ಈ ಪೈಕಿ ಎಂಎಲ್‌ಸಿ ನೇಮಕ ಪಟ್ಟಿರಾಜ್ಯಪಾಲರಿಗೆ ರವಾನೆಯಾಗಿದೆ. ಇನ್ನು ಬಾಕಿಯಿರುವುದು ರಾಜ್ಯ ಸಚಿವ ಸಂಪುಟದಲ್ಲಿ ಬಾಕಿ ಇರುವ ಎರಡು ಸ್ಥಾನಗಳನ್ನು ತುಂಬಿಕೊಳ್ಳುವುದು. ಸಿಎಂ ಆಪ್ತ ಮೂಲಗಳ ಪ್ರಕಾರ ಈ ಹೊಣೆಯನ್ನು ಹೈಕಮಾಂಡ್‌ ಸಿಎಂ ಅವರಿಗೆ ನೀಡಿದೆ. ಹೀಗಾಗಿ ಶೀಘ್ರದಲ್ಲೇ ಖಾಲಿ ಇರುವ ಸ್ಥಾನಗಳನ್ನು ಅವರು ಭರ್ತಿ ಮಾಡಿಕೊಳ್ಳಲಿದ್ದಾರೆ.
ಬೆಂಗಳೂರು (ಮೇ.03): ರಾಜ್ಯ ಉಸ್ತುವಾರಿ ಬದಲಾವಣೆ ಆಯ್ತು, ಎಂಎಲ್ಸಿಗಳ ನೇಮಕಕ್ಕೆ ಶಿಫಾರಸು ಮುಗಿಯಿತು. ಇನ್ನು ಬಾಕಿ ಉಳಿದಿರುವುದು ಸಚಿವ ಸಂಪುಟ ಸೇರ್ಪಡೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಮಾತ್ರ. 2018ರ ಚುನಾವಣೆಗೆ ಸಜ್ಜಾಗುವ ದಿಸೆಯಲ್ಲಿ ದಾಪುಗಾಲಿಕ್ಕಿರುವ ಕಾಂಗ್ರೆಸ್ ಪಕ್ಷ ತನ್ನ ಬಹಳ ದಿನಗಳಿಂದ ಬಾಕಿ ಉಳಿಸಿಕೊಂಡಿದ್ದ ಪ್ರಮುಖ ವಿಚಾರಗಳನ್ನು ಚುಕ್ತಾ ಮಾಡುತ್ತಾ ಸಾಗಿದೆ. ಉನ್ನತ ಮೂಲಗಳ ಪ್ರಕಾರ ರಾಜ್ಯ ಸಚಿವ ಸಂಪುಟದಲ್ಲಿ ಖಾಲಿ ಉಳಿದಿರುವ ಎರಡು ಸ್ಥಾನಗಳ ನೇಮಕ ಅತಿ ಶೀಘ್ರದಲ್ಲಿ ನಡೆಯಲಿದ್ದು, ಇದೇ ವೇಳೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಯೂ ಘಟಿಸುವ ಸಾಧ್ಯತೆಯಿದೆ.
ರಾಜ್ಯ ಕಾಂಗ್ರೆಸ್ ಪಕ್ಷ ಹಾಗೂ ಸರ್ಕಾರಕ್ಕೆ ಸಂಬಂಧಿಸಿದಂತೆ ಹೈಕಮಾಂಡ್ ಕೈಗೊಳ್ಳಬೇಕಾದ ನಿರ್ಧಾರಗಳ ಪೈಕಿ ಪ್ರಮುಖವಾದವು ಉಸ್ತುವಾರಿ ಬದಲಾವಣೆ ಹಾಗೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ. ಇನ್ನು ಎಂಎಲ್ಸಿಗಳ ಆಯ್ಕೆ ಹಾಗೂ ಸಚಿವ ಸಂಪುಟಕ್ಕೆ ಸೇರ್ಪಡೆ ವಿಚಾರವನ್ನು ಹೈಕಮಾಂಡ್ ರಾಜ್ಯ ನಾಯಕತ್ವಕ್ಕೆ ಬಿಟ್ಟಿತ್ತು. ಸೂಕ್ತ ನಿರ್ಧಾರ ಕೈಗೊಂಡು ನಮ್ಮ ಗಮನಕ್ಕೆ ತನ್ನಿ ಎಂದಷ್ಟೇ ನಾಯಕರಿಗೆ ಸೂಚಿಸಿತ್ತು.
