ಆಲೂಗಡ್ಡೆ ಮತ್ತು ಗೆಣಸನ್ನು ಬೆರೆಸಿ, ಮೆಷೀನ್'ಗಳ ಸಹಾಯದಿಂದ ಅಕ್ಕಿ ಕಾಳಿನ ಆಕಾರ ಬರಿಸುತ್ತಾರೆ. ನಂತರ, ಸಿಂಥೆಟಿಕ್ ರೆಸಿನ್ ರಾಸಾಯನಿಕವನ್ನ ಅದಕ್ಕೆ ಸೇರಿಸುತ್ತಾರೆ. ಇದರಿಂದ ಅದು ಸಾಧಾರಣ ಅಕ್ಕಿಯಂತೆ ಗಟ್ಟಿಯಾಗುತ್ತದೆ. ಆದರೆ, ಬೇಯಿಸಿದಾಗಲೂ ಅದು ಸ್ವಲ್ಪ ಗಟ್ಟಿಯಾಗಿಯೇ ಇರುತ್ತದೆ. ಅಂದರೆ, ಸರಿಯಾಗಿ ಬೇಯುವುದಿಲ್ಲ.
ಬೆಂಗಳೂರು(ಜೂನ್ 09): ಇತ್ತೀಚಿನ ಕೆಲ ದಿನಗಳಿಂದ ಪೇಪರ್, ಟಿವಿ ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ಪ್ಲಾಸ್ಟಿಕ್ ಮೊಟ್ಟೆ, ಅಕ್ಕಿಗಳದ್ದೇ ಸುದ್ದಿಯಾಗಿದೆ. ಜನಸಾಮಾನ್ಯರು ಅಕ್ಕಿ, ಮೊಟ್ಟೆ ಅಥವಾ ಇತರೇ ಧಾನ್ಯಗಳಲ್ಲಿ ಸಣ್ಣಪುಟ್ಟ ವ್ಯತ್ಯಾಸಗಳಾದರೂ ಭಯಭೀತರಾಗುತ್ತಿದ್ದಾರೆ. ಮಾಮೂಲಿಗಿಂತ ವ್ಯತ್ಯಾಸವಿರುವ ಪ್ರತಿಯೊಂದು ಆಹಾರಕ್ಕೂ "ಪ್ಲಾಸ್ಟಿಕ್" ಎಂದು ಹಣೆಪಟ್ಟಿ ಕಟ್ಟುವ ಪ್ರವೃತ್ತಿ ಬೆಳೆಯುತ್ತಿದೆ. ಸುವರ್ಣನ್ಯೂಸ್ ವಾಹಿನಿಯಲ್ಲಿ ಇಂದು ಬೆಳಗ್ಗೆಯಿಂದಲೂ ಈ ವಿಚಾರದ ಕುರಿತು ವಿವಿಧ ತಜ್ಞರಿಂದ ಸುದೀರ್ಘ ಚರ್ಚೆಯನ್ನೇ ನಡೆಸಿ ಜನರಲ್ಲಿ ಗೊಂದಲ ನಿವಾರಿಸುವ ಪ್ರಯತ್ನ ಮಾಡಿದೆ. ಪ್ಲಾಸ್ಟಿಕ್ ರೈಸ್ ಎಂಬುದೆಲ್ಲಾ ನಿಜವಲ್ಲ ಎಂದು ಆಹಾರ ತಜ್ಞ ರಘು ಅವರು ಸಾರಿ ಸಾರಿ ಹೇಳುತ್ತಿದ್ದಾರೆ.
ಪ್ಲಾಸ್ಟಿಕ್ ರೈಸ್ ಅಂತ ಕರೆಯೋದೇಕೆ?
