ಬೆಂಗಳೂರು : ಲಹರಿ ಆಡಿಯೋ ಸಂಸ್ಥೆ ಮಾಲೀಕರಾದ ತುಳಸಿರಾಮ ನಾಯ್ಡು (ಲಹರಿ ವೇಲು) ಅವರು ಆರ್‌ಎಸ್‌ಎಸ್ ಕುರಿತಾದ ಭಾರಿ ಬಜೆಟ್‌ನ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. 120 ರಿಂದ 180 ಕೋಟಿ ಬಜೆಟ್‌ನ ಈ ಚಿತ್ರಕ್ಕೆ ಕತೆ, ಚಿತ್ರಕತೆ ಬರೆಯುತ್ತಿರುವುದು ‘ಬಾಹುಬಲಿ’ ಖ್ಯಾತಿಯ ತೆಲುಗಿನ ಜನಪ್ರಿಯ ಸಿನಿಬರಹಗಾರ ಕೆವಿ ವಿಜಯೇಂದ್ರ ಪ್ರಸಾದ್!

ಹೌದು ಬಹುಭಾಷೆಗಳಲ್ಲಿ ನಿರ್ಮಾಣಗೊಳ್ಳಲಿರುವ ಈ ಚಿತ್ರ ಆರಂಭದಲ್ಲಿ ಹಿಂದಿ ಮತ್ತು ತೆಲುಗು ಭಾಷೆಯಲ್ಲಿ ನಿರ್ಮಾಣಗೊಳ್ಳಲಿದೆ. ‘ಲಹರಿ ವೇಲು’ ಎಂದೇ ಕರೆಯಲ್ಪಡುವ ತುಳಸೀರಾಮ ನಾಯ್ಡು ದೇಶದ ಎಲ್ಲಾ ಭಾಷೆಗಳಲ್ಲೂ ಈ ಚಿತ್ರಕ್ಕೆ ‘ಆರ್ ಎಸ್‌ಎಸ್’ ಎಂಬ ಹೆಸರನ್ನು ನೋಂದಾಯಿಸಿದ್ದಾರೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಸ್ಥೆಯ ಇತಿಹಾಸವನ್ನು ಕಮರ್ಷಿಯಲ್ ಶೈಲಿಯಲ್ಲಿ ತೆರೆಗೆ ತರುವ ಯೋಚನೆ ಅವರದ್ದು. ಚಿತ್ರಕ್ಕಾಗಿ ಸಂಘದ ಹಿರಿಯರ ಬಗ್ಗೆ ಈಗಿನ ಆರ್‌ಎಸ್‌ಎಸ್ ಮುಖಂಡರ ಬಳಿ ಮಾಹಿತಿ ಸಂಗ್ರಹಿಸಲಾಗಿದೆ. ಆರ್‌ಎಸ್‌ಎಸ್ ಮುಖ್ಯಸ್ಥರಾದ ಮೋಹನ್ ಭಾಗವತ್ ಹಾಗೂ ಗುರುಮೂರ್ತಿ ಅವರನ್ನು ಲಹರಿ ವೇಲು, ವಿಜಯೇಂದ್ರಪ್ರಸಾದ್ ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಮಾಹಿತಿ ಸಂಗ್ರಹಣೆ ನಂತರ ಪ್ರಸಿದ್ಧ ನಿರ್ದೇಶಕ ರಾಜಮೌಳಿಯವರ ತಂದೆ ಕನ್ನಡಿಗರಾದ ಕೆವಿ ವಿಜಯೇಂದ್ರ ಪ್ರಸಾದ್ ಈ ಚಿತ್ರದ ಕತೆ, ಚಿತ್ರಕತೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಈ ಚಿತ್ರದ ತಾರಾಗಣವೂ ಭರ್ಜರಿಯಾಗಿಯೇ ಇರಲಿದೆ.

ಈಗಾಗಲೇ ಈ ಚಿತ್ರಕ್ಕೆ ಅಕ್ಷಯ್ ಕುಮಾರ್ ಅವರ ಜೊತೆ ಒಂದು ಸುತ್ತಿನ ಮಾತುಕತೆ ನಡೆದಿದೆ ಎನ್ನಲಾಗಿದೆ. ಪ್ರಸಿದ್ಧ ತಾರೆಯರನ್ನೇ ಆಯ್ಕೆ ಮಾಡುವ ಸೂಚನೆ ಇದೆ. ಹಿಂದಿ ಚಿತ್ರಕ್ಕೆ ಮುಂಬೈಯ ರಾಮ್ ಸಿಂಗ್ ಸಹ ನಿರ್ಮಾಪಕರು.