ಸುಮಾರು 4 ಸಾವಿರ ಜನಸಂಖ್ಯೆಯುಳ್ಳ ಬಹುತೇಕ ಲಂಬಾಣಿ ಜನಾಂಗದವರೇ ವಾಸಿಸುವ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಶಿಥಿಲಗೊಂಡ ಅಂಗನವಾಡಿ, ಪ್ರಾಥಮಿಕ ಶಾಲಾ ಕಟ್ಟಡಗಳು, ಉದ್ಘಾಟನೆಯ ಭಾಗ್ಯ ಕಾಣದ ಶುದ್ಧ ಕುಡಿಯುವ ನೀರಿನ ಘಟಕ, ಕೊಳಚೆ ಚರಂಡಿಗಳು, ಕೆಸರು ಗದ್ದೆಯಾದ ರಸ್ತೆಗಳು, ಹೀಗೆ ಹಲವು ಸಮಸ್ಯೆಗಳ ಅಗರವಾದ ಈ ಗ್ರಾಮದ ಕುರಿತು ಸಮಗ್ರ ವರದಿ ಇಲ್ಲಿದೆ.
ಶಿವಮೊಗ್ಗ (ಜು.20): ಸುಮಾರು 4 ಸಾವಿರ ಜನಸಂಖ್ಯೆಯುಳ್ಳ ಬಹುತೇಕ ಲಂಬಾಣಿ ಜನಾಂಗದವರೇ ವಾಸಿಸುವ ಶಿವಮೊಗ್ಗ ತಾಲೂಕು ಕುಂಚೇನಹಳ್ಳಿ ಗ್ರಾಮ ಮೂಲಭೂತ ಸೌಕರ್ಯಗಳ ಸಮಸ್ಯೆಯನ್ನು ಎದುರಿಸುತ್ತಿದೆ. ಶಿಥಿಲಗೊಂಡ ಅಂಗನವಾಡಿ, ಪ್ರಾಥಮಿಕ ಶಾಲಾ ಕಟ್ಟಡಗಳು, ಉದ್ಘಾಟನೆಯ ಭಾಗ್ಯ ಕಾಣದ ಶುದ್ಧ ಕುಡಿಯುವ ನೀರಿನ ಘಟಕ, ಕೊಳಚೆ ಚರಂಡಿಗಳು, ಕೆಸರು ಗದ್ದೆಯಾದ ರಸ್ತೆಗಳು, ಹೀಗೆ ಹಲವು ಸಮಸ್ಯೆಗಳ ಅಗರವಾದ ಈ ಗ್ರಾಮದ ಕುರಿತು ಸಮಗ್ರ ವರದಿ ಇಲ್ಲಿದೆ.
ಶಿಥಿಲಗೊಂಡ ಅಂಗನವಾಡಿ ಕೇಂದ್ರ, ಬಿರುಕುಬಿಟ್ಟ ಶಾಲಾ ಕಟ್ಟಡಗಳು, 6 ತಿಂಗಳು ಕಳೆದರೂ ಉದ್ಘಾಟನೆ ಭಾಗ್ಯ ಕಾಣದ ಶುದ್ಧ ಕುಡಿಯುವ ನೀರಿನ ಘಟಕ, ಹೀಗೆ ಹತ್ತು ಹಲವು ಮೂಲಭೂತ ಸೌಕರ್ಯಗಳ ಕೊರತೆಯಿಂದ ಬಳಲುತ್ತಿದೆ ಕುಂಚೇನಹಳ್ಳಿ ಗ್ರಾಮ. ಶಿವಮೊಗ್ಗದಿಂದ 16 ಕಿ.ಮೀ. ದೂರದಲ್ಲಿರುವ ಕುಂಚೇನಹಳ್ಳಿ ಗ್ರಾಮದಲ್ಲಿ 920 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಲಂಬಾಣಿ ಜನರೇ ಹೆಚ್ಚಾಗಿ ವಾಸಿಸುತ್ತಿದ್ದಾರೆ. ಲಂಬಾಣಿ ಜನಾಂಗದವರಾದ ಮಹಿಳಾ ಶಾಸಕಿ ಶಾರದಾ ಪೂರ್ಯಾನಾಯ್ಕ ಪ್ರತಿನಿಧಿಸುವ ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಆದರೆ ಇದುವರೆಗೂ ಕುಂಚೇನಹಳ್ಳಿ ಗ್ರಾಮ ಅಭಿವೃದ್ಧಿಯನ್ನೇ ಕಂಡಿಲ್ಲ.
ಉದ್ಘಾಟನೆಗೆ ಕಾದಿದೆ ಸುಸಜ್ಜಿತ ಶುದ್ಧ ನೀರಿನ ಘಟಕ
ಶಿಥಿಲಗೊಂಡ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ !
