ್'ಕಮ್ ಟ್ಯಾಕ್ಸ್ ಕಾಯಿದೆಯ ಎಸ್132(4ಎ) ಪ್ರಕಾರ ಗೋವಿಂದರಾಜು ಅವರ ಡೈರಿಯನ್ನು ಸಾಕ್ಷ್ಯಾರ್ಹ ಡೈರಿ ಎಂದು ಪರಿಗಣಿಸಬಹುದು ಎಂದು ಬಿಜೆಪಿ ವಾದ.
5) ಗೋವಿಂದರಾಜು ಅವರದು ಎನ್ನಲಾದ ಡೈರಿಯಲ್ಲಿ ನಮೂದಿಸಲಾಗಿರುವ ಹೆಸರುಗಳು ಕಾಕತಾಳೀಯ ಎಂದೆನಿಸುವುದಿಲ್ಲ. ಬರೆದಿರುವ ಎಲ್ಲಾ ಹೆಸರುಗಳು ಹಾಗೂ ಸಂಕೇತಾಕ್ಷರಗಳೂ ಮೇಲ್ನೋಟಕ್ಕೇ ತಾಳೆಯಾಗುತ್ತವೆ. ಎಲ್ಲಾ ಹೆಸರುಗಳೂ ಗೋವಿಂದರಾಜು ಅವರ ಜೊತೆ ನೇರವಾಗಿ ವ್ಯವಹಾರದಲ್ಲಿ ಇರುವ ವ್ಯಕ್ತಿಗಳೇ ಆಗಿದ್ದಾರೆ. ಆದರೆ, ಸಹಾರಾ ಬಿರ್ಲಾ ಕಾಗದಗಳಲ್ಲಿ ಯಾರೋ ಅಪರಿಚಿತ ವ್ಯಕ್ತಿಗಳು ಕಂಪನಿಯ ಹಣವನ್ನು ನಾಜೂಕಾಗಿ ಲಪಟಾಯಿಸಲು ಅಥವಾ ಬ್ಲಾಕ್'ಮೇಲ್ ಮಾಡಲು ಬಳಸಿಕೊಂಡಂತೆ ಇದೆ ಎಂಬುದು ನ್ಯಾಯವಾದಿಗಳ ತರ್ಕ.
6) ಈ ರೀತಿಯ ಡೈರಿ ತಮ್ಮ ಮನೆಯಲ್ಲಿ ಸಿಕ್ಕಿರುವುದು ನಿಜ ಎಂದು ಗೋವಿಂದರಾಜು ಅವರು ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ವಿಚಾರಣೆಯಲ್ಲಿ ಪದೇ ಪದೇ ಒಪ್ಪಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮನೆಯಲ್ಲಿ ಸಿಕ್ಕಿದ ಡೈರಿಯ ಮಾಹಿತಿಯನ್ನು ನೀವು ಯಡಿಯೂರಪ್ಪನವರಿಗೆ ನೀಡಿದ್ದೀರಾ ಎಂದು ಪ್ರಶ್ನಿಸಿ ಗೋವಿಂದರಾಜು ಅವರು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳಿಗೆ ಪತ್ರವೊಂದನ್ನು ಬರೆದಿದ್ದಾರೆ. ಇದರಿಂದ ಇಂತಹ ಒಂದು ಡೈರಿ ಇರುವುದು ನಿಜ ಎನ್ನುವುದು ಸಾಬೀತಾಗುತ್ತದೆ.
ಈ ಕಾರಣಗಳಿಂದ ಗೋವಿಂದರಾಜು ಅವರ ಡೈರಿಗೆ ಸಾಕ್ಷಿಯಾಗುವ ಎಲ್ಲ ಅರ್ಹತೆಯಿದೆ. ಆದರೆ, ಇದರ ಅಂತಿಮ ಅರ್ಹತೆಯನ್ನು ನ್ಯಾಯಾಲಯವೇ ನಿರ್ಧರಿಸಬೇಕು.
(epaper.kannadaprabha.in)
