ಚುನಾವಣಾ ಮೈತ್ರಿ : ಕೆಪಿಸಿಸಿ ಅಧ್ಯಕ್ಷರ ಹೊಸ ಸುಳಿವು

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Aug 2018, 7:44 AM IST
KPCC President Met JDS Leader HD Devegowda
Highlights

ಕರ್ನಾಟಕದಲ್ಲಿ ಈಗಾಗಲೇ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿದ್ದು ಇದೀಗ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳಬೇಕೋ ಬೇಡವೋ ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ. 

ಬೆಂಗಳೂರು :  ಸ್ಥಳೀಯ ಸಂಸ್ಥೆ ಚುನಾವಣೆ ನಂತರವೇ ಲೋಕಸಭಾ ಚುನಾವಣೆಯ ಮೈತ್ರಿ ನಿರ್ಧಾರ ಪ್ರಕಟಿಸಲು ಹಾಗೂ ಸ್ಥಳೀಯ ಚುನಾವಣೆಯಲ್ಲಿ ಉಭಯ ಪಕ್ಷಗಳು ಪೈಪೋಟಿ ನಡೆಸಬೇಕಾಗಿ ಬಂದರೆ ಅದು ಮೈತ್ರಿ ಮೇಲೆ ಪರಿಣಾಮ ಬೀರದಂತೆ ಎಚ್ಚರಿಕೆ ವಹಿಸಲು ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ನಿರ್ಧರಿಸಿವೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರನ್ನು ಭೇಟಿ ಮಾಡಿದ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಇಂತಹದೊಂದು ಸೂಚನೆಯನ್ನು ನೀಡಿದ್ದಾರೆ. ದೇವೇಗೌಡರ ಭೇಟಿಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮೈತ್ರಿ ಕಷ್ಟ. ಆದರೆ, ಈ ಚುನಾವಣೆ ವೇಳೆ ನಡೆಸುವ ಪೈಪೋಟಿ ಮೈತ್ರಿಗೆ ಮುಜುಗರ ತರದಂತೆ ಎಚ್ಚರಿಕೆ ವಹಿಸಲಾಗುವುದು ಎಂದರು.

ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿಗೆ ಸಂಬಂಧಿಸಿದ ತೀರ್ಮಾನವನ್ನು ಸ್ಥಳೀಯ ನಾಯಕರಿಗೆ ಬಿಟ್ಟುಕೊಡಲು ಕಾಂಗ್ರೆಸ್ ನಿರ್ಧಾರ ಮಾಡಿದೆ. ಶುಕ್ರವಾರ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಈ ಕುರಿತು ತೀರ್ಮಾನವನ್ನು ಕೈಗೊ ಳ್ಳಲಾಗಿತ್ತು. ಹೀಗಾಗಿ ಲೋಕಲ್ ಚುನಾ ವಣೆಯಲ್ಲಿ ನಡೆಯುವ ಪೈಪೋಟಿ ಮೈತ್ರಿ ಸರ್ಕಾರದ ಮೇಲೆ ಯಾವುದೇ ಪರಿಣಾಮ ಬೀರ ದಂತೆ ಹಾಗೂ ಮೈತ್ರಿ ಪಕ್ಷಗಳಿಗೆ ಮುಜುಗರ ಉಂಟಾಗದಂತೆ ನೋಡಿ ಕೊಳ್ಳುವ ಅಗತ್ಯವಿತ್ತು. 

ಈ ಹಿನ್ನೆಲೆಯಲ್ಲಿ ಶನಿವಾರ ದೇವೇಗೌಡರನ್ನು ಭೇಟಿ ಮಾಡಿದ ದಿನೇಶ್ ಗುಂಡೂರಾವ್, ಲೋಕಸಭಾ ಚುನಾವಣಾ ಮೈತ್ರಿ ಬಗ್ಗೆ ಸ್ಥಳೀಯ ಸಂಸ್ಥೆ ಚುನಾವಣೆ ನಂತರವೇ ನಿರ್ಧಾರ ಪ್ರಕಟಿಸುವ ಕುರಿತು ಮಾತುಕತೆ ನಡೆಸಿದರು ಎನ್ನಲಾಗಿದೆ. ದೇವೇಗೌಡರ ಭೇಟಿಯನ್ನು ಔಪಚಾರಿಕ ಎಂದು ಬಣ್ಣಿಸಿದ ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷರಾದ ನಂತರ ದೇವೇಗೌಡರನ್ನು ತಾವು ಭೇಟಿಯಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಶನಿವಾರ ಭೇಟಿಯಾಗಿದ್ದಾಗಿ ಹೇಳಿದರು. 

ಸ್ಥಳೀಯ ಸಂಸ್ಥೆಗಳ ಚುನಾವಣೆ ಮೈತ್ರಿ ವಿಚಾರದ ಬಗ್ಗೆ ಜೆಡಿಎಸ್ ಅಧ್ಯಕ್ಷರೂ ಆಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಬೇಕಿದೆ. ಬಹುತೇಕ ಭಾನುವಾರ ಅವರೊಂದಿಗೆ ಮಾತುಕತೆ ನಡೆಯಬಹುದು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಮಾಡಿಕೊಳ್ಳುವುದು ಕಷ್ಟ. ಹೀಗಾಗಿ, ಯಾವುದೇ ನಿರ್ಧಾರ ಕೈಗೊಂಡರೂ ಮೈತ್ರಿಗೆ ಮುಜುಗರವಾಗದಂತೆ ನೋಡಿಕೊಳ್ಳಲಾಗುವುದು ಎಂದು ತಿಳಿಸಿದರು.

ಸಮನ್ವಯ ಸಮಿತಿಗೆ ತಮ್ಮ ಸೇರ್ಪಡೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ. ಅದೇ ರೀತಿ  ಜೆಡಿಎಸ್‌ಗೂ ಇನ್ನೂ ಹೊಸ ಅಧ್ಯಕ್ಷರು ಬರಬೇಕಿದೆ. ಹೊಸ ಅಧ್ಯಕ್ಷರು ಬಂದಾಗ ಅವರ ಸೇರ್ಪಡೆಯ ಕುರಿತು ಉಭಯ ಪಕ್ಷಗಳ ನಾಯಕರು ಸೇರಿ ಸೂಕ್ತ ತೀರ್ಮಾನ ಕೈಗೊಳ್ಳುತ್ತಾರೆ ಎಂದರು. 

loader