ಬೆಂಗಳೂರು :  ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿಯ ಯುವ ಹಾಗೂ ನೂತನ ಸಾರಥಿಯಾಗಿ ದಿನೇಶ್‌ ಗುಂಡೂರಾವ್‌ ಬುಧವಾರ ನಡೆದ ಅದ್ಧೂರಿ ಸಮಾರಂಭದಲ್ಲಿ ಪದಗ್ರಹಣ ಮಾಡಿದರು.

ಎಂಟು ವರ್ಷಗಳ ಸುದೀರ್ಘ ಕಾಲ ಕೆಪಿಸಿಸಿ ಅಧ್ಯಕ್ಷರಾಗಿದ್ದ ಡಾ.ಜಿ. ಪರಮೇಶ್ವರ್‌ ಅವರಿಂದ ‘ಪರಮಾಧಿಕಾರ’ ಸ್ವೀಕರಿಸಿದ ಅವರು, ‘ನಾನು ಯಾವ ನಾಯಕನ ಪರವೂ ಅಲ್ಲ, ಯಾರ ವಿರುದ್ಧವೂ ಅಲ್ಲ. ಕಾಂಗ್ರೆಸ್‌ ಪಕ್ಷದ ಪರ. ಪಕ್ಷ ಕಟ್ಟಲು ಸಹಕರಿಸಿದವರಿಗೆ ಮಾತ್ರ ನಾನು ಬೆಂಬಲ ನೀಡುತ್ತೇನೆ. ಪಕ್ಷಕ್ಕಾಗಿ ದುಡಿಯದೆ ಅಧಿಕಾರ ಕೇಳುವವರನ್ನು ಹತ್ತಿರಕ್ಕೂ ಬಿಟ್ಟುಕೊಳ್ಳುವುದಿಲ್ಲ’ ಎಂದು ಖಡಕ್‌ ಸೂಚನೆ ನೀಡಿದರು.

ನಗರದ ಅರಮನೆ ಮೈದಾನದ ತ್ರಿಪುರವಾಸಿನಿಯಲ್ಲಿ ಏರ್ಪಡಿಸಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ಪರಮೇಶ್ವರ್‌ ಅವರಿಂದ ಪಕ್ಷದ ಬಾವುಟ ಪಡೆಯುವ ಮೂಲಕ ಅಧಿಕಾರ ಸ್ವೀಕಾರ ಮಾಡಿದರು. ಇದೇ ವೇಳೆ ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷರಾಗಿ ಈಶ್ವರ್‌ ಖಂಡ್ರೆ ಅವರು ಪದಗ್ರಹಣ ಮಾಡಿದರು.

ಬಳಿಕ ಮಾತನಾಡಿದ ದಿನೇಶ್‌ ಗುಂಡೂರಾವ್‌, ಅಧಿಕಾರ ದೊರೆತರೆ ಮಾತ್ರ ಪಕ್ಷದಲ್ಲಿ ಇರುತ್ತೇನೆ ಇಲ್ಲದಿದ್ದರೆ ಇಲ್ಲ ಎಂಬ ಮನಸ್ಥಿತಿಯನ್ನು ನಾವು ಒಪ್ಪಲು ಸಿದ್ಧರಿಲ್ಲ. ಇಲ್ಲಿ ವ್ಯಕ್ತಿಗಿಂತ ಪಕ್ಷ ದೊಡ್ಡದು, ಪಕ್ಷ ಉಳಿಸಿ ಬೆಳೆಸಲು ನನಗೆ ಸಹಕಾರ ನೀಡಿದವರಿಗೆ ಮಾತ್ರ ಬೆಂಬಲ ನೀಡುತ್ತೇನೆ. ನಿಷ್ಠಾವಂತ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ನೀಡುತ್ತೇನೆಯೇ ಹೊರತು, ಗತ್ತು ಮಾಡಿಕೊಂಡು ನಾಯಕರ ಸೇವೆಯಲ್ಲಿ ಮುಳುಗುವವರಿಗೆ ಅವಕಾಶ ನೀಡುವುದಿಲ್ಲ ಎಂದು ಮೊದಲ ಭಾಷಣದಲ್ಲೇ ಸ್ಪಷ್ಟಎಚ್ಚರಿಕೆ ರವಾನಿಸಿದರು.

ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಪಕ್ಷವನ್ನು ಗೆಲ್ಲಿಸುವುದೇ ನಮ್ಮ ಗುರಿಯಾಗಿ ಪ್ರಯತ್ನ ಮುಂದುವರೆಸಬೇಕಿದೆ. ಕೇಂದ್ರದಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಬರುವುದು ಖಚಿತ. ಇದಕ್ಕೆ ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ಗೆಲ್ಲಿಸಬೇಕಿದೆ. ಈ ಮೂಲಕ ರಾಹುಲ್‌ ಗಾಂಧಿ ಅವರನ್ನು ಪ್ರಧಾನಮಂತ್ರಿ ಮಾಡಬೇಕಿದೆ ಎಂದು ಕರೆ ನೀಡಿದರು.

ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ನರೇಂದ್ರ ಮೋದಿ ಸರ್ಕಾರ ಯಾವುದೇ ಕಾರ್ಯಕ್ರಮ ನೀಡಿಲ್ಲ. ಚುನಾವಣೆ ಪೂರ್ವದಲ್ಲಿ ನೀಡಿದ್ದ ಎಲ್ಲಾ ಭರವಸೆಗಳನ್ನು ಹುಸಿ ಮಾಡಿದ್ದಾರೆ. ಆದರೆ, ಸಮಾಜದಲ್ಲಿ ಅಶಾಂತಿ ಮೂಡಿಸಿ ಬಿಜೆಪಿ ವಿರುದ್ಧ ಮಾತನಾಡುವವರ ಧ್ವನಿ ಅಡಗಿಸುವ ಮೂಲಕ ಅಧಿಕಾರ ನಡೆಸುತ್ತಿದ್ದಾರೆ. ದೇಶದಲ್ಲಿ ಅಲ್ಪಸಂಖ್ಯಾತರು ಹಾಗೂ ದಲಿತರಿಗೆ ರಕ್ಷಣೆ ಇಲ್ಲ. ಮಾಧ್ಯಮಗಳು ಸೇರಿದಂತೆ ಪ್ರಜಾಪ್ರಭುತ್ವದ ಅಂಗಗಳಿಗೆ ಉಸಿರುಗಟ್ಟಿಸುವ ವಾತಾವರಣ ಸೃಷ್ಟಿಸಲಾಗಿದೆ. ಅಲ್ಪಸಂಖ್ಯಾತರನ್ನು ನೇಣು ಬಿಗಿಯುವ ಹಾಗೂ ದಲಿತರ ಮೇಲೆ ದೌರ್ಜನ್ಯ ನಡೆಸುವ ಘಟನೆಗಳು ಹೆಚ್ಚಾಗುತ್ತಿವೆ.

ಬಿಜೆಪಿ ವಿಚಾರಗಳ ವಿರುದ್ಧ ಮಾತನಾಡುವವರ ಧ್ವನಿ ದಮನಗೊಳಿಸಲಾಗುತ್ತಿದೆ. ಇದೇ ಕಾರಣಕ್ಕೆ ಕಲಬುರ್ಗಿ ಹಾಗೂ ಗೌರಿ ಲಂಕೇಶ್‌ರ ಹತ್ಯೆಯಾಗಿದೆ. ಇಂತಹ ಮತೀಯ ಶಕ್ತಿಗಳನ್ನು ದಮನಗೊಳಿಸಲು ಹಾಗೂ ದೇಶದಲ್ಲಿ ಮುಕ್ತ ವಾತಾವರಣ ನಿರ್ಮಿಸಲು ನಾವು ಮುಂದಾಗಬೇಕಿದೆ. ಹೀಗಾಗಿ ಜಾತ್ಯತೀತ ಶಕ್ತಿಗಳನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಕರೆ ನೀಡಿದರು.

