ಬೆಂಗಳೂರು (ಆ. 19):  ರಾಜ್ಯದ ಕರಾವಳಿ ಹಾಗೂ ಕೊಡಗು ಭಾಗದಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗು ಭಾಗದಲ್ಲಿ ಉಂಟಾಗಿರುವ ಜಲಪ್ರಳಯದಿಂದ ಸಾವಿರಾರು ಕೋಟಿ ರು. ನಷ್ಟಉಂಟಾಗಿದೆ. ಕಂದಾಯ ಇಲಾಖೆ ಇನ್ನೂ ನಷ್ಟಲೆಕ್ಕ ಹಾಕುವಲ್ಲಿ ಮಗ್ನವಾಗಿದ್ದು ಅಂದಾಜು 8 ಸಾವಿರ ಕೋಟಿ ರು. ನಷ್ಟಉಂಟಾಗಿರಬಹುದು ಎಂದು ಮೂಲಗಳು ತಿಳಿಸಿವೆ.

ಕೊಡಗು ಭಾಗದಲ್ಲಿ ಮಳೆ ಹಾನಿ ಮುಂದುವರೆದಿದ್ದು ದಿನದಿಂದ ದಿನಕ್ಕೆ ನಷ್ಟದ ಪ್ರಮಾಣ ಹೆಚ್ಚಾಗುತ್ತಿದೆ. ಶನಿವಾರ ಮತ್ತೆ ಎರಡು ಜೀವ ಹಾನಿ ಉಂಟಾಗಿದ್ದು, ಸಾವಿನ ಸಂಖ್ಯೆ 8ಕ್ಕೇರಿದೆ. ನೂರಾರು ಜನ ಕಣ್ಮರೆಯಾಗಿದ್ದಾರೆ.

ಉಳಿದಂತೆ ಸಾರ್ವಜನಿಕ ಹಾಗೂ ಖಾಸಗಿ ಆಸ್ತಿ ತೀವ್ರ ಪ್ರಮಾಣದಲ್ಲಿ ಹಾನಿಗೊಳಗಾಗಿದ್ದು, ಸದ್ಯಕ್ಕೆ 8 ಸಾವಿರ ಕೋಟಿ ರು. ಮೊತ್ತದಷ್ಟುಹಾನಿ ಉಂಟಾಗಿರಬಹುದು. ಆದರೆ, ಬೆಳೆ ಹಾನಿ, ರಸ್ತೆ ಬಂದ್‌ನಿಂದ ಸ್ಥಗಿತಗೊಂಡಿರುವ ವಾಣಿಜ್ಯ ವಹಿವಾಟು ಆದಾಯದಲ್ಲಿ ಉಂಟಾಗಿರುವ ಖೋತಾ ಸೇರಿದರೆ ನಷ್ಟದ ಮೊತ್ತ ದುಪ್ಪಟ್ಟಾಗಲಿದೆ ಎಂದು ಕಂದಾಯ ಇಲಾಖೆ ಅಧಿಕಾರಿಯೊಬ್ಬರು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಕೊಡಗು ಭಾಗದಲ್ಲಿ 845 ಮನೆಗಳು ಸಂಪೂರ್ಣ ನಾಶಗೊಂಡಿವೆ. ದಕ್ಷಿಣ ಕನ್ನಡದಲ್ಲಿಯೂ 361 ಮನೆ ನಾಶವಾಗಿದೆ. ಈ ಭಾಗದಲ್ಲಿ ಭಾಗಮಂಡಲ, ನಾಪೊಕ್ಲು ಅಯ್ಯಗೆರಿ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು, ಸಂಪರ್ಕ ಕಡಿತಗೊಂಡಿವೆ.

