ಈ ಫಲಿತಾಂಶ ಬಂದ ನಂತರ ದೇವೇಗೌಡರ ಮೊದಲ ಉದ್ಗಾರ... ‘ನೋಡಿದಿರಾ, ಈ ಗೌಡ ಧೂಳಿನಿಂದ ಎದ್ದು ಬರುತ್ತಾನೆ!’ ನಮ್ಮನ್ನು ಇತರೆ ಪಕ್ಷಗಳು ಎಂದು ಉದಾಸೀನ ಮಾಡುತ್ತೀರಾ... ಈಗ ಗೊತ್ತಾಯಿತೇ ನಮ್ಮ ಬಲ?... ಎಂದು ಮಾಧ್ಯಮಗಳಿಗೆ ಗೌಡರು ಪದೇ ಪದೇ ಟಾಂಗ್ ನೀಡುತ್ತಿದ್ದರು. ಜೆಡಿಎಸ್ ಕಿಂಗ್ ಮೇಕರ್ ಆಗಿತ್ತು. ಅಕ್ಷರಶಃ ದೇವೇಗೌಡರು ಹೇಳಿದವರು ಮಾತ್ರ ಮುಖ್ಯಮಂತ್ರಿಯಾಗಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಫಲಿತಾಂಶ ಬಂದಿದ್ದು 2004ರ ಮೇ 13ರಂದು.
-ರವಿಹೆಗಡೆ, ಪ್ರಧಾನಸಂಪಾದಕರು, ಕನ್ನಡಪ್ರಭ
ಅಂದು 2004ರ ವಿಧಾನಸಭಾ ಚುನಾವಣೆ ಫಲಿತಾಂಶ ಕರ್ನಾಟಕದಲ್ಲಿ ವಿಚಿತ್ರ ಸನ್ನಿವೇಶವನ್ನು ತಂದೊಡ್ಡಿತ್ತು. ಯಾವ ಪಕ್ಷಕ್ಕೂ ಬಹುಮತ ಇರಲಿಲ್ಲ. ಭಾರತದ ನಂಬರ್ ಒನ್ ಸಿಎಂ ಎಂಬ ಖ್ಯಾತಿಯ ಅಲೆಯಲ್ಲಿ ಎಸ್.ಎಂ.ಕೃಷ್ಣ ಅವಧಿಗೂ ಮುನ್ನವೇ ಚುನಾವಣೆಗೆ ಹೋಗಿದ್ದರು. ಆದರೆ, ಕೇವಲ 65 ಸ್ಥಾನ ಪಡೆದು ಕಾಂಗ್ರೆಸ್ 2ನೇ ಸ್ಥಾನ ಪಡೆದಿತ್ತು. ಅದೇ ಮೊದಲ ಬಾರಿಗೆ ವಾಜಪೇಯಿ ಅವರ ಭಾರತ ಪ್ರಕಾಶಿಸುತ್ತಿದೆ ಎಂಬ ಪ್ರಚಾರದ ಅಲೆಯಲ್ಲಿ ಬಿಜೆಪಿ 79 ಸ್ಥಾನ ಪಡೆದು ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು.
