Asianet Suvarna News Asianet Suvarna News

2 ದಿನ ದೇಶದಾದ್ಯಂತ ಮುಷ್ಕರಕ್ಕೆ ಕರೆ : ಯಾವ ಸೇವೆ ವ್ಯತ್ಯಯ?

2 ದಿನಗಳ ಕಾಲ ಕೇಂದ್ರ ಕಾರ್ಮಿಕ ಸಂಘಟನೆಗಳು ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿವೆ. ಕರ್ನಾಟಕದಲ್ಲಿಯೂ ಕೂಡ ಈ ಮುಷ್ಕರಕ್ಕೆ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟ ಬೆಂಬಲ ನೀಡಿದೆ. 

Labour Unions Announce Nationwide Strike on January 8 9
Author
Bengaluru, First Published Dec 15, 2018, 10:40 AM IST

ಬೆಂಗಳೂರು :  ಕೇಂದ್ರ ಸರ್ಕಾರದ ಕಾರ್ಮಿಕ ನೀತಿ ವಿರೋಧಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೇಂದ್ರೀಯ ಕಾರ್ಮಿಕ ಸಂಘಟನೆಗಳು ಜ.8 ಮತ್ತು 9ರಂದು ದೇಶಾದ್ಯಂತ ‘ರಾಷ್ಟ್ರೀಯ ಮುಷ್ಕರ’ಕ್ಕೆ ಕರೆ ನೀಡಿವೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಆರ್‌ಟಿಸಿ ಸ್ಟಾಫ್‌ ಅಂಡ್‌ ವರ್ಕರ್ಸ್‌ ಫೆಡರೇಷನ್‌ನ ಪ್ರಧಾನ ಕಾರ್ಯದರ್ಶಿ ಎಚ್‌.ವಿ.ಅನಂತ ಸುಬ್ಬರಾವ್‌, ರಾಜ್ಯದ ಜನರಿಗೂ ಮುಷ್ಕರದ ಬಿಸಿ ತಟ್ಟಲಿದೆ. ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಮುಷ್ಕರ ಜರುಗಲಿದೆ. ಜ.8ರಂದು ಬೆಳಗ್ಗೆ 6 ಗಂಟೆಯಿಂದ ಜ.9ರ ಸಂಜೆ 6 ಗಂಟೆವರೆಗೆ ಯಾವುದೇ ಸರ್ಕಾರಿ ಬಸ್‌ ಸೌಲಭ್ಯವಿರುವುದಿಲ್ಲ. ರಾಜ್ಯ ಸಾರಿಗೆ ಇಲಾಖೆಯ ಕೆಎಸ್‌ಎಸ್‌ಆರ್‌ಟಿ, ಬಿಎಂಟಿಸಿ, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ, ಎನ್‌ಇಕೆಎಸ್‌ಆರ್‌ಟಿಸಿ ನಾಲ್ಕು ನಿಗಮದ ನೌಕರರು ಭಾಗಿಯಾಗಲಿದ್ದಾರೆ. ಒಟ್ಟಾರೆ ಮುಷ್ಕರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ನಡೆದ ಕೇಂದ್ರೀಯ ಕಾರ್ಮಿಕ ಸಂಘಟನೆಗಳ ಸಮಾವೇಶದಲ್ಲಿನ ನಿರ್ಣಯಗಳ ಜಾರಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಆದರೆ, ಪ್ರಧಾನಿ ನರೇಂದ್ರ ಮೋದಿಯವರು ಈವರೆಗೂ ಯಾವುದೇ ರೀತಿಯಲ್ಲಿ ಸ್ಪಂದಿಸಿಲ್ಲ. ಕಾರ್ಮಿಕ ಸಂಘಟನೆಗಳೊಂದಿಗೆ ಚರ್ಚೆಯನ್ನೂ ನಡೆಸಿಲ್ಲ. ಹಾಗಾಗಿ ಕಾರ್ಮಿಕ ಸಂಘಟನೆಗಳ ಬಗೆಗಿನ ಕೇಂದ್ರ ಸರ್ಕಾರದ ವಿರೋಧಿ ಧೋರಣೆ ಖಂಡಿಸಿ ಜನವರಿಯಲ್ಲಿ ಎರಡು ದಿನಗಳ ದೇಶವ್ಯಾಪಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ವಿವಿಧ 12 ರಾಷ್ಟ್ರೀಯ ಸಂಘಟನೆಗಳ ಸಹಯೋಗದಲ್ಲಿ ತೀರ್ಮಾನಿಸಿ ಮುಷ್ಕರ ಸಂಘಟಿಸಲಾಗಿದೆ. ಕೇಂದ್ರ ಸರ್ಕಾರದ ನಿಲುವಿನ ವಿರುದ್ಧ ಬಿಎಂಎಸ್‌ ಹೊರತುಪಡಿಸಿ, ದೇಶದ ಎಲ್ಲಾ ಸಾರಿಗೆ ಸಂಸ್ಥೆ ಒಕ್ಕೂಟದ ಸದಸ್ಯರು, ಕಾರ್ಮಿಕರು ಸೇರಿದಂತೆ ಸುಮಾರು 18 ಕೋಟಿ ಮಂದಿ ಪ್ರತಿಭಟಿಸಲಿದ್ದಾರೆ. ಪ್ರತಿಭಟನೆಗೆ ಆರ್ಥಿಕ ವಲಯದ ಸಂಘಟನೆಗಳು, ಸರ್ಕಾರಿ ನೌಕರರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ಹೇಳಿದರು.

