Asianet Suvarna News Asianet Suvarna News

ಜಾಧವ್ ಪತ್ನಿ ಕುಂಕುಮ, ಮಾಂಗಲ್ಯ ತೆಗಿಸಿದ ಪಾಕ್ ಕ್ರಮಕ್ಕೆ ಆಕ್ರೋಶ

ನಿನ್ನೆ ಕುಲಭೂಷಣ್ ಜಾಧವ್ ಪತ್ನಿ ಹಾಗೂ ತಾಯಿ ಅವರನ್ನು ಭೇಟಿ ಮಾಡುವ ವೇಳೆ ಭದ್ರತಾ ಹಿತದೃಷ್ಟಿಯಿಂದ ಮಂಗಳ ಸೂತ್ರ, ಬಳೆ ಹಾಗೂ ಬಿಂದಿಯನ್ನು ತೆಗೆಯುವಂತೆ ಅಧಿಕಾರಿಗಳು ಹೇಳಿದ್ದರು. ಜೊತೆಗೆ ಉಟ್ಟುಕೊಂಡು ಬಂದ ಬಟ್ಟೆಯನ್ನೂ ಬದಲಾಯಿಸಲು ಸೂಚಿಸಿದ್ದರು. ಅಧಿಕಾರಿಗಳ ಈ ವರ್ತನೆಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ.

Kulbhushan Jadhav  wife mother meet Sushma Swaraj upon return from Pakistan

ನವದೆಹಲಿ (ಡಿ.26): ನಿನ್ನೆ ಕುಲಭೂಷಣ್ ಜಾಧವ್ ಪತ್ನಿ ಹಾಗೂ ತಾಯಿ ಅವರನ್ನು ಭೇಟಿ ಮಾಡುವ ವೇಳೆ ಪತ್ನಿಯ ಮಂಗಳ ಸೂತ್ರ, ಬಳೆ ಹಾಗೂ ಬಿಂದಿಯನ್ನು ತೆಗೆಯುವಂತೆ ಅಧಿಕಾರಿಗಳು ಹೇಳಿದ್ದು, ಇದಕ್ಕೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. 

ಜಾಧವ್ ಪತ್ನಿ ಹಾಗೂ ತಾಯಿ ತೊಟ್ಟಿದ್ದ ಬಟ್ಟೆಯನ್ನೂ ಅಧಿಕಾರಿಗಳು ಬದಲಾಯಿಸಲು ಸೂಚಿಸಿದ್ದರು. ಆದರೆ, ಭದ್ರತಾ ದೃಷ್ಟಿಯಿಂದ ಪಾಕಿಸ್ತಾನ ಈ ನಡೆಗೆ ಮುಂದಾಗಿದೆ ಎಂದರೂ, 'ಭಾರತೀಯರ ಧಾರ್ಮಿಕ ಭಾವನೆಗಳಿಗೆ ಘಾಸಿ ಉಂಟಾಗುವಂತೆ ಮಾಡಲಾಗಿದೆ,' ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ಸುಷ್ಮಾ ಭೇಟಿಯಾದ ಜಾಧವ್ ಪತ್ನಿ, ತಾಯಿ

ಭಾರತದ ಪರ ಬೇಹುಗಾರಿಕೆ ನಡೆಸಿದ ಆರೋಪದಡಿಯಲ್ಲಿ ಪಾಕಿಸ್ತಾನ ಬಂಧಿಸಿರುವ ಜಾಧವ್ ಅವರನ್ನು ಭೇಟಿಯಾಗಿ ಹಿಂತಿರುಗಿದ ತಾಯಿ ಹಾಗೂ ಪತ್ನಿ ದೆಹಲಿಯಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್  ಅವರನ್ನು ಭೇಟಿಯಾಗಿದ್ದಾರೆ.

 

ಈ ಸಂದರ್ಭದಲ್ಲಿ ವಿದೇಶಾಂಗ ಕಾರ್ಯದರ್ಶಿ ಎಸ್. ಜೈಶಂಕರ್, ವಿದೇಶಾಂಗ ಸಚಿವಾಲಯದ ವಕ್ತಾರ ರವೀಶ್ ಕುಮಾರ್ ಉಪಸ್ಥಿತರಿದ್ದರು.

ಅಲ್ಲಿ ಏನು ಮಾತುಕತೆ ನಡೆದಿದೆ ಎನ್ನುವುದರ ಬಗ್ಗೆ  ಇನ್ನೂ ಮಾಹಿತಿ ಲಭ್ಯವಾಗಿಲ್ಲ. ಜಾಧವ್'ರನ್ನು ಬಿಡಿಸಲು ನಾವು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದೇವೆ ಎಂದು ಸುಷ್ಮಾ ಸ್ವರಾಜ್ ಕುಟುಂಬದವರಿಗೆ ಭರವಸೆ ನೀಡಿದ್ದಾರೆನ್ನಲಾಗಿದೆ. ಜಾಧವ್ ಕುಟುಂಬ ಇದೇ ಮೊದಲ ಬಾರಿಗೆ ಸುಷ್ಮಾ ಸ್ವರಾಜ್'ರನ್ನು ಭೇಟಿ ಮಾಡಿದೆ.

ಫೋಟೋ ಕೃಪೆ: ಹಿಂದೂಸ್ತಾನ್ ಟೈಮ್ಸ್

Follow Us:
Download App:
  • android
  • ios