ನಟ್ ಇಲ್ಲ, ಬೋಲ್ಟ್ ಸರಿಯಿಲ್ಲ..ಚಾಲಕನ ಗೋಳುಸರ್ಕಾರಿ ಬಸ್ಸುಗಳ ದುಸ್ಥಿತಿ ವಿವರಿಸಿದ ಚಾಲಕಸ್ಟಿಯರಿಂಗ್ ದುಸ್ಥಿತಿ ಕಂಡು ಬೆರಗಾದರೆ ಅಚ್ಚರಿಯಿಲ್ಲಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ಸಾರಿಗೆ ಇಲಾಖೆ?
ಬೆಂಗಳೂರು(ಜೂ.8): ‘ಏ..ಈ ಡ್ರೈವರ್ ತಂಬ ಸ್ಲೋ ಮಾರಾಯಾ..ಈ ಡ್ರೈವರ್ ತುಂಬಾನೇ ಸ್ಪೀಡು..ಈ ಕಂಡಕ್ಟರ್ ಗೆ ಬುದ್ದಿನೇ ಇಲ್ಲ..’ ಇವೆಲ್ಲಾ ನಾವು ದಿನನಿತ್ಯ ಸರ್ಕಾರಿ ಬಸ್ಸುಗಳಲ್ಲಿ ಸಂಚರಿಸುವಾಗ ಪ್ರಯಾಣಿಕರಿಂದ ಕೇಳುವ ಮಾಮೂಲಿ ಮಾತುಗಳು. ಆದರೆ ಬಸ್ಸಿನಲ್ಲಿರುವ ಅಷ್ಟೂ ಜೀವಗಳು ನಮ್ಮ ಕೈಯಲ್ಲಿದೆ ಎಂಬ ಸಾಮಾನ್ಯ ಜ್ಞಾನ ಮಾತ್ರ ಆ ಬಸ್ಸಿನ ಡ್ರೈವರ್ ಮತ್ತು ಕಂಡಕ್ಟರ್ ಗಳಿಗೆ ಇರುತ್ತದೆ.
ಸಾವರ್ವಜನಿಕ ಸಾರಿಗೆಯ ಬಹುತೇಕ ಬಸ್ಸುಗಳ ಸ್ಥಿತಿ ಹೇಗಿರುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಬಸ್ಸಿನ ಬಹುತೇಕ ಪ್ರಮುಖ ಭಾಗಗಳು ಆ ದೇವರಿಗೇ ಪ್ರೀತಿ. ಅದರಲ್ಲೂ ನಮ್ಮ ರಸ್ತೆಗಳ ಮೇಲೆ ಈ ಬಸ್ಸುಗಳು ಸಂಚರಿಸುವ ಪರಿ ನೋಡಿದರೆ ನಾವು ಸೇರಬೇಕಾದ ಸ್ಥಳ ಸೇರಿಸಿ ಬಿಡಪ್ಪ ದೇವರೇ ಎಂದು ಬೇಡಿಕೊಳ್ಳುವುದೊಂದೇ ಪ್ರಯಾಣಿಕರ ಕೆಲಸ.
ಆದರೆ ಈ ಪರಿಸ್ಥತಿಗೆ ಕಾರಣ ಯಾರು? ಸುಖಾಸುಮ್ಮನೆ ಚಾಲಕ ಮತ್ತು ನಿರ್ವಾಹಕರನ್ನು ನಿಂದಿಸುವ ಸಾರ್ವಜನಿಕರು ಸಾರಿಗೆ ಇಲಾಖೆಯಲ್ಲಿನ ಹುಳುಕುಗಳ ಪರಿಚಯವೇ ಇರುವದಿಲ್ಲ. ಇದಕ್ಕೆಲ್ಲಾ ಉತ್ತರವೆಂಬಂತೆ ಬಹುತೇಕ ಮರಣಾವಸ್ಥೆಯಲ್ಲಿರುವ ಬಸ್ಸೊಂದರ ಚಾಲಕನ ಈ ವಿಡಿಯೋ ಉತ್ತರವಾಗಬಲ್ಲದು ನೋಡಿ.
ಧರ್ಮಸ್ಥಳ ಡಿಪೋಗೆ ಸೇರಿದ ಬಸ್ಸೊಂದರ ಚಾಲಕ ರಮೇಶ್, ಆ ಬಸ್ಸಿನ ದುಸ್ಥಿತಿ ಕುರಿತು ವಿವರಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲ ತಾಣಗಳಲ್ಲಿ ಭಾರೀ ಸದ್ದು ಮಾಡುತ್ತಿದೆ. ಬಸ್ಸಿನ ಚಕ್ರಗಳ ಎಲ್ಲ ಬೋಲ್ಟ್ ಗಳೂ ಸಡಿಲವಾಗಿದ್ದು, ಕೆಲವಂತೂ ಈಗಾಗಲೇ ಕಾಣೆಯಾಗಿವೆ. ಸ್ಟಿಯರಿಂಗ್ ಅಲುಗಾಡುತ್ತಿದ್ದು, ಯಾವ ಸಂದರ್ಭದಲ್ಲಿ ಕಿತ್ತು ಕೈಗೆ ಬರುವುದೋ ಖುದ್ದು ರಮೇಶ್ ಅವರಿಗೆ ಗೊತ್ತಿಲ್ಲ.
ಧರ್ಮಸ್ಥಳ ಮತ್ತು ಆ ಭಾಗದ ರಸ್ತೆಗಳೆಂದರೆ ಬಹುತೇಕ ಕಾಡು ಮತ್ತು ಘಾಟ್ ಗಳ ಮೂಲಕವೇ ಬಸ್ಸುಗಳು ಹಾದು ಹೋಗಬೇಕಾಗುತ್ತದೆ. ಆದರೆ ಸುಸ್ಥಿತಿಯಲ್ಲಿರದ ಬಸ್ಸುಗಳನ್ನು ಈ ಮಾರ್ಗದಲ್ಲಿ ಓಡಿಸುವ ಮೂಲಕ ಸಾರಿಗೆ ಇಲಾಖೆ ದಿವ್ಯ ನಿರ್ಲಕ್ಷ್ಯ ತೋರುತ್ತಿದೆ ಎಂಬುದು ಈ ವಿಡಿಯೋದಿಂದ ಸಾಬೀತಾಗಿದೆ. ಇನ್ನಾದರೂ ಸಾರಿಗೆ ಇಲಾಖೆ ಎಚ್ಚೆತ್ತುಕೊಂಡು ಪ್ರಯಾಣಿಕರು ಮತ್ತು ಸಿಬ್ಬಂದಿ ಹಿತದೃಷ್ಟಿಯಿಂದ ಉತ್ತಮ ಸ್ಥಿತಿಯ ಬಸ್ಸುಗಳನ್ನು ಒದಗಿಸಲಿ ಎಂಬುದು ಎಲ್ಲರ ಆಶಯ.
