Asianet Suvarna News Asianet Suvarna News

ಸೈಟು, ಮನೆ ಖರೀದಿ ಮಾಡಬೇಕೆಂದುಕೊಂಡಿದ್ದವರಿಗೆ ಶಾಕ್

ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳವಾಗಲಿದೆ. ಆಸ್ತಿಗಳ ಮಾರಾಟ ಹಾಗೂ ನೋಂದಣಿ ವೇಳೆ ಮಾರ್ಗಸೂಚಿ ದರದ ಶೇ.6.6ರಷ್ಟುನೋಂದಣಿ ಶುಲ್ಕ ಪಾವತಿಸಬೇಕಾಗಿರುವುದರಿಂದ ಆಸ್ತಿಗಳ ನೋಂದಣಿ ಶುಲ್ಕವೂ ಹೆಚ್ಚಾಗಲಿದೆ.

Land Rate hike To 30 percent
Author
Bengaluru, First Published Sep 30, 2018, 7:26 AM IST

ಬೆಂಗಳೂರು :  ಕೊಡಗು ಜಿಲ್ಲೆ ಹೊರತುಪಡಿಸಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಶೇ.10ರಿಂದ 30ರವರೆಗೆ ಆಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಣೆ ಮಾಡಲು ಶನಿವಾರ ನಡೆದ ಕೇಂದ್ರ ಮೌಲ್ಯಮಾಪನ ಸಮಿತಿ ಅಂತಿಮ ಸಭೆಯಲ್ಲಿ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ.

ಇದರಿಂದ ಬೆಂಗಳೂರು ನಗರ, ಗ್ರಾಮಾಂತರ ಸೇರಿದಂತೆ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳ ಆಸ್ತಿಗಳ ಮಾರ್ಗಸೂಚಿ ದರ ಹೆಚ್ಚಳವಾಗಲಿದೆ. ಆಸ್ತಿಗಳ ಮಾರಾಟ ಹಾಗೂ ನೋಂದಣಿ ವೇಳೆ ಮಾರ್ಗಸೂಚಿ ದರದ ಶೇ.6.6ರಷ್ಟುನೋಂದಣಿ ಶುಲ್ಕ ಪಾವತಿಸಬೇಕಾಗಿರುವುದರಿಂದ ಆಸ್ತಿಗಳ ನೋಂದಣಿ ಶುಲ್ಕವೂ ಹೆಚ್ಚಾಗಲಿದೆ.

ಕಳೆದ ವರ್ಷ (2017) ಮಾರ್ಚ್ ತಿಂಗಳಲ್ಲಿ ಶೇ.10ರಿಂದ 40ರಷ್ಟುಮಾರ್ಗಸೂಚಿ ದರವನ್ನು ಹೆಚ್ಚಳ ಮಾಡಲಾಗಿತ್ತು. ಇದೀಗ ಮತ್ತೆ ಮಾರ್ಗಸೂಚಿ ದರ ಪರಿಷ್ಕರಣೆಗೆ ಮುಂದಾಗಿದ್ದು, ಸೆಪ್ಟೆಂಬರ್‌ ಮೊದಲ ವಾರದಲ್ಲಿ ಅಧಿಸೂಚನೆ ಹೊರಡಿಸಿ ಆಕ್ಷೇಪಣೆಗಳಿಗೆ ಅರ್ಜಿ ಆಹ್ವಾನಿಸಲಾಗಿತ್ತು. ಸೆ.20ಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಲು ಅಂತಿಮ ಗಡುವು ಮುಗಿದಿದೆ. ಹೀಗಾಗಿ 2018-19ನೇ ಸಾಲಿಗೆ ಬೆಂಗಳೂರು ನಗರ ವ್ಯಾಪ್ತಿಯ ಜಿಲ್ಲೆಗಳನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಿಂದ ಮಾಹಿತಿ ಪಡೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲು ಸೋಮವಾರ ಸಭೆ ನಡೆಸಲಾಗಿತ್ತು.

ಶನಿವಾರ ಬೆಂಗಳೂರು ನಗರ ಜಿಲ್ಲೆಯ ಐದು ಜಿಲ್ಲಾ ನೋಂದಣಾಧಿಕಾರಿಗಳು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಹಾಗೂ ರಾಮನಗರ ಜಿಲ್ಲೆಗಳಿಗೆ ಸಂಬಂಧಿಸಿದ ಎಲ್ಲಾ ಜಿಲ್ಲಾ ಮತ್ತು ಉಪ ನೋಂದಣಾಧಿಕಾರಿಗಳ ಸಭೆ ನಡೆಸಲಾಯಿತು. ಈ ವೇಳೆ ಸ್ಥಿರಾಸ್ತಿಗಳ ಪರಿಷ್ಕೃತ ಮಾರುಕಟ್ಟೆಮೌಲ್ಯಗಳ ಮಾರ್ಗಸೂಚಿ ದರಗಳನ್ನು ಅಂತಿಮಗೊಳಿಸಲು ಕೇಂದ್ರ ಮೌಲ್ಯಮಾಪನ ಸಮಿತಿ ಸಭೆ ನಿರ್ಧರಿಸಿದೆ. ಮಾಹಿತಿಯನ್ನು ಕ್ರೋಢೀಕರಿಸಿ ವಾರದೊಳಗೆ ಪರಿಷ್ಕೃತ ಮಾರ್ಗಸೂಚಿ ದರದ ಬಗ್ಗೆ ಅಂತಿಮ ಅಧಿಸೂಚನೆ ಹೊರಬೀಳಲಿದೆ ಎಂದು ಮೂಲಗಳು ಖಚಿತಪಡಿಸಿವೆ.