ಚೀನಾದಿಂದ ಪ್ಲಾಸ್ಟಿಕ್ ಅಕ್ಕಿ ಆಮದಾಗುತ್ತಿದೆ ಎಂಬ ಸುದ್ದಿ ಕೆಲವಾರು ವರ್ಷಗಳಿಂದ ಬಲವಾಗಿ ಕೇಳಿಬರುತ್ತಿದೆ. ನೈಜೀರಿಯಾದಂಥ ಕೆಲ ದೇಶಗಳಲ್ಲಿ ಚೀನಾದ ಪ್ಲಾಸ್ಟಿಕ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಯಿತು ಎಂಬ ಸುದ್ದಿ ಪ್ರಕಟವಾಗಿತ್ತು. ವಾಸ್ತವವಾಗಿ ಈ ಪ್ಲಾಸ್ಟಿಕ್ ರೈಸ್ ಎಂಬ ಹೆಸರು ಮೊದಲು ಕೇಳಿಬಂದಿದ್ದು 2010ರಲ್ಲಿ ಚೀನಾದಲ್ಲಿ. ಆ ದೇಶದಲ್ಲಿ ವುಚಂಗ್ ಎಂಬ ತಳಿಯ ಅಕ್ಕಿಯೊಂದಿದೆ. ಇದು ನಮ್ಮ ಭಾಸ್ಮತಿ ಅಕ್ಕಿಯ ರೀತಿಯಲ್ಲಿ ಒಳ್ಳೆಯ ಪರಿಮಳ ಇರುವ ವಿಶೇಷ ಅಕ್ಕಿ. ಇದಕ್ಕೆ ದೇಶ ವಿದೇಶಗಳಲ್ಲಿ ಭಾರೀ ಬೇಡಿಕೆ ಇದೆ. ಅಂತೆಯೇ ಬೆಲೆಯೂ ಹೆಚ್ಚೇ. ಬೆಲೆ ದುಬಾರಿ ಎಂದರೆ ಸ್ವಾರ್ಥ ವ್ಯಾಪಾರಿಗಳು ಸುಮ್ಮನಿರುತ್ತಾರೆಯೇ? ಚೀನಾದ ವ್ಯಾಪಾರಿಗಳು ವುಚಂಗ್ ಅಕ್ಕಿಗೆ ಕಲಬೆರಕೆ ಮಾಡಿ ಮಾರತೊಡಗುತ್ತಾರೆ. ಸಾಧಾರಣ ಅಕ್ಕಿಗೆ ವುಚಂಗ್'ನ ರೀತಿಯ ಪರಿಮಳ ಬರುವಂತೆ ಮಾಡಿ ಮಾರಾಟ ಮಾಡುತ್ತಿದ್ದುದನ್ನ ಚೀನಾದ ಅಧಿಕಾರಿಗಳು ಪತ್ತೆಹಚ್ಚುತ್ತಾರೆ. ಅಲ್ಲಿಗೆ ದೊಡ್ಡ ಹಗರಣವೊಂದು ಬಯಲಿಗೆ ಬರುತ್ತದೆ.
ಕಲಬೆರೆಕೆ ಅಕ್ಕಿ ಹಗರಣ ಬಯಲಾದ ಮರುವರ್ಷದಲ್ಲೇ, ಅಂದರೆ 2011ರಲ್ಲಿ ಚೀನಾದ ಶಾಂಕ್ಸಿ ಪ್ರಾಂತ್ಯದಲ್ಲಿ ನಕಲಿ ಅಕ್ಕಿ ಮಾರಾಟವಾಗುತ್ತಿರುವ ಸಂಗತಿ ಚೀನಾವನ್ನು ಬೆಚ್ಚಿಬೀಳಿಸುತ್ತದೆ. ಹಾಂಕಾಂಗ್'ನ ಪತ್ರಿಕೆಯೊಂದರಲ್ಲಿ ಈ ಬಗ್ಗೆ ವಿಸ್ತೃತ ವರದಿ ಪ್ರಕಟವಾಗುತ್ತದೆ.
ಏನದು ನಕಲಿ ರೈಸ್?
ಆಲೂಗಡ್ಡೆ, ಗೆಣಸು ಮತ್ತು ಸಿಂಥೆಟಿಕ್ ರೆಸಿನ್ - ಇವುಗಳ ಮಿಶ್ರಣದಿಂದ ನಕಲಿ ಅಕ್ಕಿಯನ್ನು ತಯಾರಿಸುತ್ತಾರಂತೆ. ಸಿಂಥೆಟಿಕ್ ರೆಸಿನ್ ಇರುವುದರಿಂದ ಇದಕ್ಕೆ ಪ್ಲಾಸ್ಟಿಕ್ ರೈಸ್ ಎಂಬ ಹೆಸರು ಸಿಂಪಲ್ಲಾಗಿ ಸೇರಿಕೊಂಡಿತು.
