ಸುಳ್ಯ :  ‘ಅತ್ತ ಇತ್ತ ಪಶ್ಚಿಮ ಘಟ್ಟದ ಹಸಿರು ಅರಣ್ಯ ರಾಶಿ. ನಡುವೆ ಸೀಳುತ್ತಾ ಸಾಗುವ ಹೆದ್ದಾರಿ, ತಲೆ ಎತ್ತಿ ನೋಡಿದರೆ ಅನತಿ ದೂರದವರೆಗೂ ಬೆಟ್ಟಗುಡ್ಡಗಳದ್ದೇ ವೈಭವ, ದೂರಕ್ಕೆ ಬೆಳ್ಳಿ ಗೆರೆಯಂತೆ ತೋರುವ ತೊರೆಗಳು, ಅಲ್ಲಲ್ಲಿ ಧುಮ್ಮಿಕ್ಕುವ ಜಲಪಾತಗಳು.’

-ಇದು ತಿಂಗಳ ಹಿಂದಿನ ಸಂಪಾಜೆ-ಮಡಿಕೇರಿ (ಮಾಣಿ-ಮೈಸೂರು ರಾ.ಹೆ.275) ರಸ್ತೆಯ ದೃಶ್ಯ ಚಿತ್ರಣ. ಕೊಡಗಿನ ವನಸಿರಿಗೆ ಮನಸೋತ ಕವಿ ಪಂಜೆ ಮಂಗೇಶರಾಯರು ‘ಎಲ್ಲಿ ಭೂರಮೆ ದೇವಸನ್ನಿಧಿ ಬಯಸಿ ಬಿಮ್ಮನೆ ಬಂದಳೋ...’ ಎಂದು ಹೊಗಳಿದ್ದು ಸುಮ್ಮನೇ ಅಲ್ಲ.

ಆದರೆ ಇಂದು ಈ ರಸ್ತೆಯಲ್ಲಿ ಸಂಚರಿಸಿದರೆ ಸ್ಮಶಾನ ಮೌನ. ಹಸಿರು ಉಸಿರು ಕಳೆದುಕೊಂಡಂತಿದೆ. ಕೆಸರು ಕಾಲಿಗಂಟುತ್ತದೆ. ಮರಗಳ ಬದಲಿಗೆ ಕಾಣುವುದು ಎತ್ತರದ ಜೆಸಿಬಿಗಳು. ಸಂಪಾಜೆಯಿಂದ ಮಡಿಕೇರಿ ಕಡೆಗೆ 30 ಕಿ.ಮೀ. ಅಂತರದ ಈ ರಸ್ತೆಯ ಪೂರ್ಣ ಚಿತ್ರಣ ಸಿಗಬೇಕಾದರೆ ನೀವು 130 ಕಿ.ಮೀ. ಸಂಚರಿಸಬೇಕು. ಸುಳ್ಯದಿಂದ ಸಂಪಾಜೆ ಮೂಲಕ ಜೋಡುಪಾಲದವರೆಗೆ ಮತ್ತು ಸುಳ್ಯದಿಂದ ಪಾಣತ್ತೂರು, ಕರಿಕೆ, ಭಾಗಮಂಡಲ, ಮಡಿಕೇರಿ ಮಾರ್ಗವಾಗಿ ಮೊಣ್ಣಂಗೇರಿಗೆ ಸಂಚರಿಸಿ ‘ಕನ್ನಡಪ್ರಭ’ ನೀಡುತ್ತಿರುವ ಸಾಕ್ಷಾತ್‌ ಚಿತ್ರಣವಿದು.

