ಬೆಂಗಳೂರು [ಜು.15] :  ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಹಿಂದೂ ಧರ್ಮ ಪ್ರಚಾರಕ ಸ್ವಾಮಿ ವಿವೇಕಾನಂದ ಜೀವನ ಕುರಿತ ಫಲಪುಷ್ಪ ಪ್ರದರ್ಶನಕ್ಕೆ ಮುಂದಾಗಿದ್ದ ತೋಟಗಾರಿಕೆ ಇಲಾಖೆ, ಸರ್ಕಾರ ಸೂಚನೆ ಮೇರೆಗೆ ಯದುವಂಶದ ಕೊನೆಯ ಮಹಾರಾಜ ಮತ್ತು ಸ್ವಾತಂತ್ರ್ಯ ಭಾರತದ ಮೈಸೂರು ರಾಜ್ಯದ ಮೊದಲ ರಾಜ್ಯಪಾಲ ಜಯಚಾಮರಾಜೇಂದ್ರ ಒಡೆಯರ್‌ ಅವರ ಜೀವನ ಚರಿತ್ರೆಯನ್ನು ಫಲಪುಷ್ಪಗಳಿಂದ ಅನಾವರಣಗೊಳಿಸಲು ನಿರ್ಧರಿಸಿದೆ.

ದೇಶ ಸ್ವಾತಂತ್ರ್ಯಗೊಂಡ ನಂತರ ರಾಜ ಸಂಸ್ಕೃತಿಯನ್ನು ಭಾರತದಲ್ಲಿ ಮೊದಲ ಬಾರಿಗೆ ವಿಲೀನಗೊಳಿಸಿದ್ದ ಕೀರ್ತಿಗೆ ಪಾತ್ರರಾಗಿದ್ದ ಜಯಚಾಮರಾಜ ಒಡೆಯರ್‌ ಅವರು ವಿಶಾಲ ಕರ್ನಾಟಕದ ಕನಸು ಕಂಡಿದ್ದರು. ಅವರ ಶತಮಾನೋತ್ಸವ ಅಂಗವಾಗಿ ಅವರ ಬಾಲ್ಯ, ಶಿಕ್ಷಣ ಮತ್ತು ಆಡಳಿತದಲ್ಲಿ ರಾಜ್ಯಕ್ಕೆ ಸಲ್ಲಿಸಿದ ಸೇವೆ ಕುರಿತು ಸಾರ್ವಜನಿಕರಿಗೆ ತಿಳಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

ದಸರಾ ಮಹೋತ್ಸವದಲ್ಲಿ ನಡೆಯುವ ಜಂಬೂಸವಾರಿ, ಮೈಸೂರು ಸಂಸ್ಥಾನದ ಚಿನ್ನದ ಸಿಂಹಾಸನವನ್ನು ಪುಷ್ಪಗಳ ಮೂಲಕ ಅನಾವರಣಗೊಳಿಸಲಾಗುವುದು. ಅಲ್ಲದೆ, ಮೈಸೂರು(ಮುಖ್ಯ ಅರಮನೆ) ಮತ್ತು ಬೆಂಗಳೂರನ್ನು ಹೊರತು ಪಡಿಸಿ ಮೈಸೂರು ಸಂಸ್ಥಾನಕ್ಕೆ ಸೇರಿದ ಬೇರೊಂದು ಅರಮನೆಯನ್ನು ಪ್ರಮುಖ ವಿಷಯ ವಸ್ತುವನ್ನಾಗಿಸಲಾಗುತ್ತಿದೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇತಿಹಾಸ ತಜ್ಞರಿಂದ ಮಾಹಿತಿ:

ಸರ್ಕಾರದ ಸೂಚನೆ ಹಿನ್ನೆಲೆಯಲ್ಲಿ ಮೈಸೂರು ಸಂಸ್ಥಾನದ ಕೊನೆಯ ದೊರೆಯಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರು ಜೀವನ ಚರಿತ್ರೆ ಮತ್ತು ಅವರು ರಾಜ್ಯಕ್ಕೆ ನೀಡಿದ ಕೊಡುಗೆಗಳನ್ನು ಇತಿಹಾಸ ತಜ್ಞರಿಂದ ಮಾಹಿತಿ ಕಲೆ ಹಾಕಲಾಗುತ್ತಿದೆ. ಬರುವ ಆಗಸ್ಟ್‌ ಒಂಬತ್ತರಿಂದ ಹತ್ತು ದಿನಗಳ ಕಾಲ ಲಾಲ್‌ಬಾಗ್‌ನ ಗಾಜಿನ ಮನೆಯಲ್ಲಿ ನಡೆಯುವ ಫಲ ಪುಷ್ಪ ಪ್ರದರ್ಶನದಲ್ಲಿ ಒಡೆಯರ್‌ ಸಂಪೂರ್ಣ ಜೀವನ ಅನಾವರಣಗೊಳಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಿವರಣೆ ನೀಡಿದ್ದಾರೆ.

ಸಭೆಯಲ್ಲಿ ತೀರ್ಮಾನ

ಮೈಸೂರು ಉದ್ಯಾನ ಕಲಾ ಸಂಘದ ಪದಾಧಿಕಾರಿಗಳು ಮತ್ತು ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ಸಭೆಯಲ್ಲಿ ಜಯಚಾಮರಾಜೇಂದ್ರ ಒಡೆಯರ್‌ ಅವರು ಕುರಿತಂತೆ ಫಲಪುಷ್ಪ ಪ್ರದರ್ಶನ ಆಯೋಜಿಸುವ ಸಂಬಂಧ ಚರ್ಚೆ ನಡೆಸಲಾಗುವುದು. ಅಲ್ಲದೆ, ಒಡೆಯರ್‌ ಅವರು ರಾಜ್ಯಕ್ಕೆ ನೀಡಿರುವ ಕೊಡುಗೆಗಳು ಹಾಗೂ ಯಾವ ಅಂಶಗಳನ್ನು ಪ್ರದರ್ಶನದಲ್ಲಿ ಅಳವಡಿಸಬೇಕು ಎಂಬುದನ್ನು ತೀರ್ಮಾನಿಸಲಾಗುವುದು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

 ಜನವರಿಯಲ್ಲಿ ಸ್ವಾಮಿ ವಿವೇಕಾನಂದ

2020ರ ಜನವರಿಯಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜನವರಿಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದಲ್ಲಿ ಸ್ವಾಮಿ ವಿವೇಕಾನಂದ ಫಲಪುಷ್ಪ ಪ್ರದರ್ಶನ ಆಯೋಜಿಸಲು ತೀರ್ಮಾನಿಸಲಾಗಿದೆ ಎಂದು ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೈಸೂರು ಸಂಸ್ಥಾನದ ಕೊನೆಯ ಅರಸರಾಗಿದ್ದ ಜಯಚಾಮರಾಜೇಂದ್ರ ಒಡೆಯರ್‌ ಅವರ ದಶಮಾನೋತ್ಸವ ಆಚರಣೆ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಫಲಪುಷ್ಪ ಪ್ರದರ್ಶನದಲ್ಲಿಯೂ ಜಯಚಾಮರಾಜ ಒಡೆಯರ್‌ ಕುರಿತ ಫಲಪುಷ್ಪ ಪ್ರದರ್ಶನ ಹಮ್ಮಿಕೊಳ್ಳಲು ಸೂಚನೆ ನೀಡಲಾಗಿದೆ. ಈ ಕುರಿತು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

-ಡಾ.ಎಂ.ಜಗದೀಶ್‌, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕರು. (ಉದ್ಯಾನವನಗಳು)