ಒಟ್ಟು 98 ಕಿ.ಮೀ. ಉದ್ದದ ರಸ್ತೆಗಳು ಸಂಪೂರ್ಣ ಹಾಳಾಗಿವೆ. ಕುಶಾಲನಗರ-ಮಡಿಕೇರಿ ರಸ್ತೆಯಲ್ಲಿ ಮಣ್ಣು ಕುಸಿತದಿಂದ ರಸ್ತೆ ಬ್ಲಾಕ್‌ ಆಗಿದೆ. ಮಡಿಕೇರಿ-ಹಾಸನ ರಸ್ತೆಯೂ ಮಣ್ಣು ಕುಸಿತದಿಂದ ಸಂಪೂರ್ಣ ಬಂದ್‌ ಆಗಿದೆ. ಈ ಮೂಲಕ ಕೊಡಗು ಜಿಲ್ಲೆಯು ಎಲ್ಲಾ ದಿಕ್ಕಿನಿಂದಲೂ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಗಳ ಪುನರ್‌ ನಿರ್ಮಾಣಕ್ಕೆ ಕನಿಷ್ಠ 1 ಸಾವಿರ ಕೋಟಿ ರು. ಅಗತ್ಯವಿದೆ ಎನ್ನುತ್ತಾರೆ ಅಧಿಕಾರಿಗಳು.

58 ಸೇತುವೆ ಹಾನಿ:

ಇದರ ಜತೆಗೆ ಸರ್ಕಾರಿ ಕಟ್ಟಡಗಳು ಹಾಗೂ ಸಾರ್ವಜನಿಕ ಆಸ್ತಿಗೂ ಸಾಕಷ್ಟುನಷ್ಟಉಂಟಾಗಿದೆ. ಕೊಡಗು ಭಾಗದ ವಿವಿದೆಡೆ 58 ಸೇತುವೆಗಳು ಹಾನಿಗೊಳಗಾಗಿದ್ದು, ಉಳಿದಂತೆ ಬಹುತೇಕ ಸೇತುವೆಗಳು ಮುಳುಗಿವೆ. 243 ಸರ್ಕಾರಿ ಕಟ್ಟಡಗಳು ನೆಲಕಚ್ಚಿವೆ. 3006 ವಿದ್ಯುತ್‌ ಕಂಬ ಹಾನಿಯಾಗಿದೆ. ಹೆಚ್ಚು ಹಾನಿ ಉಂಟಾಗಿರುವ ಸ್ಥಳಗಳಿಗೆ ಭೇಟಿ ನೀಡಿ ಕಂದಾಯ ಇಲಾಖೆ ಅಧಿಕಾರಿಗಳು ನಷ್ಟಅಂದಾಜು ಮಾಡುತ್ತಿದ್ದಾರೆ. ಶನಿವಾರ ಸಂಜೆವರೆಗೂ ನಷ್ಟದ ಸ್ಪಷ್ಟಚಿತ್ರಣ ಲಭ್ಯವಾಗಿಲ್ಲ.

ಕೊಡಗು ಜಿಲ್ಲೆ ವ್ಯಾಪ್ತಿಯಲ್ಲಿ ಬಹುತೇಕ ಕಡೆ ಗುಡ್ಡ ಕುಸಿತ ಹಾಗೂ ಜಲಪ್ರವಾಹದಿಂದಾಗಿ ತೋಟದ ಬೆಳೆಗಳು ನಾಶವಾಗಿವೆ. ವಾಣಿಜ್ಯ ಬೆಳೆ ಹಾನಿಯಿಂದಾಗಿ ಕನಿಷ್ಠ 1 ಸಾವಿರ ಕೋಟಿ ರು.ನಷ್ಟುನಷ್ಟಉಂಟಾಗಿರಬಹುದು. ಸದ್ಯಕ್ಕೆ ಅಂದಾಜು 8 ಸಾವಿರ ಕೋಟಿ ರು. ನಷ್ಟಅಂದಾಜಿಸಿದ್ದು, ಇದರ ಮೊತ್ತ ಮತ್ತಷ್ಟುಹೆಚ್ಚಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.