ಪ್ಲಾಸ್ಟಿಕ್ ರೈಸ್ ತಯಾರಿಸೋದು ಹೇಗೆ?
ಆಲೂಗಡ್ಡೆ ಮತ್ತು ಗೆಣಸನ್ನು ಬೆರೆಸಿ, ಮೆಷೀನ್'ಗಳ ಸಹಾಯದಿಂದ ಅಕ್ಕಿ ಕಾಳಿನ ಆಕಾರ ಬರಿಸುತ್ತಾರೆ. ನಂತರ, ಸಿಂಥೆಟಿಕ್ ರೆಸಿನ್ ರಾಸಾಯನಿಕವನ್ನ ಅದಕ್ಕೆ ಸೇರಿಸುತ್ತಾರೆ. ಇದರಿಂದ ಅದು ಸಾಧಾರಣ ಅಕ್ಕಿಯಂತೆ ಗಟ್ಟಿಯಾಗುತ್ತದೆ. ಆದರೆ, ಬೇಯಿಸಿದಾಗಲೂ ಅದು ಸ್ವಲ್ಪ ಗಟ್ಟಿಯಾಗಿಯೇ ಇರುತ್ತದೆ. ಅಂದರೆ, ಸರಿಯಾಗಿ ಬೇಯುವುದಿಲ್ಲ.
ಪ್ಲಾಸ್ಟಿಕ್ ವಸ್ತುಗಳ ತಯಾರಿಕೆಯಲ್ಲಿ ಪ್ರಮುಖ ಭಾಗವಾಗಿರುವ ಸಿಂಥೆಟಿಕ್ ರೆಸಿನ್'ನ್ನು ಪೇಂಟ್ ಮೊದಲಾದವುಗಳಿಗೂ ಬಳಸಲಾಗುತ್ತದೆ. ಇಂಥ ಸಿಂಥೆಟಿಕ್ ರೆಸಿನ್ ನಮ್ಮ ದೇಹಕ್ಕೆ ಬಹಳ ಮಾರಕ. ಆಹಾರ ತಜ್ಞರ ಪ್ರಕಾರ ಪ್ಲಾಸ್ಟಿಕ್ ರೈಸ್'ನಿಂದ ತಯಾರಿಸಲಾದ ಮೂರು ಪ್ಲೇಟ್ ಅನ್ನವು ಒಂದು ವೀನೈಲ್ ಬ್ಯಾಗ್'ನ್ನು ತಿನ್ನುವುದಕ್ಕೆ ಸಮವಂತೆ.
ಭಾರತದಾದ್ಯಂತ ಕೆಲ ಕಡೆ ಸಿಗುತ್ತಿದೆ ಎನ್ನಲಾದ ಪ್ಲಾಸ್ಟಿಕ್ ಅಕ್ಕಿಯನ್ನು ಮೇಲೆ ತಿಳಿಸಿದ ವಿಧಾನದಿಂದ ಮಾಡಲಾಗಿದೆಯೇ? ಈವರೆಗೆ ಸಿಕ್ಕಿರುವ ಲ್ಯಾಬ್ ರಿಪೋರ್ಟ್'ಗಳೆಲ್ಲವೂ ಪ್ಲಾಸ್ಟಿಕ್ ಅಕ್ಕಿಯ ಸಾಧ್ಯತೆಯನ್ನು ತಳ್ಳಿಹಾಕಿವೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರು ಹೆಚ್ಚು ಆತಂಕಪಡುವ ಗೋಜಿಗೆ ಹೋಗದಿರುವುದೇ ಲೇಸು.
(ಮಾಹಿತಿ: ದ ಹಿಂದೂ ಮತ್ತು ಕೊರಿಯಾ ಟೈಮ್ಸ್ ಪತ್ರಿಕೆ)
