Asianet Suvarna News Asianet Suvarna News

ಮತ್ತೆ ಶುರುವಾಯ್ತು ಕೆಎಎಸ್ ಅಧಿಕಾರಿಗಳ ವಲಯದಲ್ಲಿ ನಡುಕ

ಕರ್ನಾಟಕ ಲೋಕಸೇವಾ ಆಯೋಗ 1998, 1999 ಮತ್ತು 2004ನೇ ಸಾಲಿನಲ್ಲಿ ನಡೆಸಿದ್ದ ಕೆಎಎಸ್​ ಅಧಿಕಾರಿಗಳ ನೇಮಕಾತಿ ಪ್ರಕರಣ ಮತ್ತೆ ಸುದ್ದಿಯಾಗಿದೆ. ಈ ಮೂರೂ ಸಾಲಿನಲ್ಲಿ ನೇಮಕವಾಗಿದ್ದ ಕೆಎಎಸ್​ ಅಧಿಕಾರಿಗಳ ವಲಯದಲ್ಲಿ ಮತ್ತೊಂದು ಸುತ್ತಿನ ನಡುಕ ಶುರುವಾಗಿದೆ.

KPSC Scandal come to lamelight

ಬೆಂಗಳೂರು (ನ.25): ಕರ್ನಾಟಕ ಲೋಕಸೇವಾ ಆಯೋಗ 1998, 1999 ಮತ್ತು 2004ನೇ ಸಾಲಿನಲ್ಲಿ ನಡೆಸಿದ್ದ ಕೆಎಎಸ್​ ಅಧಿಕಾರಿಗಳ ನೇಮಕಾತಿ ಪ್ರಕರಣ ಮತ್ತೆ ಸುದ್ದಿಯಾಗಿದೆ. ಈ ಮೂರೂ ಸಾಲಿನಲ್ಲಿ ನೇಮಕವಾಗಿದ್ದ ಕೆಎಎಸ್​ ಅಧಿಕಾರಿಗಳ ವಲಯದಲ್ಲಿ ಮತ್ತೊಂದು ಸುತ್ತಿನ ನಡುಕ ಶುರುವಾಗಿದೆ.

ಹೈಕೋರ್ಟ್​ನ ಡಿವಿಜನ್​ ಬೆಂಚ್​ ಅಂತಿಮ ತೀರ್ಪು ಕೊಟ್ಟು 4 ತಿಂಗಳಾದ ಮೇಲೆ ಅಕ್ರಮ ಫಲಾನುಭವಿಗಳ ವಿರುದ್ಧ ಕ್ರಿಮಿನಲ್​ ಮೊಕದ್ದಮೆ ಹಾಕುವುದಕ್ಕೆ ಅನುಮತಿ ಕೋರಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಕೆಯಾಗಿದೆ.

479 ಅಕ್ರಮ ಫಲಾನುಭವಿಗಳ ವಿರುದ್ಧ ಕ್ರಮ

ಈ ಮೂರೂ ಬ್ಯಾಚ್‌ಗಳಲ್ಲಿ ನಡೆದಿದ್ದ ನೇಮಕ ಪ್ರಕ್ರಿಯೆ ಸಂಪೂರ್ಣ ಅಸಂವಿಧಾನಾನಿಕ ಅಂತ  ಹೈಕೋರ್ಟ್ ತೀರ್ಪು ನೀಡಿತ್ತು. ಆಯ್ಕೆಯಾಗಿರುವ ಅಧಿಕಾರಿಗಳು  ಈಗಾಗಲೇ ಸುಪ್ರೀಂ ಕೋರ್ಟ್​ನಲ್ಲಿ ವಿಶೇಷ ಮನವಿ ಸಲ್ಲಿಸಿದ್ದಾರೆ. ಇನ್ನೇನು ಮೂರ್ನಾಲ್ಕು ದಿನದಲ್ಲಿ ಈ ಅರ್ಜಿ ಸುಪ್ರೀಂ ಕೋರ್ಟ್​ ಮುಂದೆ ವಿಚಾರಣೆಗೆ ಬರುತ್ತದೆ. ಇದರ ಬೆನ್ನಲ್ಲೇ, ಅಕ್ರಮ ಫಲಾನುಭವಿಗಳ ವಿರುದ್ಧ ನ್ಯಾಯಾಲಯದಲ್ಲಿ ಕ್ರಿಮಿನಲ್​ ಮೊಕದ್ದಮೆ ದಾಖಲಿಸುವುದಕ್ಕೆ ಅನುಮತಿ ಕೊಡಬೇಕು ಎಂದು ಖಲೀಲ್ ಅಹ್ಮದ್ ಮತ್ತು ಇತರರು ಮುಖ್ಯ ಕಾರ್ಯದರ್ಶಿ, ರಾಜ್ಯಪಾಲರಿಗೆ ಈ ಮನವಿ ಸಲ್ಲಿಸಿದ್ದಾರೆ.

3 ತಿಂಗಳಲ್ಲಿ ಅನುಮತಿ ನೀಡಬೇಕು

ಅರ್ಜಿ ಸಲ್ಲಿಸಿದ 3 ತಿಂಗಳೊಳಗೆ ಮುಖ್ಯ ಕಾರ್ಯದರ್ಶಿಗಳು ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು. ಒಂದು ವೇಳೆ ಅನುಮತಿ ನೀಡದಿದ್ದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಲಾಗಿದೆ ಎಂದು ಭಾವಿಸಿ ಅರ್ಜಿದಾರರೇ ಸ್ವಯಂ ಪ್ರೇರಿತರಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಹಕ್ಕು ಹೊಂದಿದ್ದಾರೆ. 