ಕೆಪಿಸಿಸಿ ನೂತನ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಮಾತನಾಡಿ, 133 ವರ್ಷದ ಸುದೀರ್ಘ ಇತಿಹಾಸದ ಪಕ್ಷವು ಸೂರ್ಯ ಚಂದ್ರರು ಇರುವವರೆಗೂ ಇರುತ್ತದೆ. ಇದನ್ನು ಮತ್ತಷ್ಟುಬಲಿಷ್ಠವಾಗಿ ಕಟ್ಟಲು ನನ್ನದೇ ಆದ ಕಾರ್ಯಕ್ರಮ ಹೊಂದಿದ್ದೇನೆ. ಅವುಗಳನ್ನು ಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ಬಿಜೆಪಿಯನ್ನು ಬುಡ ಸಮೇತ ಕಿತ್ತೆಸೆಯುವ ಕೆಲಸ ಮಾಡುತ್ತೇನೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಟೀಕೆ ಮಾಡಲು ವಸ್ತುಗಳೇ ಇರಲಿಲ್ಲ. ಆದರೂ, ಅಪಪ್ರಚಾರ ಮಾಡುವ ಮೂಲಕ ಜನರನ್ನು ತಪ್ಪು ದಾರಿಗೆ ಎಳೆದರು. ಇದೀಗ ಲೋಕಸಭೆ ಚುನಾವಣೆ ಡಿಸೆಂಬರ್‌ನಲ್ಲೇ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸಾಮಾಜಿಕ ಜಾಲತಾಣ ವಿಭಾಗವನ್ನು ಸದೃಢ ಮಾಡಬೇಕಿದೆ. ಇಡೀ ದೇಶದಲ್ಲಿ ಬಿಜೆಪಿಯನ್ನು ಕಿತ್ತೊಗೆಯಲಾಗುವುದು ಎಂದು ಹೇಳಿದರು.

ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಮಾತನಾಡಿ, ದೇಶದ ಜನ ನರೇಂದ್ರ ಮೋದಿ ಆಡಳಿತದ ಬಗ್ಗೆ ಸಂತೃಪ್ತಿ ಹೊಂದಿಲ್ಲ. ಹೀಗಾಗಿ ಅವಧಿ ಪೂರ್ವ ಚುನಾವಣೆಗೆ ಹೋಗಲು ಸಜ್ಜಾಗುತ್ತಿದ್ದಾರೆ. ಹೀಗಾಗಿ ಲೋಕಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿ ಹೋರಾಡಬೇಕಿದೆ ಎಂದು ಕರೆ ನೀಡಿದರು.

ವಿಧಾನಸಭೆ ಚುನಾವಣೆಯಲ್ಲಿನ ಕಾಂಗ್ರೆಸ್‌ ಸೋಲಿಗೆ ಬಿಜೆಪಿಯ ಸುಳ್ಳುಗಳು ಕಾರಣವಾಗಿದ್ದವು. ನೈತಿಕ ರಾಜಕಾರಣ ಮಾಡದೆ ಸುಳ್ಳುಗಳ ಮೂಲಕ ಕಾಂಗ್ರೆಸ್‌ ಕಾರ್ಯಕ್ರಮಗಳ ಬಗ್ಗೆ ಅಪಪ್ರಚಾರ ನಡೆಸಿದರು. ಇದೀಗ ನಮ್ಮ ಪಕ್ಷದಲ್ಲಿ ಭಿನ್ನಾಭಿಪ್ರಾಯಗಳಿದ್ದರೂ ಬದಿಗೊತ್ತಿ ರಾಹುಲ್‌ ಗಾಂಧಿಯವರನ್ನು ಪ್ರಧಾನಮಂತ್ರಿ ಮಾಡುವ ಒಂದೇ ಗುರಿಗಾಗಿ ಕೆಲಸ ಮಾಡಬೇಕು ಎಂದು ಕರೆ ನೀಡಿದರು.

ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್‌ ಮಾತನಾಡಿ, ಹಿರಿಯ ಸದಸ್ಯರಾದರೂ ಅಧಿಕಾರ ಸಿಗದಿದ್ದಾಗ ತಾಳ್ಮೆ ವಹಿಸಬೇಕು. ನನಗೆ ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಹಲವು ದಿನ ಹೊರಗಿಟ್ಟಿದ್ದರು. ಆಗ ಶಾಂತ ರೀತಿಯಲ್ಲಿ ಕಾಯುತ್ತಿದ್ದರಿಂದ ಈಗ ಅಧಿಕಾರ ಬಂದಿದೆ. ಅದೇ ರೀತಿ ದಿನೇಶ್‌ ಗುಂಡೂರಾವ್‌ ಅವರಿಗೂ ಸಹ ಜವಾಬ್ದಾರಿ ದೊರೆತಿದೆ ಎಂದರು.