ಜೆಡಿಎಸ್‌ಗೆ 58 ಸ್ಥಾನ ಲಭಿಸಿತ್ತು. ಈ ಅಂಕಿಯಾಟದಲ್ಲಿ ಜೆಡಿಎಸ್ ಬೆಂಬಲ ಇಲ್ಲದೇ ಯಾರೂ ಸರ್ಕಾರ ರಚಿಸಲು ಸಾಧ್ಯವೇ ಇರಲಿಲ್ಲ. ದೇವೇಗೌಡರಿಗಂತೂ ಖುಷಿಯೋ ಖುಷಿ. ರಾಷ್ಟ್ರೀಯ ವಾಹಿನಿಗಳು ಜೆಡಿಎಸ್ ಪಕ್ಷವನ್ನು ಎಷ್ಟು ಅವಗಣನೆ ಮಾಡಿದ್ದವು ಅಂದರೆ, ತಮ್ಮ ವಿಶ್ಲೇಷಣೆಯಲ್ಲಿ ಜೆಡಿಎಸ್ ಹೆಸರಿನ ಬದಲು ಇತರೆ ಪಕ್ಷಗಳು ಎಂದೇ ಬಳಸುತ್ತಿದ್ದವು. ಈ ಫಲಿತಾಂಶ ಬಂದ ನಂತರ ದೇವೇಗೌಡರ ಮೊದಲ ಉದ್ಗಾರ... ‘ನೋಡಿದಿರಾ, ಈ ಗೌಡ ಧೂಳಿನಿಂದ ಎದ್ದು ಬರುತ್ತಾನೆ!’ ನಮ್ಮನ್ನು ಇತರೆ ಪಕ್ಷಗಳು ಎಂದು ಉದಾಸೀನ ಮಾಡುತ್ತೀರಾ... ಈಗ ಗೊತ್ತಾಯಿತೇ ನಮ್ಮ ಬಲ?... ಎಂದು ಮಾಧ್ಯಮಗಳಿಗೆ ಗೌಡರು ಪದೇ ಪದೇ ಟಾಂಗ್ ನೀಡುತ್ತಿದ್ದರು.
ಜೆಡಿಎಸ್ ಕಿಂಗ್ ಮೇಕರ್ ಆಗಿತ್ತು. ಅಕ್ಷರಶಃ ದೇವೇಗೌಡರು ಹೇಳಿದವರು ಮಾತ್ರ ಮುಖ್ಯಮಂತ್ರಿಯಾಗಬೇಕಾದ ಅನಿವಾರ್ಯ ಸೃಷ್ಟಿಯಾಗಿತ್ತು. ಫಲಿತಾಂಶ ಬಂದಿದ್ದು 2004ರ ಮೇ 13ರಂದು. ಆದರೆ, ಎಷ್ಟು ದಿನ ಕಳೆದರೂ ಕರ್ನಾಟಕ ಸರ್ಕಾರ ಹೇಗೆ ರಚನೆಯಾಗುತ್ತದೆ ಎಂಬುದೇ ಬಗೆಹರಿಯದ ಗೊಂದಲವಾಗಿತ್ತು. ‘ಕೋಮುವಾದಿ’ ಬಿಜೆಪಿಯನ್ನು ದೂರ ಇಡಲು ಗೌಡರು ಕಾಂಗ್ರೆಸ್ ಕಡೆ ಒಲವು ಹೊಂದಿದ್ದರು. ಆದರೆ, ಎಸ್.ಎಂ.ಕೃಷ್ಣ ಅವರನ್ನು ಮತ್ತೆ ಮುಖ್ಯಮಂತ್ರಿ ಮಾಡಲು ಸುತರಾಂ ಸಿದ್ಧರಿರಲಿಲ್ಲ. ಅದಕ್ಕಾಗಿ ತಾವು ಹೇಳಿದವರೇ ಮುಖ್ಯಮಂತ್ರಿಯಾಗಬೇಕು. ಆಗ ಮಾತ್ರ ದೋಸ್ತಿ ಸರ್ಕಾರ ರಚನೆ ಸಾಧ್ಯ ಎಂದು ಗೌಡರು ಪಟ್ಟು ಹಿಡಿದಿದ್ದರು.