ಹೀಗಿತ್ತು ಹಸಿರಹಾದಿ:  ಒಂದೊಮ್ಮೆ ಈ ಸಂಪಾಜೆ ಘಾಟ್‌ ರಸ್ತೆ ಪ್ರಯಾಣ ಅತ್ಯಂತ ಆನಂದದಾಯಕವಾಗಿತ್ತು. ರಸ್ತೆಯ ಬಲಬದಿಗೆ ಕಡಮಕಲ್ಲು, ಗಾಳಿಬೀಡು ಅರಣ್ಯ ಪ್ರದೇಶಗಳಿವೆ. ಅದರಾಚೆ ಪುಷ್ಪಗಿರಿ ಅರಣ್ಯ ಪ್ರದೇಶವಿದೆ. ಎಡಬದಿಗೆ ಪಟ್ಟಿಘಾಟ್‌ ಅರಣ್ಯವಿದೆ. ಸಂಪಾಜೆಯಿಂದ ಮೊದಲ್ಗೊಂಡು ಕೊಯನಾಡು, ದೇವರಕೊಲ್ಲಿ, ಜೋಡುಪಾಲ, ಮೊಣ್ಣಂಗೇರಿ, ಕಾಟಕೇರಿ, ತಾಳತ್‌ಮನೆ ಮತ್ತಿತರ ಗ್ರಾಮ್ಯ ಸೊಗಡಿನ ಊರುಗಳಿವೆ. ಚಾರ್ಮಾಡಿ ಅಥವಾ ಆಗುಂಬೆ ಘಾಟ್‌ಗಳಿಗೆ ಹೋಲಿಸಿದರೆ ಸಂಪಾಜೆ ಘಾಟ್‌ ಹೇರ್‌ ಪಿನ್‌ ತಿರುವುಗಳನ್ನು ಹೊಂದಿಲ್ಲದಿದ್ದರೂ ಆಕರ್ಷಕವಾಗಿವೆ. ರಸ್ತೆ ಪಕ್ಕದಲ್ಲಿ ರಬ್ಬರ್‌ ತೋಟಗಳು, ದೂರದಿಂದ ಧುಮ್ಮಿಕ್ಕುವ ಜಲಪಾತಗಳ ದೃಶ್ಯವೈಭವವೇ ಇಲ್ಲಿನ ರಸ್ತೆಯ ಹೈಲೈಟ್ಸ್‌. ಇಂತಹ ಈ ರಸ್ತೆ 5 ವರ್ಷಗಳ ಹಿಂದೆ ಮಾಣಿ-ಮೈಸೂರು ಹೆದ್ದಾರಿ ಪುನರ್ನಿಮಾಣದ ಸಂದರ್ಭದಲ್ಲಿ ಅಭಿವೃದ್ಧಿ ಕಂಡಿತು. ರಸ್ತೆ ಸಂಚಾರ ಮತ್ತಷ್ಟುಸೊಗಸಾಯಿತು.

ಈಗ ಹೀಗಾಗಿದೆ:  ಪ್ರಕೃತಿ ವಿಕೋಪಕ್ಕೆ ಕೊಯನಾಡಿನಿಂದ ಮಡಿಕೇರಿವರೆಗಿನ ಸುಮಾರು 25 ಕಿ.ಮೀ. ದೂರದ ಹೆದ್ದಾರಿ ಇಂದು ನಿರ್ಜೀವವಾಗಿ ಮಲಗಿದೆ. ಅಲ್ಲಲ್ಲಿ ಆಳಕ್ಕೆ ಕುಸಿತ ಕಂಡಿದೆ. ಜೋಡುಪಾಲವರೆಗೆ ಬಲ ಭಾಗದ ಬೆಟ್ಟಗಳೂ, ಅಲ್ಲಿಂದ ಮುಂದೆ ಎಡಬದಿಯ ಗಾಳಿಬೀಡು ಬೆಟ್ಟಗಳೂ ಕುಸಿದು ಹೆದ್ದಾರಿಯ ಎರಡೂ ಬದಿಗಳಲ್ಲಿ ರಾಶಿ ಬಿದ್ದಿವೆ. ಜಲಸ್ಫೋಟಕ್ಕೆ ಬೆಟ್ಟವೇ ಧುಮ್ಮಿಕ್ಕಿ ನದಿಯಾಗಿ ಪರಿಸರದ ಸಮತಲ ಪ್ರದೇಶಗಳಲ್ಲೆಲ್ಲಾ ಹರಿದು ಕೃಷಿಯನ್ನೂ ಬದುಕನ್ನೂ ನಾಶ ಮಾಡಿದೆ. ಅಲ್ಲೆಲ್ಲಾ ಬೃಹದಾಕಾರದ ಮರಗಳು ಕಾಂಡವನ್ನೂ, ರೆಂಬೆ ಕೊಂಬೆಗಳನ್ನೂ, ಸಿಪ್ಪೆಯನ್ನೂ ಜಾರಿಸಿ ಮಕಾಡೆ ಮಲಗಿದೆ. ಕೆಸರಿನ ಒಸರು ನಿಂತಿಲ್ಲ. ಕಲ್ಲುಬಂಡೆಗಳು, ಬಂಡೆ ಕಲ್ಲುಗಳು ರಾಶಿ ಬಿದ್ದಿವೆ. ನೆರೆ ನೀರು ಮತ್ತು ಮರಗಳು ಬಂದ ರಭಸಕ್ಕೆ ಹೆದ್ದಾರಿಯ ಬದಿಯ ರಕ್ಷಣಾ ಬೇಲಿಗಳು ಮುದ್ದೆಯಾಗಿದೆ.

