ನವದೆಹಲಿ: ಸಂಸತ್ ಭವನದ ಮೇಲೆ ದಾಳಿ ನಡೆಸಲು ಇಬ್ಬರು ಖಲಿಸ್ತಾನಿ ಭಯೋತ್ಪಾದಕರು ಉತ್ತರ ಪ್ರದೇಶ ನೋಂದಣಿಯ, ಸ್ಫೋಟಕ ತುಂಬಿದ ಕಾರಿ ನೊಂದಿಗೆ ದೆಹಲಿಗೆ ಬರುತ್ತಿದ್ದಾರೆ ಎಂದು ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿರುವುದರಿಂದ ತೀವ್ರ ಆತಂಕ ಸೃಷ್ಟಿಯಾಗಿದೆ. ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ಗುಪ್ತಚರ ದಳಗಳು ಅಪಾಯದ ಮುನ್ಸೂಚನೆ ನೀಡಿರುವ ಹಿನ್ನೆಲೆಯಲ್ಲಿ ರಾಷ್ಟ್ರ ರಾಜಧಾನಿಯಾದ್ಯಂತ ಬಹುಸ್ತರದ ಭದ್ರತೆ ಕಲ್ಪಿಸಲಾಗಿದೆ. 

ಖಲಿಸ್ತಾನಿ ಭಯೋತ್ಪಾದಕರಾದ ಲಖ್ವಿಂದರ್ ಸಿಂಗ್ ಹಾಗೂ ಪರ್ಮಿಂದರ್ ಸಿಂಗ್ ನೇಪಾಳ ಗಡಿಯಿಂದ ಬಿಳಿಯ ಇನ್ನೋವಾ (ಯುಪಿ 26 ಎಆರ್‌25**) ಕಾರಿನಲ್ಲಿ ಹೊರಟಿದ್ದಾರೆ. ಇಬ್ಬರೂ ಸುಧಾರಿತ ಸ್ಫೋಟಕ ಜೋಡಣೆಯಲ್ಲಿ ಸಿದ್ಧಹಸ್ತರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಗುಪ್ತಚರ ಸಂಸ್ಥೆಗಳು ಮಾತ್ರವೇ ಅಲ್ಲದೆ, ವ್ಯಕ್ತಿಯೊಬ್ಬರು ಕೂಡ ದೆಹಲಿ ಪೊಲೀಸರಿಗೆ ಕರೆ ಮಾಡಿ ಖಲಿಸ್ತಾನಿ ಉಗ್ರರ ಸಂಚಿನ ಕುರಿತು ಮಾಹಿತಿ ನೀಡಿದ್ದಾರೆ. ಕರೆ ಮಾಡಿದಾತ ತನ್ನನ್ನು ಇಕ್ಬಾಲ್ ಎಂದು ಗುರುತಿಸಿಕೊಂಡಿದ್ದಾನೆ. 

ಆತ 25349071** ಎಂಬ ಸಂಖ್ಯೆಯಿಂದ ಕರೆ ಮಾಡಿದ್ದಾನೆ. ಆ ಸಂಖ್ಯೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಜಾಲಾಡಿದಾಗ ಅದು ಉತ್ತರಾಖಂಡದ ಉಧಮ್ ಸಿಂಗ್ ನಗರದಿಂದ ಬಂದಿದೆ ಎಂಬುದು ತಿಳಿದುಬಂದಿದೆ. ಸ್ವಾತಂತ್ರ್ಯ ದಿನಕ್ಕೂ ಮುನ್ನ ಭಯೋತ್ಪಾದಕರು ಕಳುವಾದ ಕಾರು ಅಥವಾ ಸರ್ಕಾರಿ ವಾಹನಕ್ಕೆ ಸ್ಫೋಟಕ ತುಂಬಿ ದಾಳಿ ನಡೆಸಬಹುದು ಎಂದು ಕೆಲ ದಿನಗಳ ಹಿಂದೆ ಗುಪ್ತಚರ ಸಂಸ್ಥೆಗಳು ಎಚ್ಚರಿಕೆ ನೀಡಿದ್ದವು. 

ದಾಳಿ ನಡೆಸಲು ದೆಹಲಿಯತ್ತ ಬರುತ್ತಿರುವ ಉಗ್ರರಿಬ್ಬರ ಕುರಿತಂತೆ ಕರೆ ಮಾಡಿದ ವ್ಯಕ್ತಿಯೇ ಮಾಹಿತಿ ನೀಡಿದ್ದೂ, ಆ ಇಬ್ಬರೂ ಭಯೋತ್ಪಾದಕರು 2016ರ ನವೆಂಬರ್‌ನಲ್ಲಿ ಪಂಜಾಬ್‌ನಲ್ಲಿ ನಡೆದ ನಾಭಾ ಜೈಲ್ ಬ್ರೇಕ್ ಪ್ರಕರಣದಲ್ಲಿ ಶಂಕಿತ ಆರೋಪಿಗಳಾಗಿದ್ದಾರೆ. ಖಲಿಸ್ತಾನಿ ವಿಮೋಚನಾ ರಂಗದ ಮುಖ್ಯಸ್ಥ ಹರ್ಮಿಂದರ್ ಸಿಂಗ್ ಮಿಂಟೂಗೆ ಅತ್ಯಾಪ್ತರಾಗಿದ್ದವರು. 

ಕಳೆದ ಏಪ್ರಿಲ್‌ನಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ ಮಿಂಟೂಗೆ ಪಾಕ್ ಗುಪ್ತಚರ ಸಂಸ್ಥೆ ಐಎಸ್‌ಐ ಬೆಂಬಲವಿತ್ತು ಎನ್ನಲಾಗಿದೆ.ದೆಹಲಿ ಮೇಲೆ ದಾಳಿ ನಡೆಸಲು ಬರುತ್ತಿರುವವರಲ್ಲಿ ಒಬ್ಬನಾಗಿರುವ ಲಖ್ವಿಂದರ್ ಸಿಂಗ್, ನಾಭಾ ಜೈಲಿನಿಂದ ಪರಾರಿಯಾಗಿ ಹತ್ಯೆಯಾಗಿದ್ದ ವಿಕ್ಕಿ ಗೌಂಡರ್ ಬಂಟ ಎಂದು ಭದ್ರತಾಧಿಕಾರಿಯೊಬ್ಬರು ತಿಳಿಸಿದ್ದಾರೆ.