ಮಡಿಕೇರಿ :  ಮುಂಗಾರು ಮಳೆ ಆರಂಭವಾಗಲು ಕೇವಲ ಒಂದು ತಿಂಗಳು ಬಾಕಿ ಇರುವಾಗ ಕೊಡಗು ಜಿಲ್ಲೆಯಲ್ಲಿ ವಿಚಿತ್ರ ಬೆಳವಣಿಗೆಯೊಂದು ನಡೆಯುತ್ತಿದೆ. ಜನರು ಸ್ವಯಂಪ್ರೇರಿತರಾಗಿ ಸ್ವಂತ ಮನೆಗಳನ್ನು ಖಾಲಿ ಮಾಡಿ, ಮಡಿಕೇರಿಯಲ್ಲಿನ ಬಾಡಿಗೆ ಮನೆಗಳಿಗೆ ವಲಸೆ ಹೋಗುತ್ತಿದ್ದಾರೆ. ಹೀಗಾಗಿ ಮಡಿಕೇರಿಯಲ್ಲಿ ಬಾಡಿಗೆ ಮನೆಗಳೇ ಸಿಗುತ್ತಿಲ್ಲ. ಸಿಕ್ಕರೂ ದುಪ್ಪಟ್ಟು ಬಾಡಿಗೆ ಕೊಡಬೇಕು!

ಹೌದು. ಕಳೆದ ವರ್ಷ ಭಯಾನಕ ಜಲಪ್ರಳಯಕ್ಕೆ ತುತ್ತಾಗಿದ್ದ ಕೊಡಗಿನ ಜನತೆ ಇನ್ನೂ ಅದೇ ಭೀತಿಯಲ್ಲಿದ್ದಾರೆ. ಮಳೆಗಾಲ ಆರಂಭವಾದರೆ ಮತ್ತೆ ಭೂಕುಸಿತವಾಗಬಹುದು ಎಂದು ತೀವ್ರ ಆತಂಕಿತರಾಗಿದ್ದಾರೆ. ಮುಂಗಾರು ಹತ್ತಿರವಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಸ್ಥಿತಿಯಲ್ಲಿರುವ ತಮ್ಮ ಸ್ವಂತ ಮನೆಗಳನ್ನು ಸ್ವಯಂಪ್ರೇರಿತರಾಗಿ ಖಾಲಿ ಮಾಡಿ ಬಾಡಿಗೆ ಮನೆಗಳಿಗೆ ತೆರಳುತ್ತಿದ್ದಾರೆ.

ಕೊಡಗು ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಕಳೆದ ವರ್ಷ ಪ್ರಕೃತಿ ವಿಕೋಪ ಸಂಭವಿಸಿ ಅಪಾರ ಪ್ರಮಾಣದಲ್ಲಿ ಹಾನಿಯಾಗಿತ್ತು. ಮಡಿಕೇರಿ ಸೇರಿದಂತೆ ಹಲವು ಗ್ರಾಮೀಣ ಭಾಗಗಳಲ್ಲಿ ಮನೆಗಳು ಕೊಚ್ಚಿ ಹೋಗಿದ್ದವು ಅಥವಾ ನೆಲಕಚ್ಚಿದ್ದವು. ಇದೀಗ ಸಂತ್ರಸ್ತರಿಗೆ ರಾಜ್ಯ ಸರ್ಕಾರದಿಂದ ಹೊಸ ಮನೆಗಳ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಅವಿನ್ನೂ ಪೂರ್ತಿಗೊಂಡಿಲ್ಲ. ಮಳೆಗಾಲ ಆರಂಭಕ್ಕೂ ಮುನ್ನ ಕೇವಲ 100ರಷ್ಟುಮನೆಗಳು ಮಾತ್ರ ಸಂತ್ರಸ್ತರಿಗೆ ಲಭ್ಯವಾಗುವ ಭರವಸೆ ದೊರಕಿದೆ.

