ಬೆಂಗಳೂರು, (ಜೂ.26): ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೌಕರರ ಸಂಘಟನೆ ನಾಳೆ (ಗುರುವಾರ) ಬಂದ್ ಕರೆ ನೀಡಿದ್ದು, ಸರಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯವಾಗಬಹುದೆಂದು ಹೇಳಲಾಗುತ್ತಿದೆ. 

ಸಾರಿಗೆ ನೌಕರರು ಬೆಂಗಳೂರು ಚಲೋದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರಿಂದ ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಸಿ ಬಸ್‍ ಸಂಚಾರ ಅಸ್ತವ್ಯಸ್ತವಾಗಲಿದೆ, ಎಂಬ ಸುದ್ದಿಯೊಂದು ಹರಿದಾಡುತ್ತಿದ್ದು. ಈ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಸೃಷ್ಟಿಯಾಗಿದೆ.

ಗುರುವಾರ ಬಸ್‍ಗಳ ಸಂಚಾರದಲ್ಲಿ ವ್ಯತ್ಯಯವಾಗಲಿದೆ ಎಂದು ಸಂಘಟನೆಗಳು ಹೇಳುತ್ತಿವೆ. ಆದರೆ ಬಂದ್‌ಗೆ ಕರೆ ನೀಡಿರುವ ಸಾರಿಗೆ ಸಂಚಾರಿ ಸಿಬ್ಬಂದಿಗೂ, ದೈನಂದಿನ ಬಸ್ ಓಡಿಸುವ ನೌಕರರಿಗೂ ಸಂಬಂದವಿಲ್ಲ. ಆದ್ದರಿಂದ ಸಂಚಾರ ಚಟುವಟಿಕೆಗಳು ಅಭಾದಿತ ಎಂದು ಪ್ರತಿಭಟನೆ ಬಗ್ಗೆ ಸ್ಪಷ್ಟನೆ ನೀಡಿರುವ ಸಾರಿಗೆ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. 

ಸಾರ್ವಜನಿಕರು ಯಾವುದೇ ಗೊಂದಲಕ್ಕೀಡಾಗುವುದು ಬೇಡ. ಎಂದಿನಂತೆ ಕೆಎಸ್‌ಆರ್‌ಟಿ ಹಾಗೂ ಬಿಎಂಟಿಸಿ ಬಸ್‌ಗಳು ಸಂಚರಿಸಲಿವೆ, ಎಂದು ಸಂಚಾರಿ ಇಲಾಖೆ ಮೂಲಗಳು ವಿಶ್ವಾಸ ವ್ಯಕ್ತಪಡಿಸಿವೆ.