ಖಾತಾ ನೋಂದಣಿ: ಇನ್ಮುಂದೆ ಅಧಿಕಾರಿಗಳ ಹಿಂದೆ ಸುತ್ತುವುದಕ್ಕೆ ಬ್ರೇಕ್

news | Wednesday, January 31st, 2018
Suvarna Web Desk
Highlights
 •  ಬಿಬಿಎಂಪಿಯಿಂದ ಹೊಸ ಸಾಫ್ಟ್‌ವೇರ್, ಫೆಬ್ರವರಿಯಲ್ಲಿ ಜಾರಿ  
 • ಅಧಿಕಾರಿಗಳ ಹಿಂದೆ ಸುತ್ತುವುದಕ್ಕೆ ಬ್ರೇಕ್: ಮಂಜುನಾಥ್ ಪ್ರಸಾದ್ 
 • ಇನ್ಮುಂದೆ ಆನ್‌’ಲೈನ್’ನಲ್ಲಿ ಖಾತಾ ನೋಂದಣಿ, ನಕ್ಷೆ ಮಂಜೂರು!

ಬೆಂಗಳೂರು: ರಾಜಧಾನಿಯ ಜನರು ಇನ್ನು ಮುಂದೆ ಆನ್’ಲೈನ್‌ನಲ್ಲೇ ಖಾತಾ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪಡೆಯಬಹುದು.!

ಈ ಸಂಬಂಧ ಹೊಸ ತಂತ್ರಾಂಶವನ್ನು ಬಿಬಿಎಂಪಿ ಸಿದ್ಧಪಡಿಸಲಾಗಿದ್ದು, ಫೆಬ್ರವರಿ ಮೊದಲ ವಾರದ ನಂತರ ಇದನ್ನು ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ತಿಳಿಸಿದ್ದಾರೆ. ಮಂಗಳವಾರ ನಡೆದ ಬಿಬಿಎಂಪಿ ಸಾಮಾನ್ಯ ಸಭೆಯಲ್ಲಿ ಅವರು ಈ ಮಾಹಿತಿ ನೀಡಿದರು.

ಬಿಬಿಎಂಪಿಯಿಂದ ಖಾತಾ ನೋಂದಣಿ, ಖಾತಾ ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ಪಡೆಯಲು ಅರ್ಜಿ ಸಲ್ಲಿಸಿದ ನಂತರ ಅಧಿಕಾರಿಗಳ ಹಿಂದೆ ಸುತ್ತಬೇಕು ಎಂಬ ಕೆಟ್ಟ ಅಭಿಪ್ರಾಯಗಳು ಜನರಲ್ಲಿವೆ. ಇದನ್ನು ಹೋಗಲಾಡಿಸುವ ಸಲುವಾಗಿ ಇ-ಆಡಳಿತದ ಜತೆ ಚರ್ಚಿಸಿ ಆನ್’ಲೈನ್ ಮೂಲಕವೇ ಖಾತಾ ನೋಂದಣಿ, ವರ್ಗಾವಣೆ ಮತ್ತು ನಕ್ಷೆ ಮಂಜೂರಾತಿ ನೀಡಲು ಸೂಕ್ತ ತಂತ್ರಾಂಶ (ಸಾಫ್ಟ್‌ವೇರ್) ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಿದರು.

ಸಾರ್ವಜನಿಕರು ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಿ ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಬಹುದಾಗಿರುತ್ತದೆ. ಆ ದಾಖಲೆಗಳನ್ನು ಅಧಿಕಾರಿಗಳು ಡೌನ್‌ಲೋಡ್ ಮಾಡಿಕೊಂಡು ಪರಿಶೀಲಿಸಿ ಖಾತೆ ನೋಂದಣಿ, ವರ್ಗಾವಣೆ, ನಕ್ಷೆ ಮಂಜೂರಾತಿ ಪ್ರಕ್ರಿಯೆ ನಡೆಸುತ್ತಾರೆ.

ಬಳಿಕ ಸಂಬಂಧಪಟ್ಟವರು ಮಂಜೂರಾತಿಗಳನ್ನೂ ಆನ್‌ಲೈನ್‌ನಲ್ಲೇ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪಾಲಿಕೆ ಕಚೇರಿಗಳಿಗೆ ಸುತ್ತುವಂತಿಲ್ಲ. ಈ ತಂತ್ರಾಂಶ ಬಳಕೆಗೆ ರೆವಿನ್ಯೂ ಇಂಜಿನಿಯರ್‌ಗಳಿಗೆ ತರಬೇತಿ ನೀಡಲಾಗುತ್ತಿದೆ ಎಂದು ಅವರು ವಿವರಿಸಿದರು.