ಆದರೆ ಮಡಿಕೇರಿ ಸೇರಿದಂತೆ ಕೆಲವು ಪ್ರದೇಶಗಳಲ್ಲಿ ಮನೆಗಳು ಈಗಲೂ ಅಪಾಯದ ಸ್ಥಿತಿಯಲ್ಲಿವೆ. ಈ ಬಾರಿಯ ಮಳೆಯಿಂದ ಮತ್ತೆ ಅನಾಹುತ ಸಂಭವಿಸಬಹುದೆಂದು ಮಳೆಗಾಲ ಆರಂಭಕ್ಕೆ ಒಂದು ತಿಂಗಳಿರುವ ಮುಂಚೆಯೇ ಗುಡ್ಡ ಭಾಗದಲ್ಲಿರುವ ತಮ್ಮ ಮನೆಗಳಲ್ಲಿನ ವಸ್ತುಗಳನ್ನು ತೆಗೆದುಕೊಂಡು ಇತರೆ ಕಡೆ ಬಾಡಿಗೆ ಮನೆಗಳಲ್ಲಿ ವಾಸಿಸಲು ಜನರು ಮುಂದಾಗಿದ್ದಾರೆ.

ಮನೆ ತೊರೆಯಲು ಬೇಸರ:

ಮಡಿಕೇರಿಯ ಚಾಮುಂಡೇಶ್ವರಿ ನಗರ ಮತ್ತು ಇಂದಿರಾ ನಗರ ಬಡಾವಣೆಗಳಲ್ಲಿ ಕಳೆದ ಬಾರಿಯ ಪ್ರಕೃತಿ ವಿಕೋಪದಿಂದ ಮನೆಗಳು ಕುಸಿದು ಬಿದ್ದಿರುವ ಶೋಚನೀಯ ದೃಶ್ಯ ಇನ್ನೂ ಕಾಣಸಿಗುತ್ತಿದೆ. ಈ ಹಿಂದಿನ ಮಳೆಯಲ್ಲಿ ಸ್ವಲ್ಪ ಹಾನಿಗೊಳಗಾದ ಮನೆಯಲ್ಲಿ ವಾಸಿಸುತ್ತಿದ್ದವರು ಇದೀಗ ತಮ್ಮ ಸ್ಥಳದಿಂದ ಬೇರೆಡೆಗೆ ತೆರಳುತ್ತಿದ್ದಾರೆ. ಕೆಲವರು ಹುಟ್ಟಿಬೆಳೆದ ಮನೆಯನ್ನು ತೊರೆದು ಎಲ್ಲಿಗೆ ಹೋಗುವುದು ಎಂದು ಚಿಂತಿಸುತ್ತಿದ್ದಾರೆ.

ಚಾಮುಂಡೇಶ್ವರಿ ನಗರ ಹಾಗೂ ಇಂದಿರಾ ನಗರ ಬಡಾವಣೆಗಳಲ್ಲಿ ಜಲಪ್ರಳಯದ ಭೀಕರತೆಗೆ ಕೂಲಿ ಕಾರ್ಮಿಕರು, ಬಡವರು ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದರು. ಸಂತ್ರಸ್ತರು ರೋದಿಸುತ್ತಲೇ ಕಾಳಜಿ ಕೇಂದ್ರಗಳಲ್ಲಿ ಆಸರೆ ಪಡೆದಿದ್ದರು.

ಸಂತ್ರಸ್ತರಿಗೆ ಮನೆ ಇನ್ನೂ ಮರೀಚಿಕೆ

ಕೊಡಗಿನ 840 ಕುಟುಂಬಗಳು ಪ್ರಕೃತಿ ವಿಕೋಪ ಸಂತ್ರಸ್ತರಾಗಿದ್ದು, ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. 840 ಮನೆಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸುವ ಹೊಣೆಯನ್ನು ಕರ್ನಾಟಕ ಹ್ಯಾಬಿಟೇಟ್‌ ಸಂಸ್ಥೆಗೆ ವಹಿಸಲಾಗಿದೆ. ಈ ಮಳೆಗಾಲಕ್ಕೆ ಮುಂಚಿತವಾಗಿ ಸಂತ್ರಸ್ತರಿಗೆ 100 ಮನೆಗಳು ದೊರಕುವುದು ಕಷ್ಟಸಾಧ್ಯವಾಗಿದೆ. ಸಂಪೂರ್ಣ ಮನೆ ಕಳೆದುಕೊಂಡವರಿಗೆ ಸರ್ಕಾರದಿಂದ ಕುಟುಂಬವೊಂದಕ್ಕೆ 10 ಸಾವಿರದಂತೆ ತಿಂಗಳಿಗೆ ಬಾಡಿಗೆ ಹಣ ನೀಡಲಾಗುತ್ತಿದೆ.

