ಬೆಂಗಳೂರು :  ಮುಂದಿನ 24 ಗಂಟೆಗಳಲ್ಲಿ ಸಮ್ಮಿಶ್ರ ಸರ್ಕಾರ ಪತನವಾಗಲಿದೆ ಎಂಬ ಬಿಜೆಪಿ ಶಾಸಕ ಉಮೇಶ್‌ ಕತ್ತಿ ಹೇಳಿಕೆ ಬಗ್ಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆಕ್ರೋಶ ವ್ಯಕ್ತಪಡಿಸಿದ್ದು, 24 ಗಂಟೆಗಳಲ್ಲಿ ಸರ್ಕಾರ ಬೀಳದಿದ್ದರೆ ರಾಜೀನಾಮೆ ನೀಡಿ ಹೊರಗೆ ಬರುತ್ತೀರಾ ಎಂದು ಸವಾಲು ಹಾಕಿದ್ದಾರೆ.

ಬುಧವಾರ ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹಿರಿಯ ಶಾಸಕರಾದ ಉಮೇಶ್‌ ಕತ್ತಿ ಅವರು ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ. 24 ಗಂಟೆಗಳಲ್ಲಿ ಸರ್ಕಾರ ಬೀಳದಿದ್ದರೆ ಅವರು ರಾಜೀನಾಮೆ ಕೊಟ್ಟು ಹೊರಗೆ ಬರಬೇಕು ಎಂದು ಸವಾಲು ಹಾಕುತ್ತಿದ್ದೇನೆ. ತಮ್ಮ ಘನತೆಗೆ ತಕ್ಕಂತೆ ಆಧಾರವಿದ್ದರೆ ಮಾತ್ರ ಮಾತನಾಡಬೇಕು. ಈ ರೀತಿ ಹುಚ್ಚುಚ್ಚಾಗಿ ಮಾತನಾಡುವುದು ಶೋಭೆ ತರುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬಿಜೆಪಿ ನಾಯಕರು ಹಲವು ದಿನಗಳಿಂದ ಸುಳ್ಳು ಹೇಳಿಕೆ ನೀಡುತ್ತಿದ್ದಾರೆ. ಈ ಮೂಲಕ ಅನಗತ್ಯವಾಗಿ ಅಸ್ಥಿರತೆ ಸೃಷ್ಟಿಸುವ ಯತ್ನ ನಡೆಸಲಾಗುತ್ತಿದೆ. ಇದೀಗ ಉಮೇಶ್‌ ಕತ್ತಿ ಅವರು ಭವಿಷ್ಯವಾಣಿ ನುಡಿದಿದ್ದಾರೆ. ಕಪೋಲಕಲ್ಪಿತ ಹೇಳಿಕೆಗಳಿಗೆ ಉತ್ತರ ಕೊಡುವ ಅಗತ್ಯವಿಲ್ಲ. ಉಮೇಶ್‌ ಕತ್ತಿ ಅವರ ಮಾತಿನಂತೆ 24 ಗಂಟೆಯಲ್ಲಿ ಸರ್ಕಾರ ಬೀಳಿಸಲಿ. ಮಾತು ಉಳಿಸಿಕೊಳ್ಳಲು ಆಗದಿದ್ದರೆ ರಾಜೀನಾಮೆ ಕೊಟ್ಟು ಹೊರಬರಲಿ ಎಂದು ಹೇಳಿದರು.

ಗುರುವಾರ ಖಾತೆ ಹಂಚಿಕೆ ಸಾಧ್ಯತೆ:  ಖಾತೆಗಳ ಹಂಚಿಕೆ ಬಗ್ಗೆ ಹರಿದಾಡುತ್ತಿರುವ ಸುದ್ದಿಗಳು ಊಹಾಪೋಹ ಮಾತ್ರ. ಖಾತೆಗಳ ಹಂಚಿಕೆ ಕುರಿತು ಉತ್ತಮ ಮಾತುಕತೆ ನಡೆದಿದೆ. ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಡಾ.ಜಿ. ಪರಮೇಶ್ವರ್‌ ಸೇರಿದಂತೆ ನಾವೆಲ್ಲಾ ಚರ್ಚೆ ಮಾಡಿದ್ದೇವೆ. ಹೈಕಮಾಂಡ್‌ ಅನುಮತಿ ಪಡೆದು ಗುರುವಾರವೇ ಖಾತೆಗಳ ಹಂಚಿಕೆ ಆಗಬಹುದು. ಇದರಲ್ಲಿ ಊಹಾಪೋಹಗಳನ್ನು ಸೃಷ್ಟಿಸುವ ಅಗತ್ಯವಿಲ್ಲ ಎಂದರು.

ಇನ್ನು ಸಭೆಯಲ್ಲಿ ತೀವ್ರ ಮಾತಿನ ಚಕಮಕಿ ನಡೆದಿದೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ್‌ ಪರಸ್ಪರ ಮಾತಿನ ಚಕಮಕಿ ನಡೆಸಿ ಪರಮೇಶ್ವರ್‌ ಅರ್ಧದಲ್ಲಿಯೇ ಎದ್ದು ಹೋಗಿದ್ದಾರೆ ಎಂಬುದು ಸುಳ್ಳು. ಪರಮೇಶ್ವರ್‌ ಅವರು ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಚರ್ಚೆ ಮುಗಿದ ಬಳಿಕ ತೆರಳಿದ್ದರು. ಬೇಕಿದ್ದರೆ ಪರಮೇಶ್ವರ್‌ ಎಲ್ಲಿಗೆ ಹೋದರು ಎಂಬುದನ್ನು ಪರೀಕ್ಷಿಸಿಕೊಳ್ಳಿ ಎಂದು ಹೇಳಿದರು.