ಅಕ್ರಮ ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ಪ್ರಭಾವಿ ಮುಖಂಡ, ಕುಮಟಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸೂರಜ್‌ ನಾಯ್ಕ ಸೋನಿ ಅವರನ್ನು ಪೊಲೀಸರು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ.

ಹೊನ್ನಾವರ : ಅಕ್ರಮ ಗೋ ಸಾಗಣೆ ಮಾಡುತ್ತಿದ್ದವರ ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಸ್ಥಳೀಯ ಬಿಜೆಪಿ ಪ್ರಭಾವಿ ಮುಖಂಡ, ಕುಮಟಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ ಸೂರಜ್‌ ನಾಯ್ಕ ಸೋನಿ ಅವರನ್ನು ಪೊಲೀಸರು ದೆಹಲಿ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದಾರೆ.

ಹೊನ್ನಾವರ ತಾಲೂಕಿನ ಕರ್ಕಿ ನಾಕಾದ ಬಳಿ ಮಾ.7ರಂದು ತಡರಾತ್ರಿ ಬೊಲೆರೊ ವಾಹನದಲ್ಲಿ 10ಕ್ಕಿಂತ ಹೆಚ್ಚು ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ಗೋ ಕಳ್ಳರನ್ನು ಸಾರ್ವಜನಿಕರು ಹಿಡಿದಿದ್ದರು. ಅಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದಾರೆಂದು ಹಲವರ ವಿರುದ್ಧ ಹೊನ್ನಾವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.

ಪ್ರಕರಣದಲ್ಲಿ ಆರೋಪಿಯಾಗಿದ್ದ ಸೂರಜ್‌ ನಾಯ್ಕ ಸೋನಿ ತಲೆಮರೆಸಿಕೊಂಡಿದ್ದರು. ಇವರ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದರು. ಸೂರಜ್‌ ಸೋನಿ ದೆಹಲಿಗೆ ತೆರಳುತ್ತಿರುವ ಮಾಹಿತಿ ಕಲೆಹಾಕಿದ ಪೊಲೀಸರ ವಿಶೇಷ ತಂಡ ದೆಹಲಿಯ ರೈಲ್ವೆ ನಿಲ್ದಾಣದಲ್ಲಿ ಗುರುವಾರ ರಾತ್ರಿ ಬಂಧಿಸಿದ್ದು ಅವರನ್ನು ರಾಜ್ಯಕ್ಕೆ ಕರೆ ತಂದಿರುವ ಮಾಹಿತಿಯನ್ನು ಪೊಲೀಸ್‌ ಮೂಲಗಳು ತಿಳಿಸಿವೆ.

ಸೂರಜ್‌ ನಾಯ್ಕ ಸೋನಿ ಬಂಧನ ಸುದ್ದಿ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಹಾಗೂ ಬಿಜೆಪಿ ಮುಖಂಡರು ಶುಕ್ರವಾರ ಪ್ರತಿಭಟನೆ ನಡೆಸಿ ಬಂಧಿತರನ್ನು ಬಿಡುಗಡೆಗೊಳಿಸಲು ಹಾಗೂ ಪ್ರಕರಣ ಹಿಂಪಡೆಯುವಂತೆ ತಹಸೀಲ್ದಾರ್‌ ಮನವಿ ಸಲ್ಲಿಸಿದ್ದಾರೆ. ಸೂರಜ್‌ ಸೋನಿ ನಾಯ್ಕ ಕುಮಟಾ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರಿಂದ ಸರ್ಕಾರ ಈ ರೀತಿ ಕ್ರಮಕೈಗೊಂಡಿದೆ ಎಂದು ಆರೋಪಿಸಿದ್ದಾರೆ.