Asianet Suvarna News Asianet Suvarna News

ಉದ್ಯಮಿ ಕಿಡ್ನಾಪ್ : ಜೆಡಿಎಸ್ ಮಹಿಳಾಧ್ಯಕ್ಷೆ ಸೆರೆ

ಉದ್ಯಮಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ನಾಲ್ವರು ಈಶಾನ್ಯ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Kidnap Case Lady Arrested

ಬೆಂಗಳೂರು(ಜ.14): ಉದ್ಯಮಿ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಸೇರಿ ನಾಲ್ವರು ಈಶಾನ್ಯ ವಿಭಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಪ್ರಕರಣದ ಪ್ರಮುಖ ಆರೋಪಿ ಜೆಡಿಎಸ್ ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಅರ್ಷಿಯಾ ಆಲಿ (32), ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವ ಬಾಗಲೂರು ರಸ್ತೆ ಶ್ರೀನಿವಾಸ್ ಗಾರ್ಡನ್‌ನ ರೇಣುಕಾಪ್ರಸಾದ್ (41), ಎಚ್‌ಬಿಆರ್ ಲೇಔಟ್‌ನ 5ನೇ ಮುಖ್ಯರಸ್ತೆ ನಿವಾಸಿ ಕಾಂತರಾಜ್‌ಗೌಡ (30) ಮತ್ತು ಹೊರಮಾವು ನಿವಾಸಿ, ಕಾಂತರಾಜು ಕಾರು ಚಾಲಕ ಪ್ರದೀಪ್ ಅಲಿಯಾಸ್ ಪ್ರತೀಶ್ ಬಂಧಿತರು.

ಕೋಗಿಲು ಕ್ರಾಸ್ ನಿವಾಸಿ ಉದ್ಯಮಿ ಮಲ್ಲಿಕಾರ್ಜುನ್ ಅಲಿಯಾಸ್ ಮಲ್ಲಣ್ಣ (70) ಅಪಹರಣಕ್ಕೆ ಒಳಗಾಗಿದ್ದವರು. ಆರೋಪಿಗಳಿಂದ ಒಟ್ಟು 1.4 ಕೋಟಿ ನಗದು, ಕೃತ್ಯಕ್ಕೆ ಬಳಸಿದ್ದ 2 ಕಾರು, 2 ಪಿಸ್ತೂಲ್, 6 ಜೀವಂತ ಗುಂಡು, 3 ಲಕ್ಷ ಮೌಲ್ಯದ ಚಿನ್ನಾಭರಣ ಜಪ್ತಿ ಮಾಡಲಾಗಿದೆ ಎಂದು ಈಶಾನ್ಯ ವಿಭಾಗದ ಡಿಸಿಪಿ ಎಸ್. ಗಿರೀಶ್ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಈ ಹಿಂದೆ ಒಂದು ಕೋಟಿ ನೋಟು ಅಮಾನ್ಯೀಕರಣ ಪ್ರಕರಣದಲ್ಲಿ ಕಾಂತರಾಜುವನ್ನು ಅಶೋಕನಗರ ಬಂಧಿಸಿದ್ದರು. ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ರೇಣುಕಾಪ್ರಸಾದ್ ವಿರುದ್ಧ ವಿಶ್ವನಾಥಪುರದಲ್ಲಿ ವಂಚನೆ ಪ್ರಕರಣವೊಂದು ದಾಖಲಾಗಿದೆ.

ಏನಿದು ಕಿಡ್ನಾಪ್?: ಮಲ್ಲಿಕಾರ್ಜುನ್ ಅವರು ರಿಯಲ್ ಎಸ್ಟೇಟ್, ರೇಷ್ಮೆ ವ್ಯವಹಾರ ಹಾಗೂ ಲೇವಾದೇವಿ ವ್ಯವಹಾರ ನಡೆಸುತ್ತಿದ್ದರು. ಇವರ ಪುತ್ರ ಡಾ. ರವಿಕುಮಾರ್ ವೈದ್ಯರಾಗಿದ್ದು ಅವರೊಂದಿಗೆ ಯಲಹಂಕದ ಮಾರುತಿನಗರದಲ್ಲಿ ವಾಸವಿದ್ದರು. ಮಲ್ಲಿಕಾರ್ಜುನ್ ಅವರನ್ನು ಅಪಹರಿಸಿ ಹಣ ದೋಚಲು ಅರ್ಷಿಯಾ ಹಾಗೂ ರೇಣುಕಾಪ್ರಸಾದ್ ಸಂಚು ರೂಪಿಸಿದ್ದರು. ಜ.11ರಂದು ಮಲ್ಲಿಕಾರ್ಜುನ್ ವಾಯುವಿಹಾರಕ್ಕೆಂದು ಪಾರ್ಕ್‌ಗೆ ಕಾರಿನಲ್ಲಿ ತೆರಳುತ್ತಿದ್ದಾಗ ಕಾರಿನಲ್ಲಿ ಬಂದ ಕಾಂತ್‌ರಾಜು ಮತ್ತು ಪ್ರದೀಪ್ ಅಡ್ಡಗಟ್ಟಿ ಅಪಹರಿಸಿದ್ದರು. ಅಲ್ಲದೇ ಬಾಗೇಪಲ್ಲಿಯ ಗೋಡೋನ್‌ನಲ್ಲಿ ಇಟ್ಟಿದ್ದರು. ಬಳಿಕ ಅರ್ಷಿಯಾ ತನ್ನ ಕಾರಿನಲ್ಲಿ ರೇಣುಕಾಪ್ರಸಾದ್ ಜತೆ ತೆರಳಿದ್ದರು. ಬಳಿಕ ಮಲ್ಲಿಕಾರ್ಜುನ್ ಅವರ ಪುತ್ರ ಡಾ. ರವಿಕುಮಾರ್‌ಗೆ ಕರೆ ಮಾಡಿ 100 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದಲ್ಲಿ ನಿಮ್ಮ ತಂದೆಯನ್ನು ಕೊಲ್ಲುವುದಾಗಿ ಬೆದರಿಸಿದ್ದರು.

