ಬೆಂಗಳೂರು [ಜು.30]:  ವಿಧಾನಸಭೆ ಅಧ್ಯಕ್ಷರಾದ ಕೆ.ಆರ್‌. ರಮೇಶ್‌ಕುಮಾರ್‌ ಅವರು ಕಾನೂನಿನ ಪ್ರಕಾರ ಶಾಸಕರ ಅನರ್ಹತೆ ಆದೇಶ ಹೊರಡಿಸಿದ್ದಾರೆ. ಬಿಜೆಪಿಯವರು ಅದನ್ನು ಸ್ವಾಗತ ಮಾಡುವ ಬದಲು ಟೀಕೆ ಮಾಡುತ್ತಿದ್ದಾರೆ. ಈ ಮೂಲಕ ತಮಗೆ ಮಾನ ಮರ್ಯಾದೆ ಇಲ್ಲ ಹಾಗೂ ತಾವು ಸಮಯಸಾಧಕರು ಎಂಬುದನ್ನು ಸಾಬೀತು ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸ್ಪೀಕರ್‌ ಆದೇಶದ ಬಗ್ಗೆ ಟೀಕೆ ಮಾಡುತ್ತಿದ್ದಾರೆ. ಅಧಿಕಾರದ ದಾಹಕ್ಕಾಗಿ ಆಸೆ, ಆಮಿಷಗಳನ್ನು ತೋರಿಸಿ ಶಾಸಕರನ್ನು ಸೆಳೆಯುವ ಬಿಜೆಪಿಯವರಿಗೆ ಸ್ಪೀಕರ್‌ ಆದೇಶದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ಅನರ್ಹತೆಗೊಂಡ ಶಾಸಕರ ಬಗ್ಗೆ ಬಿಜೆಪಿಯವರು ಏಕೆ ಅಷ್ಟು ಕಾಳಜಿ ತೋರುತ್ತಿದ್ದಾರೆಂಬುದು ಇಡೀ ರಾಜ್ಯಕ್ಕೆ ಗೊತ್ತಾಗಿದೆ ಎಂದು ಕಿಡಿ ಕಾರಿದರು.

ಹಿಂದಿನ ಸ್ಪೀಕರ್‌ ಅವರು ಸದನದಲ್ಲೇ ಅಷ್ಟುಮಂದಿ ಶಾಸಕರನ್ನು ವಿನಾಕಾರಣ ಅನರ್ಹಗೊಳಿಸಿದ್ದನ್ನು ನಾವು ಒಪ್ಪಿಕೊಳ್ಳಬೇಕು. ಇದೀಗ ನಿಯಮಾನುಸಾರ ಮಾಡಿರುವ ಆದೇಶವನ್ನು ಇವರು ಒಪ್ಪುವುದಿಲ್ಲ. ಕಾಂಗ್ರೆಸ್‌ ನೀಡಿರುವ ವಿಪ್‌ಗೆ ಕಿಮ್ಮತ್ತಿಲ್ಲ ಎಂದು ಇದೇ ಬಿಜೆಪಿಯವರು ವಾದಿಸಿದ್ದರು. ಇದೀಗ ಯಡಿಯೂರಪ್ಪ ವಿಶ್ವಾಸಮತ ಯಾಚನೆಗೆ ತಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡಿದ್ದಾರೆ. ವಿಪ್‌ ಉಲ್ಲಂಘಿಸಿದರೆ ಕ್ರಮ ಕೈಗೊಳ್ಳದೆ ಸುಮ್ಮನಿರುತ್ತಾರಾ? ಇದೇ ಕಾರಣಕ್ಕೆ ಬಿಜೆಪಿಯವರು ಸಮಯ ಸಾಧಕರು ಎಂದು ತರಾಟೆಗೆ ತೆಗೆದು ಕೊಂಡರು.