ಇಡೀ ವಿಶ್ವವೇ ಸಂಗಮಿಸಿರುವ ತಾಣ ಬೆಂಗಳೂರು. ನಿಜ ಅರ್ಥದಲ್ಲಿ ಕಾಸ್ಮೋಪಾಲಿಟನ್. ದೇಶ - ವಿದೇಶದ ಜನರು ಕೂಡಿ ಬಾಳುತ್ತಿರುವ ಈ ನಗರದ ಮತದಾರರ ಧೋರಣೆಯೂ ವಿಭಿನ್ನ. ಒಂದೆಡೆ ಅತ್ಯಂತ ವಿದ್ಯಾವಂತ ಸಮುದಾಯವಿದ್ದರೆ, ಮತ್ತೊಂದೆಡೆ ಕೊಳಗೇರಿ ರಾರಾಜಿಸುತ್ತದೆ. ಹೀಗಾಗಿ ಭಿನ್ನ ನಿಲುವು, ಧೋರಣೆಯ ಪಕ್ಷಗಳಿಗೆ ಇಲ್ಲಿ ಸಮಾನ ಅವಕಾಶವಿದೆ.
ಬೆಂಗಳೂರು (ಡಿ.8): ಇಡೀ ವಿಶ್ವವೇ ಸಂಗಮಿಸಿರುವ ತಾಣ ಬೆಂಗಳೂರು. ನಿಜ ಅರ್ಥದಲ್ಲಿ ಕಾಸ್ಮೋಪಾಲಿಟನ್. ದೇಶ - ವಿದೇಶದ ಜನರು ಕೂಡಿ ಬಾಳುತ್ತಿರುವ ಈ ನಗರದ ಮತದಾರರ ಧೋರಣೆಯೂ ವಿಭಿನ್ನ. ಒಂದೆಡೆ ಅತ್ಯಂತ ವಿದ್ಯಾವಂತ ಸಮುದಾಯವಿದ್ದರೆ, ಮತ್ತೊಂದೆಡೆ ಕೊಳಗೇರಿ ರಾರಾಜಿಸುತ್ತದೆ. ಹೀಗಾಗಿ ಭಿನ್ನ ನಿಲುವು, ಧೋರಣೆಯ ಪಕ್ಷಗಳಿಗೆ ಇಲ್ಲಿ ಸಮಾನ ಅವಕಾಶವಿದೆ. ಅದೇ ರೀತಿ ಕಾಂಗ್ರೆಸ್ ಹಾಗೂ ಬಿಜೆಪಿ ಇಲ್ಲಿ ತಮ್ಮದೇ ಆದ ವೋಟ್ ಬ್ಯಾಂಕ್ ಗಳನ್ನು ಹೊಂದಿವೆ.
ಸಾಮಾನ್ಯವಾಗಿ ನಗರ ಪ್ರದೇಶಗಳಲ್ಲಿ ತನ್ನ ಅಸ್ತಿತ್ವವನ್ನು ಪ್ರಬಲ ಪಡಿಸಿಕೊಂಡಿರುವ ಬಿಜೆಪಿಯು ಬೆಂಗಳೂರಿನಲ್ಲೂ ಒಂದು ಕಾಲದಲ್ಲಿ ಉತ್ತಮ ಸಾಧನೆಯನ್ನೇ ಮಾಡುತ್ತಿತ್ತು. ಆದರೆ, ಕಳೆದ ಚುನಾವಣೆಯಲ್ಲಿ ಬಿಜೆಪಿಯ ಸ್ವಾಮ್ಯಕ್ಕೆ ಕಾಂಗ್ರೆಸ್ ಪೆಟ್ಟುಕೊಟ್ಟಿತ್ತು. ಜತೆಗೆ, ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಬಿಜೆಪಿಗಿಂತ ಕಡಿಮೆ ಸಂಖ್ಯೆ ಹೊಂದಿದ್ದರೂ ಜೆಡಿಎಸ್ ಸಖ್ಯ ಸಾಧಿಸಿ ಬಿಬಿಎಂಪಿ ಮೇಲೆ ಕಾಂಗ್ರೆಸ್ ಹಿಡಿತ ಸಾಧಿಸಿತು.

ಒಟ್ಟು 28 ಕ್ಷೇತ್ರಗಳನ್ನು ಹೊಂದಿರುವ ಬೆಂಗಳೂರು ನಗರವು ವಿಧಾನಸಭೆ ಚುನಾವಣೆಯಲ್ಲಿ ಅತ್ಯಂತ ಮುಖ್ಯ ಎಂಬುದನ್ನು ಮನಗಂಡ ಕಾಂಗ್ರೆಸ್ ಮೂಲಭೂತ ಸೌಕರ್ಯದ ನೆಪದಲ್ಲಿ ಕೋಟ್ಯಂತರ ರು. ಹಣವನ್ನು ಬೆಂಗಳೂರಿನಲ್ಲಿ ಹರಿಸಿದೆ. ಇಷ್ಟಾಗಿಯೂ ನಗರದ ಸಮಸ್ಯೆಗಳು ಪರಿಹಾರವಾಗಿಲ್ಲ. ಈಗಲೂ ಮಳೆಯಾದರೆ ಸಾಕು ರಸ್ತೆಗಳು ಗುಂಡಿಗಳಾಗುತ್ತವೆ. ರಾಜಾಕಾಲುವೆಗಳಲ್ಲಿ ಪ್ರವಾಹ ಉಂಟಾಗಿ ಜನರು ಕೊಚ್ಚಿಹೋಗುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ನಗರದ ಸಂಚಾರ ದಟ್ಟಣೆಗೆ ಶಾಶ್ವತ ಪರಿಹಾರ ಇನ್ನೂ ದೊರಕಿಲ್ಲ.