ಈ ಪೈಕಿ ಎಂಎಲ್ಸಿ ನೇಮಕ ಪಟ್ಟಿರಾಜ್ಯಪಾಲರಿಗೆ ರವಾನೆಯಾಗಿದೆ. ಇನ್ನು ಬಾಕಿಯಿರುವುದು ರಾಜ್ಯ ಸಚಿವ ಸಂಪುಟದಲ್ಲಿ ಬಾಕಿ ಇರುವ ಎರಡು ಸ್ಥಾನಗಳನ್ನು ತುಂಬಿಕೊಳ್ಳುವುದು. ಸಿಎಂ ಆಪ್ತ ಮೂಲಗಳ ಪ್ರಕಾರ ಈ ಹೊಣೆಯನ್ನು ಹೈಕಮಾಂಡ್ ಸಿಎಂ ಅವರಿಗೆ ನೀಡಿದೆ. ಹೀಗಾಗಿ ಶೀಘ್ರದಲ್ಲೇ ಖಾಲಿ ಇರುವ ಸ್ಥಾನಗಳನ್ನು ಅವರು ಭರ್ತಿ ಮಾಡಿಕೊಳ್ಳಲಿದ್ದಾರೆ.
ಈ ಸಂದೇಶ ದೊರೆಯುತ್ತಿದ್ದಂತೆಯೇ ಕಾಂಗ್ರೆಸ್ನಲ್ಲಿ ಆಕಾಂಕ್ಷಿಗಳು ಸಚಿವರಾಗಲೂ ತೀವ್ರ ಲಾಬಿಯನ್ನು ಆರಂಭಿಸಿದ್ದಾರೆ. ಪ್ರಸ್ತುತ ಇರುವ ಎರಡು ಸ್ಥಾನಗಳ ಪೈಕಿ ಒಂದು ಸ್ಥಾನ ಲೈಂಗಿಕ ಹಗರಣದಿಂದಾಗಿ ಸಚಿವ ಸ್ಥಾನದಿಂದ ಕೊಕ್ ಪಡೆದ ಎಚ್.ವೈ. ಮೇಟಿ ಅವರಿಂದ ತೆರವಾಗಿದ್ದು, ಇನ್ನೊಂದು ಸ್ಥಾನ ಸಚಿವ ಮಹದೇವ ಪ್ರಸಾದ್ ಅವರ ಅಕಾಲಿಕ ನಿಧನದಿಂದಾಗಿ ತೆರವಾ ಗಿತ್ತು. ಅಂದರೆ, ಒಂದು ಕುರುಬ ಕೋಟಾ ಮತ್ತೊಂದು ಹಳೆ ಮೈಸೂರು ಭಾಗದ ಲಿಂಗಾಯತ ಕೋಟಾದ ಸ್ಥಾನಗಳು ಖಾಲಿಯಾಗಿವೆ.
ಇದರರ್ಥ ಈ ಸ್ಥಾನಗಳು ಕುರುಬ ಹಾಗೂ ಹಳೆ ಮೈಸೂರು ಭಾಗದ ಶಾಸಕರಿಂದಲೇ ಭರ್ತಿಯಾಗ ಬೇಕಿದೆ. ಮೂಲಗಳ ಪ್ರಕಾರ ಕುರುಬ ಕೋಟಾದಿಂದ ಕ್ಯಾಬಿನೆಟ್ಗೆ ಮರು ಪ್ರವೇಶ ಮಾಡಲು ಖುದ್ದು ಮೇಟಿ ಅವರೇ ಯತ್ನಿಸಿದ್ದಾರೆ. ಮಂಗಳವಾರ ಇಡೀ ದಿನ ಅವರು ಸಿಎಂ ನಿವಾಸದಲ್ಲಿ ಬೀಡು ಬಿಟ್ಟು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳುವಂತೆ ಮನವಿ ಮಾಡಿ ದರು ಎನ್ನಲಾಗಿದೆ. ಮೇಟಿ ವಿರುದ್ಧದ ಸಿಐಡಿ ತನಿಖೆ ವರದಿ ಬರುವುದು ಇನ್ನು ಬಾಕಿಯಿದ್ದು, ಇನ್ನು ಕೆಲವೇ ದಿನಗಳಲ್ಲಿ ಮೇಟಿ ಅವರಿಗೆ ಕ್ಲೀನ್ಚಿಟ್ ನೀಡುವ ವರದಿಯೂ ಹೊರ ಬೀಳಲಿದೆ ಎನ್ನಲಾಗಿದೆ.