ಕೆಪಿಎಸ್​ಸಿ ಮಾಜಿ ಕಾರ್ಯದರ್ಶಿಗಳಿಗೂ ಬರಲಿದೆಯಾ ಕುತ್ತು?

ಗೆಜೆಟೆಡ್ ಪ್ರೊಬೇಷನರಿ ಹುದ್ದೆಗಳಿಗೆ ನಡೆದಿದ್ದ ನೇಮಕ ಪ್ರಕ್ರಿಯೆಗಳಿಗೆ ಸಂಬಂಧಿಸಿದಂತೆ ಕೇವಲ ಅಕ್ರಮ ಫಲಾನುಭವಿ ಅಧಿಕಾರಿಗಳ ವಿರುದ್ಧವಷ್ಟೇ ಕ್ರಿಮಿನಲ್​ ಮೊಕದ್ದಮೆ ದಾಖಲಿಸ್ಲಿಕ್ಕೆ ಅನುಮತಿ ಕೇಳಿಲ್ಲ. ಬದಲಿಗೆ, ಕೆಪಿಎಸ್‌ಸಿಯ ಈ ಹಿಂದಿನ ಕಾರ್ಯದರ್ಶಿ ಮನೋಜ್‌ಕುಮಾರ್ ಮೀನಾ. ಬಿ.ಎಸ್.ರಾಮಪ್ರಸಾದ್, ಬಿ.ಎ.ಹರೀಶ್‌ಗೌಡ, ಎ.ಕೆ.ಮೊನ್ನಪ್ಪ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಿಂದಿನ ಕಾರ್ಯದರ್ಶಿ ಕೆ.ಆರ್.ಶ್ರೀನಿವಾಸ್​ ಅವ್ರ ವಿರುದ್ಧವೂ ಕ್ರಿಮಿನಲ್​ ಮೊಕದ್ದಮೆ ದಾಖಲಿಸ್ಲಿಕ್ಕೆ ಅನುಮತಿ ನೀಡಬೇಕು ಅಂತ ಮನವಿಯಲ್ಲಿ ಕೋರಲಾಗಿದೆ.

ಕೆಪಿಎಸ್​ಸಿ ಮಾಜಿ ಸದಸ್ಯರಿಗೂ ಕಂಟಕ

ಇನ್ನು,   ಆಯೋಗದ ಸದಸ್ಯ ಎಚ್.ಎಸ್.ಪಾಟೀಲ್,ಮೊಹ್ಮದ್ ಆಲಿ ಖಾನ್, ಲಿಲಿಯನ್ ಕ್ಸೇವಿಯರ್, ದಾಸಯ್ಯ,ಡಾ.ವೆಂಕಟಸ್ವಾಮಿ,  ಆಯೋಗದ ಹಿಂದಿನ ಕಾರ್ಯದರ್ಶಿ ಕೆ.ಆರ್.ಸುಂದರ,  ಅರುಣಾಚಲಂ ವಿರುದ್ಧವೂ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲು ಅನುಮತಿ ನೀಡಬೇಕು ಎಂದು ಅರ್ಜಿದಾರರು ಮನವಿಯಲ್ಲಿ ಕೋರಿದ್ದಾರೆ.

ಮೂರೂ ಬ್ಯಾಚ್‌ಗಳಲ್ಲಿ ನೇಮಕವಾಗಿದ್ದ 727 ಅಭ್ಯರ್ಥಿಗಳ ಪೈಕಿ  ಒಟ್ಟು 479 ಮಂದಿಯನ್ನು ಅಕ್ರಮ ಫಲಾನುಭವಿಗಳು ಎಂದು ಸಿಐಡಿ ಮತ್ತು ಹೈಕೋರ್ಟ್ ರಚಿಸಿದ್ದ ಸತ್ಯಶೋಧನೆ ಸಮಿತಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಅಪ್ತ ಕಾರ್ಯದರ್ಶಿಯಾಗಿದ್ದ ಕರಿಗೌಡ, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ಆಪ್ತ ಕಾರ್ಯದರ್ಶಿ ಪ್ರಭುಲಿಂಗ ಕವಳಿಕಟ್ಟಿ,  ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್ ಅವರ ಆಪ್ತ ಕಾರ್ಯದರ್ಶಿ ಡಾ.ಶಿವಶಂಕರ್, ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿ ನಾಗೇಂದ್ರ ಪ್ರಸಾದ್, ಅಲ್ಪಸಂಖ್ಯಾತರ ಕಲ್ಯಾಣ ನಿರ್ದೇಶನಾಲಯದ ನಿರ್ದೇಶಕ ಅಕ್ರಂ ಪಾಶ, ಖಜಾನೆ ಇಲಾಖೆಯ ನಿರ್ದೇಶಕರಾದ ಕೆ.ಜ್ಯೋತಿ, ಹಾಸನ ಹೆಚ್ಚುವರಿ ಜಿಲ್ಲಾಧಿಕಾರಿ ಎಚ್.ಎನ್.ಗೋಪಾಲಕೃಷ್ಣ  ಸೇರಿದಂತೆ ಸರ್ಕಾರದ ಆಯಕಟ್ಟಿನ ಹುದ್ದೆಯಲ್ಲಿ ಹಲವರು ಕಾರ್ಯನಿರ್ವಹಿಸ್ತಿದಾರೆ.

ವರದಿ: ಜಿ.ಮಹಾಂತೇಶ್

 

 

 

 

Latest Videos
Follow Us:
Download App:
  • android
  • ios