ಕೊಡಗು :  ಪತಿ ಜಿಲ್ಲಾ ಪಂಚಾಯತ್ ಗುತ್ತಿಗೆದಾರನಾಗಿದ್ದಕ್ಕೆ ಪತ್ನಿಯ ಸದಸ್ಯತ್ವ ಅಸಿಂಧುಗೊಂಡ ಪ್ರಕರಣ ಕೊಡಗು ಜಿಲ್ಲೆಯಲ್ಲಿ ನಡೆದಿದೆ. 

ಕೊಡಗು ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯೆ ಕವಿತಾ ಪ್ರಭಾಕರ್ ಸದಸ್ಯತ್ವವನ್ನು ಅನರ್ಹಗೊಳಿಸಿ ಮಡಿಕೇರಿ ಹಿರಿಯ ಸಿವಿಲ್ ನ್ಯಾಯಾಲಯ ಮಹತ್ವದ ತೀರ್ಪು ನೀಡಿದೆ. 

ಕೊಡಗಿನ ಭಾಗಮಂಡಲ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯೆ ಕವಿತಾ ಪ್ರಭಾಕರ್ ಗೆಲುವನ್ನು ಅಸಿಂಧು ಎಂದು ಕೋರ್ಟ್ ಘೋಷಿಸಿದ್ದು, ಪರಾಭವಗೊಂಡಿದ್ದ ತಿಲಕ್ ಸುಬ್ರಾಯ ಅವರನ್ನು ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. 

ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆಯ ಕಲಂ 167(ಹೆಚ್) ಅನ್ವಯ ತೀರ್ಪು ಪ್ರಕಟವಾಗಿದ್ದು,  ಪಂಚಾಯತ್ ಸದಸ್ಯರಿಗೆ ಪಂಚಾಯತ್ ಕಾಮಗಾರಿಗಳಲ್ಲಿ ಪ್ರತ್ಯಕ್ಷ ಮತ್ತು ಪರೋಕ್ಷ ಹಿತಾಸಕ್ತಿಗಳಿರಬಾರದು ಎಂದು ಈ ರೀತಿ ಸದಸ್ಯತ್ವವನ್ನು ಅನರ್ಹಗೊಳಿಸಲಾಗಿದೆ. 

ಬಿಜೆಪಿ ಸದಸ್ಯೆಯಾಗಿ ಆಯ್ಕೆಯಾಗಿದ್ದ ಕವಿತಾ ಪ್ರಭಾಕರ್ ಪತಿ ಜಿಲ್ಲಾ ಪಂಚಾಯತ್ ಗುತ್ತಿಗೆದಾರರಾಗಿದ್ದು, ಪಂಚಾಯತ್ ಕಾಮಗಾರಿಗಳನ್ನು ನಡೆಸುತ್ತಿದ್ದರು.  ಚುನಾವಣೆ ನಡೆದ ಬಳಿಕ ಪ್ರಭಾಕರ್ ಅವರಿಗೆ ಪಂಚಾಯತ್ ನಿಂದ ಹಣ ಬಿಡುಗಡೆಯಾಗಿತ್ತು. ಇದರಿಂದ  ಇದರಿಂದ ಕರ್ನಾಟಕ ಗ್ರಾಮ ಸ್ವರಾಜ್ಯ ಮತ್ತು ಪಂಚಾಯತ್ ರಾಜ್ ಕಾಯಿದೆ ಉಲ್ಲಂಘಿಸಿದ ಆರೋಪ ಎದುರಾಗಿತ್ತು. 

 ಇದೀಗ ಆರೋಪ ಸಾಬೀತಾದ ಹಿನ್ನಲೆ‌ ಬಿಜೆಪಿ ಅಭ್ಯರ್ಥಿ ಸದಸ್ಯತ್ವ ಅಸಿಂಧುಗೊಳಿಸಲಾಗಿದೆ.   2016ರ ಫೆಬ್ರವರಿ 20ರಂದು ಕೊಡಗು ಜಿಲ್ಲಾಪಂಚಾಯತ್ ಚುನಾವಣೆ ನಡೆದಿತ್ತು.