ಜೋಡುಪಾಲದಲ್ಲಂತೂ ಮೇಲಿನಿಂದ ಬೆಟ್ಟವೇ ಸಿಡಿದು ನದಿಯಾಗಿ ಹರಿದು ರಸ್ತೆಗೆ ಅಡ್ಡವಾಗಿ ಹರಿದಿದೆ. ಎರಡನೇ ಮೊಣ್ಣಂಗೇರಿಯಲ್ಲಿ ಹೆದ್ದಾರಿ ಅಡ್ಡವಾಗಿ ಬಾಯಿಬಿಟ್ಟು ಕುಸಿದಿದೆ. ಒಂದು ಬದಿ ಮೇಲಿನಿಂದ ಇನ್ನೂ ಕುಸಿಯುತ್ತಿರುವ ಬೆಟ್ಟ. ಮತ್ತೊಂದು ಬದಿ ಜಲಪ್ರಳಯಕ್ಕೆ ತುತ್ತಾಗಿ ಧುಮ್ಮಿಕ್ಕಿ ಹರಿಯುತ್ತಲೇ ಇರುವ ನೀರು ಹಾಗೂ ಕೆಸರು. ಪ್ರಕೃತಿ ದುರಂತದ ಭೀಕರತೆ ಅರಿಯಬೇಕಾದರೆ ಇಲ್ಲಿ ನಿಂತು ನೋಡಬೇಕು.

ರಸ್ತೆಗಳು ಕುಸಿದ ಜಾಗದಲ್ಲಿ ಈಗ ಮರಳಿನ ಚೀಲಗಳನ್ನು ಇರಿಸಿ ರಕ್ಷಣೆಯ ಪ್ರಯತ್ನ ಮಾಡಲಾಗುತ್ತಿದೆ. ರಸ್ತೆಗೆ ಬಿದ್ದ ಮಣ್ಣನ್ನು ತೆರವುಗೊಳಿಸಲಾಗುತ್ತಿದೆ. ಅದಕ್ಕೆಂದೇ ನೂರಾರು ಕಾರ್ಮಿಕರು ವಿವಿಧ ಕಡೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ರಸ್ತೆಯುದ್ದಕ್ಕೂ ಬೃಹತ್‌ ಗಾತ್ರದ ಅಥ್‌ರ್‍ ಮೂವರ್ಸ್‌, ಜೆಸಿಬಿಗಳು, ಹಿಟಾಚಿಗಳು ಕೈಚಾಚಿವೆ.

ರಸ್ತೆ ಬದಿಯಲ್ಲಿ, ಬೆಟ್ಟದ ತಪ್ಪಲಲ್ಲಿದ್ದ ನೂರಾರು ಸಂಖ್ಯೆಯಲ್ಲಿ ಮನೆಗಳು, ಹೋಂಸ್ಟೇಗಳು ಜೀವಂತಿಕೆಯನ್ನೇ ಕಳೆದುಕೊಂಡಿದೆ. ಮಾರ್ಗದುದ್ದಕ್ಕೂ ಇದ್ದ ಅಂಗಡಿ ಮಳಿಗೆಗಳು, ಹೊಟೇಲ್‌ಗಳು, ಡಾಬಾಗಳು ತಲೆ ಎತ್ತಿ ಭರ್ಜರಿ ವ್ಯಾಪಾರ ನಡೆಸುತ್ತಿದ್ದವು. ಆದರೆ ಪ್ರಕೃತಿಯ ಮುಂದೆ ಇವುಗಳು ತಲೆಬಗ್ಗಿಸಿ ಬಾಗಿಲು ಹಾಕಿಕೊಂಡಿವೆ.

ಯಂತ್ರಗಳ ಸ್ಥಿತಿಯೂ ಅಯೋಮಯ :  ಇಲ್ಲಿ ವಿಚಿತ್ರ ಪರಿಸ್ಥಿತಿಯೊಂದು ಎದುರಾಗಿದೆ. ಎರಡನೇ ಮೊಣ್ಣಂಗೇರಿ ಬಳಿ ವಾರದ ಹಿಂದೆ ರಸ್ತೆ ಕುಸಿದಾಗ ಕಾಮಗಾರಿಗೆ ಮಡಿಕೇರಿಯಿಂದ ವಾಹನಗಳು ಬರುವುದು ಸಾಧ್ಯವಿರಲಿಲ್ಲ. ಹೀಗಾಗಿ ಮಂಗಳೂರಿನಿಂದ ಬೃಹತ್‌ ಜೆಸಿಬಿ ಮತ್ತು ಹಿಟಾಚಿಗಳು ಬಂದವು. ಅವರು ಅಲ್ಲಿ ಕೆಲಸ ಮಾಡುತ್ತಿದ್ದಂತೆಯೇ ಜೋಡುಪಾಲದಲ್ಲಿ ಬೆಟ್ಟಕುಸಿದು ರಸ್ತೆ ಬಂದ್‌ ಆಯಿತು. ಈಗ ಮೊಣ್ಣಂಗೇರಿಯಲ್ಲಿ ಈ ಯಂತ್ರಗಳು, ಒಂದು ಇನೋವಾ ಕಾರು ಅತ್ತಲೂ ಇತ್ತಲೂ ಚಲಿಸಲಾಗದೆ ಅನಾಥವಾಗಿ ನಿಂತಿದೆ.


ದುರ್ಗಾಕುಮಾರ್‌ ನಾರ್ಯಕೆರೆ