ಪ್ರಜಾಪ್ರಭುತ್ವ ಉಳಿಸಲು ಗೆಲ್ಲಬೇಕಿದೆ: ಪರಂ

ಕೋಮು ಪ್ರಚೋದನೆ ನೀಡುವ ಹಾಗೂ ಸಂವಿಧಾನ ಬದಲಿಸುವ ಮೂಲಕ ಪ್ರಜಾಪ್ರಭುತ್ವದ ಅಸ್ತಿತ್ವವನ್ನೇ ಕಳೆಯಲು ಮುಂದಾಗಿರುವ ಬಿಜೆಪಿಯನ್ನು ಕಿತ್ತೊಗೆದು ಮತ್ತೆ ಕೇಂದ್ರದಲ್ಲಿ ಕಾಂಗ್ರೆಸ್‌ನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್‌ ಹೇಳಿದರು.

ಕೆಪಿಸಿಸಿ ಅಧ್ಯಕ್ಷರಾಗಿ ತಮ್ಮ ಕೊನೆಯ ಭಾಷಣ ಮಾಡಿದ ಉಪಮುಖ್ಯಮಂತ್ರಿ ಪರಮೇಶ್ವರ್‌, ನರೇಂದ್ರ ಮೋದಿ ನೇತೃತ್ವದಲ್ಲಿ ದೇಶವು ಎಲ್ಲಾ ರೀತಿಯಲ್ಲೂ ಅಧಃಪತನಕ್ಕೆ ಜಾರುತ್ತಿದೆ. ಡಾ.ಮನಮೋಹನ್‌ ಸಿಂಗ್‌ ಅವಧಿಯಲ್ಲಿ ಸುಭದ್ರ ಅಡಿಪಾಯ ಹೊಂದಿದ್ದ ಆರ್ಥಿಕ ವ್ಯವಸ್ಥೆ ಅಲುಗಾಡತೊಡಗಿದೆ. ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿದ್ದ ದೇಶ ಅವನತಿಯತ್ತ ಹೆಜ್ಜೆ ಹಾಕಿದೆ. ಸಂವಿಧಾನ ಬದಲಿಸುವ ಮಾತುಗಳನ್ನು ಆಡುತ್ತಿದ್ದಾರೆ. ಸಂವಿಧಾನ ಬದಲಾದರೆ ಪ್ರಜಾಪ್ರಭುತ್ವ ಹಾಳಾಗುತ್ತದೆ. ಹೀಗಾಗಿ ಕಾಂಗ್ರೆಸ್‌ ಪಕ್ಷವು ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಅನಿವಾರ್ಯ ಎಂದು ಹೇಳಿದರು.

ಕಾಂಗ್ರೆಸ್‌ ಪರಂಪರೆ ಮುಂದುವರೆಯಲಿ:  ದಿನೇಶ್‌ ಗುಂಡೂರಾವ್‌ರನ್ನು ನಾನೇ ಬೆಂಗಳೂರು ನಗರ ಕಾಂಗ್ರೆಸ್‌ ಅಧ್ಯಕ್ಷನಾಗಿ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷನಾಗಿ ನೇಮಕ ಮಾಡಿದ್ದೆ. ಇದೀಗ ನಾನೇ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿದ್ದೇನೆ. ಇದು ನನ್ನ ಅದೃಷ್ಟ. ಕಾಂಗ್ರೆಸ್‌ ಪರಂಪರೆ ಮುಂದುವರೆಸಿಕೊಂಡು ಹೋಗಲು ಅನುವಾಗಲಿ ಎಂದು ಹೇಳಿದರು.

7 ವರ್ಷ 8 ತಿಂಗಳ ಹಿಂದೆ ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡಿದ್ದೆ. 2 ಬಾರಿ ವಿಧಾನಸಭೆ ಹಾಗೂ ಒಂದು ಬಾರಿ ಲೋಕಸಭೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಿ ಪಕ್ಷವನ್ನು ಸದೃಢವಾಗಿ ಕಟ್ಟಿದ್ದೇವೆ. ಹೊಸದಾಗಿ ಜವಾಬ್ದಾರಿ ತೆಗೆದುಕೊಂಡಿರುವ ದಿನೇಶ್‌ ಗುಂಡೂರಾವ್‌ ಅವರಿಗೆ ಎಲ್ಲಾ ಸಹಕಾರ ನೀಡುತ್ತೇವೆ ಎಂದರು.