ಈ ಜಗ್ಗಾಟ ವಾರಗಟ್ಟಲೆ ನಡೆಯಿತು. ದೇವೇಗೌಡರು ಇಲ್ಲಿಂದಿಲ್ಲಿಗೂ ದಿಲ್ಲಿಯಿಂದಿಲ್ಲಿಗೂ ಓಡಾಡುತ್ತಿದ್ದರೇ ಹೊರತು ಅವರ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಡುವೆ ಏನಾಗುತ್ತಿದೆ ಎಂಬುದೇ ಗೊತ್ತಾಗುತ್ತಿರಲಿಲ್ಲ. ಈ ನಡುವೆ ಮುಖ್ಯಮಂತ್ರಿ ಪಟ್ಟ ಜೆಡಿಎಸ್‌ಗೇ ಬೇಕು ಎಂದು ಗೌಡರು ಪಟ್ಟು ಹಿಡಿದ್ದಾರೆ ಎಂಬ ಸುದ್ದಿಗಳೂ ಹುಟ್ಟಿಕೊಂಡವು. ಆದರೆ, ಗೌಡರಿಗೆ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಮಾಡಲು ಆಸಕ್ತಿಯಿಲ್ಲ ಎಂಬ ಸುದ್ದಿಯೂ ಹರಡಿತು. ಆಗ ಕಾಂಗ್ರೆಸ್‌ನ ಸಿಎಂ ಅಭ್ಯರ್ಥಿಯಾಗಿ ಖರ್ಗೆ, ಎಚ್.ಕೆ. ಪಾಟೀಲ್ ಹಾಗೂ ಧರ್ಮ ಸಿಂಗ್ ಅವರ ಹೆಸರುಗಳು ತೇಲಾಡಲಾರಂಭಿಸಿದವು. ಆದರೆ, ಎಲ್ಲವೂ ಅಯೋಮಯ... ಎಲ್ಲವೂ ಗುಪ್ತ್...
ಸುಮಾರು 2 ವಾರದ ನಂತರ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಧರ್ಮಸಿಂಗ್ ಆಯ್ಕೆಯಾದರೆ, ಇತ್ತ ಸಿದ್ದರಾಮಯ್ಯ ಜೆಡಿಎಸ್‌ನ ಶಾಸಕಾಂಗ ನಾಯಕರಾದರು. ಆದರೂ ಇವರಿಬ್ಬರಲ್ಲಿ ಯಾರು ಮುಖ್ಯಮಂತ್ರಿ, ಯಾರು ಉಪಮುಖ್ಯಮಂತ್ರಿ ಎಂಬ ಗೊಂದಲ ಬಗೆಹರಿಯಲಿಲ್ಲ. ದೇವೇಗೌಡರು ಜೆಡಿಎಸ್ ಗೇ ಮುಖ್ಯಮಂತ್ರಿ ಪಟ್ಟ ಬೇಕು ಎಂದು ಪಟ್ಟು ಹಿಡಿದಿದ್ದಾರೆ, ಅದಕ್ಕಾಗಿ ಬಿಕ್ಕಟ್ಟು ಬಗೆಹರಿಯುತ್ತಿಲ್ಲ. ಎಂದು ಎಲ್ಲರೂ ಹೇಳುತ್ತಿದ್ದರು. ಇಂಥ ರೋಚಕ ರಾಜಕೀಯ ಸನ್ನಿವೇಶದಲ್ಲಿ ಮೇ 25ರ ಮುಂಜಾನೆ ಕನ್ನಡಪ್ರಭದ ಮುಖಪುಟದಲ್ಲಿ ಸುದ್ದಿಯೊಂದು ದಪ್ಪ ಅಕ್ಷರಗಳಲ್ಲಿ ಪ್ರಕಟವಾಯಿತು.
