Asianet Suvarna News Asianet Suvarna News

'ಬಿಜೆಪಿಯಿಂದ ಕಾಂಗ್ರೆಸ್ಸಿಗರಿಗೆ ಹಣ, ಮಂತ್ರಿಗಿರಿ ಆಮಿಷ'

ಬಿಜೆಪಿಯವರು ನಮ್ಮ ಶಾಸಕರಿಗೆ ಹಣದ ಹಾಗೂ ಮಂತ್ರಿಗಿರಿಯ ಆಮಿಷ ಒಡ್ಡುತ್ತಿದ್ದಾರೆ. ಈ ಮೂಲಕ ಸುಗಮ ಆಡಳಿತಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಆರೋಪ ಮಾಡಿದ್ದಾರೆ. 

KPCC President Dinesh Gundu Rao Slams BJP Leaders
Author
Bengaluru, First Published Aug 27, 2018, 10:59 AM IST

ಬೆಳಗಾವಿ :  ಬಿಜೆಪಿಯವರು ನಮ್ಮ ಶಾಸಕರಿಗೆ ಹಣ, ಮಂತ್ರಿಗಿರಿ ಆಮಿಷ ಒಡ್ಡುತ್ತಿದ್ದಾರೆ. ಕಾಂಗ್ರೆಸ್‌ -ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ಅವಧಿ ಮುಗಿಯಿತು ಎಂದು ಹೇಳಿಕೆ ನೀಡುವ ಮೂಲಕ ಸುಗಮ ಆಡಳಿತಕ್ಕೆ ಅಡ್ಡಿಪಡಿಸುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಆರೋಪಿಸಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದಲ್ಲಿ ಆಡಳಿತಕ್ಕೆ ಬಂದ ಎನ್‌ಡಿಎ ಸರ್ಕಾರದಿಂದ ನಾಲ್ಕು ವರ್ಷದಲ್ಲಿ ರಾಜ್ಯಕ್ಕೆ ನ್ಯಾಯ ಕೊಡಿಸುವಲ್ಲಿ ಬಿಜೆಪಿ ನಾಯಕರು ವಿಫಲವಾಗಿದ್ದಾರೆ. ಆದರೆ, ಈಗ ಅಧಿಕಾರಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಬಿಜೆಪಿ ನಾಯಕರು ಜನರನ್ನು ಪ್ರಚೋದಿಸುವ ಕೆಲಸ ಮಾಡುತ್ತಿದ್ದಾರೆ ಎಂದು ದೂರಿದರು.

ಉ.ಕ.ಕ್ಕೆ ಹೆಚ್ಚು ಸಚಿವ ಸ್ಥಾನ:  ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಆರು ಮಂತ್ರಿ ಸ್ಥಾನಗಳ ಪೈಕಿ ಹೆಚ್ಚು ಸ್ಥಾನಗಳನ್ನು ಉತ್ತರ ಕರ್ನಾಟಕಕ್ಕೆ ನೀಡುವ ಕುರಿತು ಚಿಂತನೆ ಇದ್ದು, ಈ ಬಗ್ಗೆ ಚರ್ಚೆ ನಡೆಯುತ್ತಿದೆ. ಸಾಲಮನ್ನಾ ವಿಚಾರದಲ್ಲಿ ಕಾಂಗ್ರೆಸ್ಸನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಸುಳ್ಳು. ಯಾವುದೇ ತೀರ್ಮಾನ ಆದರೂ ಇಬ್ಬರ ಪಾತ್ರ ಇರುತ್ತದೆ. ಒಂದೇ ಪಕ್ಷದ ಸರ್ಕಾರ ಇದ್ದಾಗ ಸಮನ್ವಯತೆ ಇರಲ್ಲ. ಆದರೆ, ಕಾಂಗ್ರೆಸ್‌- ಜೆಡಿಎಸ್‌ ಸಮ್ಮಿಶ್ರ ಸರ್ಕಾರದಲ್ಲಿ ಸಣ್ಣಪುಟ್ಟಗೊಂದಲ ಸಹಜ. ಇದೀಗ ಎರಡೂ ಪಕ್ಷಗಳ ಮುಖಂಡರು ಪರಸ್ಪರ ಸಹಕಾರ, ಹೊಂದಾಣಿಕೆಯಿಂದಿದ್ದಾರೆ ಎಂದರು.

ವಿಧಾನಸಭೆ ಚುನಾವಣೆಯಲ್ಲಿನ ಸೋಲಿಗೆ ಬೇರೆ ಬೇರೆ ಕಾರಣಗಳಿವೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ, ಚಿಕ್ಕೋಡಿಯ ಎರಡೂ ಕ್ಷೇತ್ರಗಳನ್ನು ಗೆಲ್ಲುವುದು ನಮ್ಮ ಗುರಿಯಾಗಿದೆ. ಅದೇ ರೀತಿ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್‌ ಹೆಚ್ಚಿನ ಸ್ಥಾನ ಗೆಲ್ಲುವುದು ನಿಶ್ಚಿತ ಎಂದರು.

Follow Us:
Download App:
  • android
  • ios