ಸಿಬಿಐಗೆ ತನಿಖೆಗೆ ಆಗ್ರಹ: ನಗರದ ಕನ್ನಿಂಗ್’ಹ್ಯಾಂ ರಸ್ತೆಯಿಂದ ಜಸ್ಮಾಭವನ ರಸ್ತೆಗೆ ಹೋಗುವ ಮಾರ್ಗದಲ್ಲಿರುವ 1.28 ಲಕ್ಷ ಚದರ ಅಡಿ(3 ಎಕರೆ) ಖಾಲಿ ಜಾಗ ಬಿಬಿಎಂಪಿಯದ್ದಾಗಿದ್ದು, ಇದನ್ನು ಅಕ್ರಮವಾಗಿ ಖಾಸಗಿಯವರಿಗೆ ನಕಲಿ ಖಾತಾ ಮಾಡಿಕೊಡಲಾಗಿದೆ. ಕೂಡಲೇ ಈ ಖಾತೆ ರದ್ದುಮಾಡಿ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಸಭೆಯಲ್ಲಿ ಆಗ್ರಹಿಸಿದರು.

1974ರ ಸರ್ವೆ ದಾಖಲೆಗಳ ಪ್ರಕಾರ ಈ ಜಾಗ ಕಂಟೋನ್ಮೆಂಟ್ ಮುನಿಸಿಪಾಲಿಟಿಗೆ ಸೇರಿದ್ದಾಗಿದೆ. ಆದರೆ, 2000ರಲ್ಲಿ ನರಸಮ್ಮ ಎಂಬುವರ ಹೆಸರಿಗೆ ಬೋಗಸ್ ಖಾತಾ ಮಾಡಲಾಗಿದೆ.

ಇದಕ್ಕೆ ಬಿಬಿಎಂಪಿ ಅಧಿಕಾರಿಗಳೇ ಕಾರಣ. ಈ ಹಿಂದೆಯೂ ಕೌನ್ಸಿಲ್ ಸಭೆಯಲ್ಲಿ ಪ್ರಸ್ತಾಪಿಸಲಾಗಿತ್ತು. ನಾಲ್ವರು ಅಧಿಕಾರಿಗಳ ಅಮಾನತು ಮಾಡಲಾಗಿತ್ತು. ಮುಂದೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಆಯುಕ್ತರು ಉತ್ತರ ನೀಡಬೇಕು ಹಾಗೂ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ವಿವಾದಿತ ಜಾಗದ ಸಂಬಂಧ ಮೂವರು ಅಧಿಕಾರಿಗಳಿಂದ ವರದಿ ಪಡೆದು ಖಾತಾ ರದ್ದು ಮಾಡುಂತೆ ಜಂಟಿ ಆಯುಕ್ತರಿಗೆ ಆದೇಶ ಮಾಡಲಾಗಿತ್ತು. ಆದರೆ, ಏಕೆ ಮಾಡಿಲ್ಲ ಎಂದು ವಿವರಣೆ ಪಡೆಯಲಾಗುವುದು ಎಂದರು. ಇದೇ ವೇಳೆ, ಆಡಳಿತ ಪಕ್ಷದ ನಾಯಕ ಶಿವರಾಜು, ಜೆಡಿಎಸ್ ನಾಯಕಿ ನೇತ್ರಾ ನಾರಾಯಣ್, ಬಿಜೆಪಿಯ ಉಮೇಶ್ ಶೆಟ್ಟಿ ಮತ್ತಿತರು ಬೆಂಗಳೂರಿನ ನಾನಾ ಭಾಗದಲ್ಲಿ ಪಾಲಿಕೆಯ ಸಾವಿರಾರು ಕೋಟಿ ರು. ಆಸ್ತಿ ಇದೆ. ಅಕ್ರಮವಾಗಿ ಯಾರ್ಯಾರೋ ಒತ್ತುವರಿ ಮಾಡಿಕೊಂಡು ನೆಲೆಸಿದ್ದಾರೆ. ಇಂತಹ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

Comments 0
Add Comment

  Related Posts

  Customs Officer Seize Gold

  video | Saturday, April 7th, 2018

  BDA Converts Playground into CA Site

  video | Thursday, April 5th, 2018

  NA Harris Meets CM Siddaramaiah Ahead of Finalizing Tickets

  video | Thursday, April 12th, 2018
  Suvarna Web Desk