ಬೆಳ್ಳಂ'ಬೆಳಿಗ್ಗೆ ಫೋನ್
ಕನ್ನಡಪ್ರಭದಲ್ಲಿ ಮಾತ್ರ ಪ್ರಕಟವಾಗಿದ್ದ ಸುದ್ದಿ ಅದು. ಧರ್ಮಸಿಂಗ್ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಮುಖ್ಯಮಂತ್ರಿ ಅಂದು ಬೆಳಿಗ್ಗೆ 7 ಗಂಟೆಗೆ ನನ್ನ ಮನೆಯ ಫೋನ್ ರಿಂಗಾಯಿತು. ಫೋನ್ ಎತ್ತಿಕೊಂಡರೆ ಕರೆ ಮಾಡಿದ್ದು ಸ್ವತಃ ಧರ್ಮಸಿಂಗ್! ನನಗೆ ರಾಜಕಾರಣಿಗಳ ಪರಿಚಯವೇ ಇರಲಿಲ್ಲ. ಧರ್ಮಸಿಂಗ್ ಅವರಿಗೂ ನನ್ನ ಪರಿಚಯ ಇರಲಿಲ್ಲ. ಕನ್ನಡಪ್ರಭ ಕಚೇರಿಗೆ ಬೆಳ್ಳಂಬೆಳಿಗ್ಗೆ ಫೋನ್ ಮಾಡಿ, ಟೈಮ್ ಆಫೀಸ್‌ನ ಭದ್ರತಾ ಸಿಬ್ಬಂದಿಯಿಂದ ನನ್ನ ಮನೆ ಫೋನ್ ನಂಬರ್ ಪಡೆದು ಕರೆ ಮಾಡಿದ್ದರು.
ನನಗೋ ಆಶ್ಚರ್ಯ. ಭಾವಿ ಮುಖ್ಯಮಂತ್ರಿ ನನ್ನಂಥ ಅಪರಿಚಿತನನ್ನು ಹುಡುಕಿ ಫೋನ್ ಮಾಡುವುದು ಅಂದರೆ ಏನರ್ಥ! ಫೋನ್ ರಿಸೀವ್ ಮಾಡಿದ ಕೂಡಲೇ ಧರಂ ಕೇಳಿದ್ದು... ನೀವು ಪ್ರಿಂಟ್ ಮಾಡಿರೋ ಸುದ್ದಿ ಕೊಟ್ಟಿದ್ದು ಯಾರ್ರಿ? ಸರ್.. ಅದೆಲ್ಲ ನಮ್ಮ ವರದಿಗಾರರ ಮೂಲಗಳಿಂದ ಬಂದಿರುತ್ತೆ... ಯಾಕೆ ಸಾರ್ ಏನಾಯ್ತು ಅಂದೆ. ನಿಮಗೇನು ದೇವೇಗೌಡ್ರು ಹೇಳಾರೇನ್ರೀ? - ಧರಂ ಸಿಂಗ್ ಕೇಳಿದರು. ಅವೆಲ್ಲ ನಮ್ಮ ಮೂಲಗಳು ಸಾರ್. ಹೇಳಕ್ಕಾಗಲ್ಲ. ಏನ್ ಪ್ರಾಬ್ಲಂ ಆಗಿದ್ಯಾ? ಅಂದೆ. ನಾ ಸಿಎಂ ಆಗೂ ಸುದ್ದಿ ಖರೇ ಏನ್ರಿ? ನಿಮಗೆ ಯಾರ್ರಿ ಹೇಳಿದ್ದು? ದೇವೇಗೌಡ್ರು ಹೇಳಿದಾರೇನ್ರೀ? ಧರಂ ಅವರಿಗೆ ಬೇಕಾದ ಉತ್ತರ ಅದಷ್ಟೇ. ಅಂತೂ ಮುಖ್ಯಮಂತ್ರಿ ಆಗೋ ಸುದ್ದಿ ಅವರಿಗೆ ಖಾತ್ರಿ ಆಗಿ ಗೊತ್ತಾದದ್ದು ಕನ್ನಡಪ್ರಭ ಓದಿದಾಗಲೇ.
