ವಾಯುವಜ್ರ, ವೋಲ್ವೋ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ಬೆಂಗಳೂರು, (ಸೆ.21): ವಾಯುವಜ್ರ, ವೋಲ್ವೋ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಕೆಎಸ್‌ಆರ್‌ಟಿಸಿ ತಿಳಿಸಿದೆ.

ವಾಯುವಜ್ರ, ವೋಲ್ವೋ ಸೇರಿದಂತೆ ಎಲ್ಲ ಬಗೆಯ ಬಸ್‌ಗಳಲ್ಲಿ ಸಂಪೂರ್ಣ ಅಂಧರಿಗೆ ಕಲ್ಪಿಸಲಾಗಿದ್ದ ಉಚಿತ ಸಂಚಾರ ಸೌಲಭ್ಯವನ್ನು ಹಿಂಪಡೆದಿದ್ದ ಕೆಎಸ್‌ಆರ್‌ಟಿಸಿ, ಮಾಮೂಲಿ ಬಸ್‌ಗಳಲ್ಲಿ ಮಾತ್ರ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿತ್ತು.

ಈ ಕ್ರಮ ಪ್ರಶ್ನಿಸಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ ರಾಷ್ಟ್ರೀಯ ಅಂಧರ ಒಕ್ಕೂಟ, ಕೆಎಸ್‌ಆರ್‌ಟಿಯ ಈ ನಿರ್ಣಯವು ಅಂಧರ ಹಕ್ಕಿಗೆ ಧಕ್ಕೆ ತರುತ್ತಿದೆ ಎಂದು ದೂರಿತ್ತು. ಗುರುವಾರ ಈ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ದಿನೇಶ್‌ ಮಹೇಶ್ವರಿ ಹಾಗೂ ನ್ಯಾಯಮೂರ್ತಿ ಎಸ್‌.ಜಿ.ಪಂಡಿತ್‌ ಅವರಿದ್ದ ವಿಭಾಗೀಯ ಪೀಠ ನಡೆಸಿತು.

ವಿಚಾರಣೆ ವೇಳೆ ವಾದಿಸಿದ ಕೆಎಸ್‌ಆರ್‌ಟಿಸಿ ಪರ ವಕೀಲರು, ವಾಯುವಜ್ರ ಹಾಗೂ ವೋಲ್ವೋ ಸೇರಿದಂತೆ ಎಲ್ಲ ವಿಧದ ಬಸ್‌ಗಳಲ್ಲಿ ಅಂಧರಿಗೆ ಉಚಿತವಾಗಿ ಸಂಚರಿಸಲು ಅವಕಾಶ ಮಾಡಿಕೊಡಲಾಗಿದೆ. 

ಹಿಂದಿನ ಸೇವೆ ಹಿಂಪಡೆದ ಆದೇಶವನ್ನು ಇದೀಗ ತಿದ್ದುಪಡಿ ಮಾಡಲಾಗಿದೆ ಎಂದು ತಿಳಿಸಿ ನ್ಯಾಯಪೀಠಕ್ಕೆ ತಿದ್ದುಪಡಿ ಆದೇಶದ ಪ್ರತಿ ಸಲ್ಲಿಸಿದರು. ಅದಕ್ಕೆ ಪ್ರತಿವಾದ ಮಂಡಿಸಿದ ಅರ್ಜಿದಾರರ ಪರ ವಕೀಲರು, ಭಾಗಶಃ ಅಂಧತ್ವ ಹೊಂದಿರುವವರಿಗೂ ಉಚಿತ ಬಸ್‌ ಪಾಸ್‌ ಸೌಲಭ್ಯ ದೊರಕಿಸಿಕೊಡಲು ನಿರ್ದೇಶನ ನೀಡಬೇಕು ಎಂದು ಕೋರಿದರು.

ಆದರೆ, ಈ ಮನವಿ ಪುರಸ್ಕರಿಸದ ನ್ಯಾಯಪೀಠ, ಆ ಕುರಿತು ಕೆಎಸ್‌ಆರ್‌ಟಿಸಿಗೆ ಮನವಿ ಸಲ್ಲಿಸಬೇಕು. ಕೆಎಸ್‌ಆರ್‌ಟಿಸಿಯು ಆ ಮನವಿ ಕುರಿತು ನಾಲ್ಕು ವಾರಗಳಲ್ಲಿ ನಿರ್ಧಾರ ಕೈಗೊಳ್ಳಬೇಕು ಎಂದು ಆದೇಶಿಸಿ ಅರ್ಜಿ ಇತ್ಯರ್ಥಪಡಿಸಿತು.