ರಾಜ್ಯದ ಜನರಿಗೂ ಮುಷ್ಕರದ ಬಿಸಿ ತಟ್ಟಲಿದೆ. ಕರ್ನಾಟಕದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿ ಹಾಗೂ ಕಾರ್ಮಿಕರ ಒಕ್ಕೂಟದ ನೇತೃತ್ವದಲ್ಲಿ ಮುಷ್ಕರ ಜರುಗಲಿದೆ. ಜ.8ರಂದು ಬೆಳಗ್ಗೆ 6 ಗಂಟೆಯಿಂದ ಜ.9ರ ಸಂಜೆ 6 ಗಂಟೆವರೆಗೆ ಯಾವುದೇ ಸರ್ಕಾರಿ ಬಸ್‌ ಸೌಲಭ್ಯವಿರುವುದಿಲ್ಲ. ರಾಜ್ಯ ಸಾರಿಗೆ ಇಲಾಖೆಯ ಕೆಎಸ್‌ಎಸ್‌ಆರ್‌ಟಿ, ಬಿಎಂಟಿಸಿ, ಎನ್‌ಡಬ್ಲ್ಯೂ ಕೆಎಸ್‌ಆರ್‌ಟಿಸಿ, ಎನ್‌ಇಕೆಎಸ್‌ಆರ್‌ಟಿಸಿ ನಾಲ್ಕು ನಿಗಮದ ನೌಕರರು ಭಾಗಿಯಾಗಲಿದ್ದಾರೆ. ಒಟ್ಟಾರೆ ಮುಷ್ಕರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರ ಸಾರ್ವಜನಿಕ ಪಡಿತರ ವ್ಯವಸ್ಥೆಯನ್ನು ಸಾರ್ವತ್ರೀಕರಣಗೊಳಿಸಬೇಕು. ಸಾರಿಗೆ ಇಲಾಖೆಗಳ ಖಾಸಗೀಕರಣ ನೀತಿ ಕೈಬಿಡಬೇಕು. ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ, ಕಾಳಸಂತೆ ವ್ಯಾಪಾರ ನಿಷೇಧಿಸಬೇಕು. ನಿರುದ್ಯೋಗ ಸಮಸ್ಯೆ ನಿವಾರಿಸಲು ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಬೇಕು. ಮೂಲ ಕಾರ್ಮಿಕರ ಕಾನೂನುಗಳನ್ನು ಯಥಾವತ್ತಾಗಿ ಕಟ್ಟುನಿಟ್ಟಾಗಿ ಜಾರಿಗೊಳಿಸುವುದು ಸೇರಿದಂತೆ ಕಾರ್ಮಿಕರಿಗೆ ಸಾಮಾಜಿಕ ಭದ್ರತೆ, ಕನಿಷ್ಠ ವೇತನ, ಪಿಂಚಣಿ ನೀಡಬೇಕೆಂದು ಆಗ್ರಹಿಸಿದರು.

ವೇದಿಕೆಯಲ್ಲಿ ಒಕ್ಕೂಟದ ಜಂಟಿ ಕಾರ್ಯದರ್ಶಿ ವಿಜಯ ಭಾಸ್ಕರ್‌, ಸಂಘಟನಾ ಕಾರ್ಯದರ್ಶಿ ಟಿ.ಎಲ್‌.ರಾಜಗೋಪಾಲ್‌, ಬಿ. ನಾರಾಯಣರೆಡ್ಡಿ ಇನ್ನಿತರರು ಇದ್ದರು.

Follow Us:
Download App:
  • android
  • ios