1947ರಲ್ಲಿ ತಯಾರಿಸಲಾದ ಈ ಐತಿಹಾಸಿಕ ಬಸ್‌ ಅಂದಿನ ಬಾಂಬೆ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ನ ಭಾಗವಾಗಿತ್ತು. 1956ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದ ವೇಳೆ ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಯಿತು.

ಬೆಂಗಳೂರು(ಜ.23): ಕೆಎಸ್‌ಆರ್‌ಟಿಸಿಯ ‘ಓಲ್ಡ್‌ ಬ್ಯೂಟಿ' ಎಂದೇ ಹೆಸರಾಗಿರುವ, 70 ವರ್ಷ ಹಳೆಯದಾದ ‘ಬನಶಂಕರಿ' ಬಸ್‌ ಅನ್ನು ಮತ್ತೆ ರಸ್ತೆಗಿಳಿಸಲು ನಿಗಮ ಚಿಂತನೆ ನಡೆಸಿದೆ.
25 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಬನಶಂಕರಿ ಸೇವೆಯನ್ನು ಮತ್ತೆ ಸಾರ್ವಜನಿಕರಿಗೆ ಒದಗಿಸುವ ದೃಷ್ಟಿಯಿಂದ, ಪ್ರಮುಖವಾಗಿ ಮಕ್ಕಳು ಪ್ರಯಾಣಿಸಲು ಮತ್ತೆ ಸಜ್ಜುಗೊಳಿಸಲಾಗಿದೆ. ಪ್ರಸ್ತುತ ತಾಂತ್ರಿಕವಾಗಿ ದುರಸ್ಥಿಗೊಂಡಿರುವ ಬಸ್‌ನ ಎಂಜಿನ್‌ ಕ್ಷಮತೆ ಪರಿಶೀಲಿಸುವಂತೆ ಎಂಜಿನಿಯರ್‌ಗಳಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ರಾಜೇಂದರ್‌ ಕುಮಾರ್‌ ಕಟಾರಿಯಾ ಸೂಚಿಸಿದ್ದಾರೆ. ಎಂಜಿನಿಯರ್‌ಗಳಿಂದ ವಾಹನದ ಕಾರ್ಯಕ್ಷಮತೆ ದೃಢಪಟ್ಟರೆ ಈ ಬ್ಯೂಟಿ ರಸ್ತೆಗಿಳಿಯಲಿದ್ದಾಳೆ!
1947ರಲ್ಲಿ ತಯಾರಿಸಲಾದ ಈ ಐತಿಹಾಸಿಕ ಬಸ್‌ ಅಂದಿನ ಬಾಂಬೆ ಸ್ಟೇಟ್‌ ರೋಡ್‌ ಟ್ರಾನ್ಸ್‌ಪೋರ್ಟ್‌ನ ಭಾಗವಾಗಿತ್ತು. 1956ರಲ್ಲಿ ರಾಜ್ಯ ಪುನರ್‌ವಿಂಗಡಣೆಯಾದ ವೇಳೆ ಮೈಸೂರು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗೆ ಹಸ್ತಾಂತರಿಸಲಾಯಿತು. ವಿಜಯನಗರ ಬಸ್‌ ಡಿಪೋಗೆ ಸೇರಿಸಿದ ಬಳಿಕ 1968ರವರೆಗೆ ಸೇವೆ ಸಲ್ಲಿಸಿದೆ. ನಂತರ ಉತ್ತರ ಕರ್ನಾಟಕದ ಬನಶಂಕರಿ ಮತ್ತು ಸವದತ್ತಿ ಜಾತ್ರೆಯ ವೇಳೆ ಸಿಬ್ಬಂದಿ ವಾಹನವನ್ನಾಗಿ ಬದಲಾಯಿಸಲಾಯಿತು. 
ಹೀಗೆ ಸುಮಾರು 25 ವರ್ಷಗಳ ಕಾಲ ಸಾರ್ವಜನಿಕ ಸೇವೆ ಸಲ್ಲಿಸಿದ ಬಸ್‌ ಅನ್ನು ದಶಕಗಳ ಕಾಲ ಕೆಎಸ್‌ಆರ್‌ಟಿಸಿ ಘಟಕದಲ್ಲಿ ಸುರಕ್ಷಿತವಾಗಿ ಇಡಲಾಗಿತ್ತು. ಇದೀಗ ನಿಗಮದ ಕೇಂದ್ರ ಕಚೇರಿ ಮುಂಭಾಗದಲ್ಲಿ ನಿಲ್ಲಿಸಲಾಗಿದೆ.

(ಕನ್ನಡಪ್ರಭ ವಾರ್ತೆ)