ಆದಾಯ ಹೆಚ್ಚಳ ಗುರಿಯೂ ಕಾರಣ:  ಸರ್ಕಾರ 2017ರ ಮಾಚ್‌ರ್‍ನಲ್ಲಿ ಸ್ಥಿರಾಸ್ತಿಗಳ ಮಾರ್ಗಸೂಚಿ ದರ ಪರಿಷ್ಕರಿಸಿ ಆದೇಶ ಹೊರಡಿಸಿತ್ತು. ನಂತರ ದರ ಪರಿಷ್ಕರಣೆ ಮಾಡಿರಲಿಲ್ಲ. ಬಜೆಟ್‌ನಲ್ಲಿ ಇಲಾಖೆಗೆ ನೀಡಿರುವ ಗುರಿ ಹಾಗೂ ರಾಜಸ್ವ ಸಂಗ್ರಹದ ನಡುವೆ ಶೇ.15ರಷ್ಟುವ್ಯತ್ಯಾಸ ಬಂದಿತ್ತು. ಜತೆಗೆ ಮಾರುಕಟ್ಟೆದರ ಹಾಗೂ ಮಾರ್ಗಸೂಚಿ ದರದ ನಡುವಿನ ವ್ಯತ್ಯಾಸದ ಅಂತರ ಕಡಿಮೆ ಮಾಡುವ ಉದ್ದೇಶದಿಂದ ದರ ಪರಿಷ್ಕರಣೆಗೆ ಮುಂದಾಗಿರುವುದಾಗಿ ತಿಳಿದುಬಂದಿದೆ.

ಪ್ರಸ್ತುತ ಇರುವ ಸ್ಥಿರಾಸ್ತಿ ಮಾರ್ಗ ಸೂಚಿ ದರ, ಮಾರುಕಟ್ಟೆದರ, ಆಸ್ತಿಗೆ ಇರುವ ಸಂಪರ್ಕ ರಸ್ತೆಗಳು, ಆಸ್ತಿ ಇರುವ ಪ್ರದೇಶದ ಸುತ್ತಲಿನ ವಾಣಿಜ್ಯ ಚಟುವಟಿಕೆಗಳು, ನಗರ ಮತ್ತು ಗ್ರಾಮಿಣ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿ ಹಾಗೂ ಭೂಪರಿವರ್ತನೆ ಆಧರಿಸಿ ದರ ಪರಿಷ್ಕರಣೆ ನಡೆಯಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.


ಕೊಡಗು ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಉಂಟಾದ ಹಿನ್ನೆಲೆಯಲ್ಲಿ ಜಿಲ್ಲೆಯನ್ನು ಹೊರತುಪಡಿಸಿ ಉಳಿದೆಲ್ಲಾ ಜಿಲ್ಲೆಗಳ ಮಾರ್ಗಸೂಚಿ ದರವನ್ನು ಶೇ.10ರಿಂದ 30ರಷ್ಟುಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. ಇತರೆ ಜಿಲ್ಲೆಗಳ ಬಗೆಗಿನ ಸಭೆ ಸೋಮವಾರ ನಡೆದಿದ್ದು, ಶನಿವಾರ ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಜಿಲ್ಲೆ ಮಾರ್ಗಸೂಚಿ ದರ ಪರಿಷ್ಕರಣೆ ಬಗ್ಗೆ ಸಭೆ ನಡೆಸಿದ್ದೇವೆ. ಯಾವ್ಯಾವ ಪ್ರದೇಶದಲ್ಲಿ ಎಷ್ಟೆಷ್ಟುದರ ಪರಿಷ್ಕರಣೆಯಾಗಲಿದೆ ಎಂಬುದನ್ನು ಕ್ರೋಢೀಕರಿಸಿ ಒಂದು ವಾರದಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗುವುದು.

- ಕೆ.ವಿ. ತ್ರಿಲೋಕ್‌ ಚಂದ್ರ, ಆಯುಕ್ತರು, ನೋಂದಣಿ ಮತ್ತು ಮುದ್ರಾಂಕ ಇಲಾಖೆ

ಶ್ರೀಕಾಂತ್‌ ಎನ್‌. ಗೌಡಸಂದ್ರ

Follow Us:
Download App:
  • android
  • ios