ಮಡಿಕೇರಿಯಲ್ಲಿ ಬಾಡಿಗೆಗೆ ಸಿಗುತ್ತಿಲ್ಲ ಮನೆ!

ಇನ್ನೊಂದು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಮುಂಜಾಗ್ರತಾ ಕ್ರಮವಾಗಿ ಅಪಾಯದ ಸ್ಥಿತಿಯಲ್ಲಿನ ಮನೆಯಲ್ಲಿ ವಾಸವಿದ್ದ ಮಡಿಕೇರಿಯ ಇಂದಿರಾ ನಗರ ಹಾಗೂ ಚಾಮುಂಡೇಶ್ವರಿ ನಗರದ ಕೆಲವು ನಿವಾಸಿಗಳು ಸ್ವಯಂಪ್ರೇರಿತವಾಗಿ ಮನೆ ಖಾಲಿ ಮಾಡುತ್ತಿದ್ದಾರೆ. ಆದರೆ ಮಡಿಕೇರಿಯಲ್ಲಿ ಸಾಕಷ್ಟುಬಾಡಿಗೆಗೆ ಮನೆ ಸಿಗುತ್ತಿಲ್ಲ.

ಮಹಾಮಳೆಯ ಸಂತ್ರಸ್ತರಿಗೆ ಜಂಬೂರು, ಕರ್ಣಂಗೇರಿ ಸೇರಿದಂತೆ ವಿವಿಧಡೆ ಮನೆ ನಿರ್ಮಾಣ ಮಾಡಲಾಗುತ್ತಿದೆ. ಮೊದಲನೇ ಪಟ್ಟಿಯಲ್ಲಿರುವ ಸಂತ್ರಸ್ತರಿಗೆ ಆದಷ್ಟುಕೂಡಲೇ ಆದ್ಯತೆ ಮೇರೆಗೆ ಮನೆಗಳನ್ನು ವಿತರಿಸಲಾಗುವುದು.

-ಅನೀಸ್‌ ಕಣ್ಮಣಿ ಜಾಯ್‌, ಕೊಡಗು ಜಿಲ್ಲಾಧಿಕಾರಿ

ಇಂದಿರಾ ನಗರದಲ್ಲಿ ಕಳೆದ ಮಳೆಗಾಲದಲ್ಲಿ ಅಲ್ಪಸ್ವಲ್ಪ ಹಾನಿಯಾಗಿದ್ದ ಮನೆಯವರು ಇಲ್ಲಿಯವರೆಗೆ ವಾಸವಿದ್ದರು. ಆದರೆ ಇದೀಗ ನಾಲ್ಕೈದು ಮನೆಗಳು ಖಾಲಿಯಾಗುತ್ತಿದೆ. ನಮ್ಮ ಮನೆಯೂ ಅಪಾಯದಲ್ಲಿದ್ದು, ಮನೆ ಹುಟುಕಾಟದಲ್ಲಿದ್ದೇವೆ.

-ಜುಲೇಕಾಬಿ, ನಗರಸಭಾ ಸದಸ್ಯೆ ಮಡಿಕೇರಿ

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಕಡಿಮೆ ಮಳೆಯಾಗುತ್ತದೆ ಎಂಬ ಮಾಹಿತಿ ಇದೆ. ಕೆಲವು ವಿಜ್ಞಾನಿಗಳು ನೀಡುವ ಹೇಳಿಕೆಯಿಂದ ಜನರು ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ.

-ಡಾ. ಶ್ರೀನಿವಾಸ ರೆಡ್ಡಿ, ನಿರ್ದೇಶಕರು, ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ

ವರದಿ : ವಿಘ್ನೇಶ್‌ ಎಂ. ಭೂತನಕಾಡು