ಬಿಡಿಎ ನಿಷ್ಕ್ರಿಯತೆ, ಅರ್ಕಾವತಿ ಹಗರಣದಂತಹ ಪ್ರಮುಖ ವಿಚಾರಗಳಿದ್ದರೂ ಅವುಗಳು ಹೈಲೈಟ್ ಆಗುವುದಿಲ್ಲ. ಮೂಲ ಸೌಕರ್ಯ ವಿಚಾರಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ಹೋರಾಟ ನಡೆಸುವ ವರ್ಗ ಮತಗಟ್ಟೆಗೆ ಬರುವುದಿಲ್ಲ. ಹೀಗಾಗಿಯೇ ಬೆಂಗಳೂರಿನಲ್ಲಿ ಸದಾ ಮತದಾನ ಪ್ರಮಾಣ ಕಡಿಮೆ. ಕಾಂಗ್ರೆಸ್ ವೋಟ್ ಬ್ಯಾಂಕ್ ಇರುವೆಡೆ ಉತ್ತಮ ಮತದಾನವಾದರೆ, ಬಿಜೆಪಿ ಮತಗಳು ಸಾಮಾಜಿಕ ಜಾಲತಾಣ ಗಳಿಂದ ಹೊರಬರದೇ ಇರುವುದು ಆ ಪಕ್ಷಕ್ಕೆ ಸಮಸ್ಯೆ.
ಬೆಂಗಳೂರಿಗೆ ಸಂಬಂಧಿಸಿದ ಸಾಕಷ್ಟು ಸಮಸ್ಯೆಗಳಿದ್ದರೂ ನಗರದಲ್ಲಿ ಬಿಜೆಪಿ ಹೋರಾಟ ನಡೆಸಿದ್ದು ರಾಜ್ಯಕ್ಕೆ ಸಂಬಂಧಿಸಿದ ವಿಷಯಗಳ ಬಗ್ಗೆಯೇ ಹೆಚ್ಚು. ನಗರ ಬಿಜೆಪಿ ನಾಯಕರಲ್ಲಿ ಒಗ್ಗಟ್ಟಿನ ಕೊರತೆಯೂ ಪಕ್ಷಕ್ಕೆ ಒಂದು ಸಮಸ್ಯೆ. ಸಮೀಕ್ಷೆ ಕೂಡ ಇದನ್ನೇ ಸಮರ್ಥಿಸುತ್ತದೆ. ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಎರಡೂ ತಮ್ಮ ಹಿಂದಿನ ಸಾಧನೆಯನ್ನು ಈ ಬಾರಿಯೂ ಉಳಿಸಿಕೊಳ್ಳುವ ಸೂಚನೆಯಿದೆ. ಈ 2 ಪಕ್ಷಗಳು ಮಾತ್ರವಲ್ಲ, ಜೆಡಿಎಸ್ ಸಹ ಕಳೆದ ಬಾರಿಯ ಸಾಧನೆಯನ್ನೇ ಈ ಬಾರಿಯೂ ತೋರಲಿದೆ ಎಂದು ಸಮೀಕ್ಷೆ ಹೇಳುತ್ತದೆ.
ಕಾಂಗ್ರೆಸ್ ಕಳೆದ ಚುನಾವಣೆಯಲ್ಲಿ ಶೇ.40.5ರ ಮತಗಳಿಕೆ ಮೂಲಕ 13 ಸ್ಥಾನಗಳನ್ನು ಪಡೆದಿತ್ತು. ಈ ಬಾರಿ ಮತ ಗಳಿಕೆ ಶೇ.0.5ರಷ್ಟು (ಶೇ. 41) ಉತ್ತಮಪಡಿಸಿಕೊಂಡಿದ್ದರೂ ಸ್ಥಾನ ಗಳಿಕೆ ಕಳೆದ ಬಾರಿಯಷ್ಟೇ ಅರ್ಥಾತ್ 13 ಆಗಿದೆ. ಬಿಜೆಪಿಯು ಕಳೆದ ಬಾರಿಗಿಂತ ಈ ಬಾರಿ ಶೇ.2ರಷ್ಟು ಹೆಚ್ಚಿನ ಮತಗಳಿಕೆ ಕಂಡಿದ್ದರೂ (ಅಂದರೆ ಕಳೆದ ಬಾರಿ ಶೇ.32ರಿಂದ ಈ ಬಾರಿ ಶೇ.34ಕ್ಕೆ ಏರಿಕೆ) ಸ್ಥಾನ ಗಳಿಕೆ ಕಳೆದ ಬಾರಿಯಷ್ಟೇ (12) ಇದೆ. ಜೆಡಿಎಸ್ ಸಹ ಕಳೆದ ಬಾರಿ ಗಳಿಸಿದ್ದ ಮೂರು ಸ್ಥಾನಗಳಿಗೆ ಈ ಬಾರಿಯೂ ತೃಪ್ತಿಪಟ್ಟುಕೊಳ್ಳಲಿದೆ ಎಂದು ಸಮೀಕ್ಷೆ ಹೇಳುತ್ತದೆ. ಇನ್ನು ಸಮೀಕ್ಷೆಗೆ ಒಳಗಾದವರ ಪೈಕಿ ಶೇ.7ರಷ್ಟು ಮತದಾರರು ಯಾವ ಪಕ್ಷಕ್ಕೆ ಮತ ಹಾಕಬೇಕು ಎಂಬುದನ್ನು ಇನ್ನೂ ನಿರ್ಧರಿಸಿಲ್ಲ. ಇವರ ಕಡೇ ಕ್ಷಣದ ನಿಧರ್ಾರ ಭಾರಿ ಬದಲಾವಣೆ ತರಲಿಕ್ಕಿಲ್ಲ.