ಈ ಸುದ್ದಿ ಬಂದು ಎರಡು ದಿನ ಆದರೂ ಯಾವುದೇ ಖಚಿತ ಸುದ್ದಿಯನ್ನು ದೇವೇಗೌಡರಾಗಲೀ ಕಾಂಗ್ರೆಸ್ ಪಕ್ಷವಾಗಲೀ ಬಹಿರಂಗ ಮಾಡಿರಲಿಲ್ಲ. ನಮಗೆ ಸಿಕ್ಕಿದ್ದ ಸುದ್ದಿಯ ಸಣ್ಣ ಎಳೆಯನ್ನು ಹಿಡಿದು ತರ್ಕ ಹಾಕಿ ಇಷ್ಟೊಂದು ದೊಡ್ಡ ಸುದ್ದಿ ಪ್ರಕಟಿಸಿದ ನಮಗೆ ಒಳಗೊಳಗೇ ಕಳವಳ. ಒಂದು ವೇಳೆ ದೇವೇಗೌಡರು ಪಟ್ಟು ಹಿಡಿದು ಸಿದ್ದರಾಮಯ್ಯನವರನ್ನೇ ಸಿಎಂ ಮಾಡಿಬಿಟ್ಟರೆ? ಸ್ವತಃ ಧರ್ಮಸಿಂಗ್ ಅವರೇ ದೇವೇಗೌಡರ ನಡೆಯ ಬಗ್ಗೆ ಕೊನೆ ಕ್ಷಣದವರೆಗೂ ಅನುಮಾನದಲ್ಲಿ ಇದ್ದಾರೆ ಎಂದಾದರೆ ನಮ್ಮ ಗತಿ ಏನು? ನಾವು ಪ್ರಕಟಿಸಿದ ಸುದ್ದಿ ಸುಳ್ಳಾಗಿ ಬಿಟ್ಟರೆ? ಸದಾ ರಾಜಕೀಯ ಸುದ್ದಿ ಹಾಗೂ ವಿಶ್ಲೇಷಣೆಯಲ್ಲಿ ಮುಂದಿದ್ದ ಕನ್ನಡಪ್ರಭದ ವಿಶ್ವಾಸಾರ್ಹತೆಗೆ ಕುಂದುಂಟಾದರೆ? ಧರ್ಮಸಿಂಗ್ ಅವರ ಪ್ರಶ್ನೆಯಿಂದಾಗಿ ಎರಡು ಮೂರು ದಿನ ರಾತ್ರಿ ಸರಿಯಾಗಿ ನಿದ್ದೆಯೇ ಬರುತ್ತಿರಲಿಲ್ಲ.
ಅಂತೂ ಮೂರನೇ ದಿನ ಸುದ್ದಿ ನಿಜವಾಯಿತು. ಮೇ 28ರಂದು ಧರ್ಮಸಿಂಗ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಅಂದು ಮುಖ್ಯಮಂತ್ರಿಯಾಗುವ ಅವಕಾಶವನ್ನು ಸ್ವತಃ ದೇವೇಗೌಡರೇ ತಪ್ಪಿಸಿದರು ಎಂಬ ಅಸಮಾಧಾನದ ನಡುವೆಯೇ ಸಿದ್ದರಾಮಯ್ಯ ಉಪಮುಖ್ಯ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಕರ್ನಾಟಕದ ಮೊದಲ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂತು. ಧರಂರನ್ನು ನೋಡಿದಾಗಲೆಲ್ಲ ನನಗೆ ಈ ಘಟನೆ ನೆನಪಾಗುತ್ತದೆ. ರಾಜಕೀಯದಲ್ಲಿ ದೇವೇಗೌಡರ ದಾಳ ಎಷ್ಟು ನಿಗೂಢವಾಗಿರುತ್ತದೆ ಎಂದು ನನಗೆ ಜ್ಞಾನೋದಯವಾಗಲು ಧರಂ ಅಂದು ಕೇಳಿದ್ದ ಪ್ರಶ್ನೆಯೇ ಕಾರಣ. ಈ ಘಟನೆಯಿಂದ ನಾನು ಕಲಿತ ರಾಜಕೀಯ ವರದಿಗಾರಿಕೆ ಪಾಠ ಈಗಲೂ ನನಗೆ ಉಪಯೋಗಕ್ಕೆ ಬರುತ್ತಿದೆ. ಇಂದು ಧರ್ಮಸಿಂಗ್ ನಮ್ಮೊಡನೆ ಇಲ್ಲ. ಅವರ ಆತ್ಮಕ್ಕೆ ಶಾಂತಿ ಸಿಗಲಿ.