ಇದರಿಂದ ಆತಂಕಗೊಂಡ ರವಿಕುಮಾರ್ 59 ಲಕ್ಷ ಹಣ ಹೊಂದಿಸಿಕೊಟ್ಟು ತಂದೆಯನ್ನು ಬಿಡಿಸಿಕೊಂಡು ಬಂದು ಯಲಹಂಕ ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಾಚರಣೆಗಿಳಿದ ಡಿಸಿಪಿ ಗಿರೀಶ್ ನೇತೃತ್ವದ ತಂಡ ಆರೋಪಿಗಳು ಕರೆ ಮಾಡಿದ್ದ ಮೊಬೈಲ್ ಸಂಖ್ಯೆ ಮತ್ತು ಘಟನೆ ನಡೆದ ಸ್ಥಳದಲ್ಲಿನ ಸಿಸಿಟೀವಿಯನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಿ ತಡರಾತ್ರಿ ಆರೋಪಿಗಳನ್ನು ಅವರ ಮನೆಯಲ್ಲೇ ಬಂಧಿಸಿದೆ. ಆರೋಪಿಗಳು ಮಲ್ಲಿಕಾರ್ಜುನ್ ಅವರನ್ನು ಅಪ ಹರಿಸಲು 1 ತಿಂಗಳಿಂದ ಸಂಚು ರೂಪಿಸಿದ್ದರು. ಕಾರು ಚಾಲಕ ರಜೆ ಇದ್ದ ಕಾರಣ ಮಲ್ಲಿಕಾರ್ಜುನ್ ಅವರು ತಾವೇ ಕಾರು ಚಾಲನೆ ಮಾಡಿಕೊಂಡು ಹೋಗುತ್ತಿದ್ದರು. ಈ ವೇಳೆ ಅಪಹರಣ ಮಾಡಲಾಗಿತ್ತು.

ಸಿಕ್ಕಿ ಬಿದ್ದಿದ್ದು ಹೇಗೆ?: ಪೊಲೀಸರು ಪ್ರಕರಣ ನಡೆದ ಸ್ಥಳದಲ್ಲಿನ ಸಿಸಿಟೀವಿ ಪರಿಶೀಲನೆ ನಡೆಸಿದ್ದು, ಈ ವೇಳೆ ಕಾರಿನ ಸಂಖ್ಯೆ ಪತ್ತೆಯಾಗಿದೆ. ಕೃತ್ಯಕ್ಕೆ ಬಳಸಿದ್ದ ಕಾರು ಕಾಂತರಾಜುಗೆ ಸೇರಿದ್ದು, ಈ ಕಾರನ್ನು 3 ವರ್ಷಗಳ ಹಿಂದೆ ಹರಾಜಿನಲ್ಲಿ ಖರೀದಿಸಿದ್ದ. ಅಲ್ಲದೇ ಕಲ್ಯಾಣ ನಗರದ ಶೆಡ್‌ವೊಂದರಲ್ಲಿ ನಿಂತಿರುವುದು ಪತ್ತೆಯಾಗಿದೆ. ಬಳಿಕ ಅಲ್ಲಿಯೇ ಇದ್ದ ಪ್ರದೀಪ್‌ನನ್ನು ಪೊಲೀಸರು ಬಂಧಿಸಿ ವಿಚಾರಣೆಗೆ ಒಳಪಡಿಸಿದಾಗ ಪ್ರಕರಣ ಬೆಳಕಿಗೆ ಬಂತು ಎಂದು ಮಾಹಿತಿ ನೀಡಿದರು.

ಅರ್ಷಿಯಾ ಮನೆಯಲ್ಲಿ 45 ಲಕ್ಷ ಹಣ: 59 ಲಕ್ಷ ಹಣದ ಪೈಕಿ ಅರ್ಷಿಯಾ ಮತ್ತು ರೇಣುಕಾಪ್ರಸಾದ್ ತಲಾ 20 ಲಕ್ಷ ಹಂಚಿಕೊಂಡಿದ್ದು, ಕಾಂತರಾಜುಗೆ  19 ಲಕ್ಷ ಹಾಗೂ ಚಿನ್ನಾಭರಣ ಕೊಟ್ಟಿದ್ದರು. ದಾಳಿ ವೇಳೆ ಅರ್ಷಿಯಾ ಮನೆಯಲ್ಲಿ 20 ಲಕ್ಷ ಹೊರತು ಪಡಿಸಿ ಇನ್ನು 45 ಲಕ್ಷ ಪತ್ತೆಯಾಗಿದೆ. ಈ ಹಣವನ್ನು ಪೊಲೀಸರು ಜಪ್ತಿ ಮಾಡಿದ್ದು, ಇಷ್ಟು ಹಣ ಎಲ್ಲಿಂದ ಬಂತು ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಯೊಬ್ಬರು ಮಾಹಿತಿ ನೀಡಿದರು.

Follow Us:
Download App:
  • android
  • ios