ಇನ್ನು ಕುರುಬ ಕೋಟಾದಿಂದ ಜನಾಂಗದಲ್ಲಿ ಪ್ರಭಾವಿಯಾಗಿರುವ ಎಚ್.ಎಂ. ರೇವಣ್ಣ ಅವರು ತೀವ್ರ ಪ್ರಯತ್ನ ನಡೆಸಿದ್ದಾರೆ. ಅವರ ಪರವಾಗಿ ಕುರುಬ ಸಂಘ ಹಾಗೂ ಜನಾಂಗದ ಪ್ರಮುಖ ನಾಯಕರು ಸಹ ಒತ್ತಡ ನಿರ್ಮಾಣ ಮಾಡುತ್ತಿದ್ದು, ಈ ಬಾರಿ ರೇವಣ್ಣ ಅವರಿಗೆ ಅವಕಾಶ ನೀಡಲೇಬೇಕು ಎಂದು ಸಿಎಂ ಅವರಿಗೆ ಒತ್ತಡ ನಿರ್ಮಾಣ ಮಾಡಿದ್ದಾರೆ. ಆದರೆ, ರೇವಣ್ಣ ಅವರಿಗೆ ಸಚಿವ ಸ್ಥಾನ ನೀಡಿದರೆ ಬೆಂಗಳೂರಿಗೆ ಏಳನೇ ಮಂತ್ರಿ ನೀಡಿದಂತಾಗುತ್ತದೆ. ಇದು ಅಸಮಾಧಾನ ಹುಟ್ಟು ಹಾಕಬಹುದು ಎಂಬ ಚಿಂತೆಯೂ ಇದೆ.
ವಾಸ್ತವವಾಗಿ ಕುರುಬ ಜನಾಂಗದ ಹೆಚ್ಚು ಶಾಸಕರು ಆಯ್ಕೆಯಾಗಿರುವುದು ಉತ್ತರ ಕರ್ನಾಟಕದಿಂದ. ಹಳೆ ಮೈಸೂರಿನಿಂದ ಖುದ್ದು ಮುಖ್ಯಮಂತ್ರಿ ಸಿದ್ದ ರಾಮಯ್ಯ ಅವರೇ ಸಮುದಾಯವನ್ನು ಪ್ರತಿನಿಧಿಸು ತ್ತಾರೆ. ಹೀಗಾಗಿ ಉತ್ತರ ಕರ್ನಾಟಕದವರನ್ನೇ ಸಚಿವರನ್ನಾಗಿ ಮಾಡಬೇಕು ಎಂದು ಆ ಭಾಗದ ನಾಯಕರು ಒತ್ತಡ ಹಾಕತೊಡಗಿದ್ದಾರೆ. ಈ ಭಾಗದಿಂದ ಮೇಟಿ, ಶಿವಳ್ಳಿ, ಗೋವಿಂದಯ್ಯ, ಬಸವರಾಜ ಶಿವಣ್ಣ ನೀಲಣ್ಣನವರ್ ಮೊದಲಾದವರು ಪ್ರಯತ್ನ ನಡೆಸಿದ್ದಾರೆ. ಆದರೆ, ಅಂತಿಮವಾಗಿ ಸಿಎಂ ಆಯ್ಕೆ ಯಾರು ಎಂಬುದನ್ನು ಕಾದು ನೋಡಬೇಕಿದೆ.
ಇನ್ನು ಲಿಂಗಾಯತ ಕೋಟಾದಲ್ಲಿ ಹಳೆ ಮೈಸೂರು ಭಾಗದಿಂದ ಇರುವುದು ಇಬ್ಬರೇ ಶಾಸಕರು. ಅವರೇ ಗೀತಾ ಮಹದೇವಪ್ರಸಾದ್ ಮತ್ತು ತಿಪಟೂರಿನ ಷಡಕ್ಷರಿ. ತಮ್ಮ ಸ್ನೇಹಿತ ಮಹದೇವಪ್ರಸಾದ್ ಅವರ ಅಕಾಲಿಕ ನಿಧನದಿಂದ ತೆರವಾದ ಈ ಸ್ಥಾನಕ್ಕೆ ಗೀತಾ ಮಹದೇವಪ್ರಸಾದ್ ಅವರಿಗೆ ನೀಡಬೇಕು ಎಂಬ ಮನಸ್ಸು ಸಿಎಂ ಸಿದ್ದರಾಮಯ್ಯ ಅವರಿಗೆ ಇದೆ ಎನ್ನಲಾಗಿದೆ.