ಕುಂಚೇಬಹಳ್ಳಿ ಗ್ರಾಮದಲ್ಲಿ ರಾಜ್ಯ ಸರ್ಕಾರದ ಮಹತ್ವದ ಶುದ್ಧ ಕುಡಿಯುವ ನೀರಿನ ಯೋಜನೆ ಇಲ್ಲಿ ಮಕಾಡೆ ಮಲಗಿದೆ. ನೀರು ಶುದ್ಧಿಕರಿಸಲು ಯಂತ್ರೋಪಕರಣ ವಿದ್ಯುತ್ ಸಂಪರ್ಕ ಮಾಡಿ 6 ತಿಂಗಳುಗಳೇ ಕಳೆದರೂ ನೀರಿನ ಸಂಪರ್ಕವನ್ನು ನೀಡದೇ ಹಾಳು ಬೀಳುವಂತೆ ಮಾಡಲಾಗಿದೆ. ಅಲ್ಲದೇ ಪ್ರಾಥಮಿಕ ಶಾಲಾ ಕಟ್ಟಡ 50 - 60 ವರ್ಷಗಳ ಹಳೆಯದಾಗಿದ್ದು 1ರಿಂದ 7ನೇ ತರಗತಿಯವರೆಗೆ 140 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಕಟ್ಟಡ ಬೀಳುವ ಹಂತದಲ್ಲಿದ್ದು ಯಾವಾಗ ಮಕ್ಕಳ ಮೇಲೆ ಬಿದ್ದು ಅನಾಹುತ ಕಾದಿದೆಯೋ? ಎಂದು ಶಿಕ್ಷಕರು ಆತಂಕದಲ್ಲಿದ್ದಾರೆ.
ಅಪೂರ್ಣಗೊಂಡ ಶಾಲಾ ಶೌಚಾಲಯ
ಬಯಲಲ್ಲೇ ಶಾಲಾ ಮಕ್ಕಳ ಬಹಿರ್ದೆಸೆ!
ಇನ್ನು ಇಲ್ಲಿನ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಶಾಲೆಯಲ್ಲಿಯೇ ಶೌಚಾಲಯವಿದ್ದರೂ ಅಪೂರ್ಣಗೊಂಡಿರುವ ಕಾರಣ ಬಯಲಲ್ಲೇ ಶೌಚಾಲಯಕ್ಕೆ ಹೋಗಿ ಬರಬೇಕು.
ಶಿಥಿಲಗೊಂಡಿರುವ ಅಂಗನವಾಡಿ
ಕೊಳಚೆ ಚರಂಡಿ, ಗಬ್ಬೆದ್ದ ರಸ್ತೆಗಳು!
ಇಡೀ ಗ್ರಾಮದಲ್ಲಿ 2 ಅಂಗನವಾಡಿಗಳಿದ್ದು ಪ್ರಸ್ತುತ ಮೂರನೇ ಅಂಗನವಾಡಿಗೆ ಬೇಡಿಕೆ ಬಂದಿದೆ. ಹೀಗಿರುವಾಗ ಕೆಳಗಿನ ಕುಂಚೇನಹಳ್ಳಿಯಲ್ಲಿರುವ 2ನೇ ಅಂಗನವಾಡಿ ಕಟ್ಟಡದಲ್ಲಿ ಚಿಕ್ಕ ಮಕ್ಕಳು ಯಾವಾಗ ಸೂರು ತಲೆ ಮೇಲೆ ಬಿದ್ದು ಪ್ರಾಣಕ್ಕೆ ಸಂಚಕಾರ ತರುತ್ತೋ ಎಂದು ಭಯದಲ್ಲಿದ್ದಾರೆ. ಇಡೀ ಗ್ರಾಮದಲ್ಲಿ ಒಳರಸ್ತೆಗಳು ಮತ್ತು ಚರಂಡಿಗಳನ್ನು ನೋಡಿದ್ರೆ ಭಯಬೀಳುತ್ತೆ. ಚರಂಡಿಗಳು ಗಬ್ಬು ನಾರುತ್ತಿದ್ದು ಗ್ರಾಮಸ್ಥರು ಕಾಯಿಲೆಯಿಂದ ಬೀಳುವಂತಾಗಿದೆ.
ಗ್ರಾಮೀಣ ಪ್ರದೇಶದ ಹಳ್ಳಿಗಳ ಸಮಸ್ಯೆಯನ್ನು ಅಧಿಕಾರಿಶಾಹಿ ವ್ಯವಸ್ಥೆಗೆ ಹಾಗೂ ಜನಪ್ರತಿನಿಧಿಗಳಿಗೆ ತಲುಪಿಸಿ ಪರಿಹಾರ ಕಂಡುಕೊಳ್ಳುವ ಸುವರ್ಣನ್ಯೂಸ್ ಕಾರ್ಯಕ್ರಮವನ್ನು ಸ್ಥಳೀಯ ಶಿವಮೊಗ್ಗ ಟೈಮ್ ಪತ್ರಿಕೆ ಸಂಪಾದಕ ಚಂದ್ರಕಾಂತ್ ಪ್ರಶಂಸಿದ್ದಾರೆ. ಒಟ್ಟಿನಲ್ಲಿ ಇನ್ಮು ಮುಂದಾದರೂ ಜನಪ್ರತಿನಿಧಿಗಳು ಕುಂಚೇನಹಳ್ಳಿ ಗ್ರಾಮಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲು ಮುಂದಾಗ್ತಾರಾ ಕಾದು ನೋಡ್ಬೇಕು..
