ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್, ನಾನು ಯಾರನ್ನು ಅವಮಾನ, ನೋವು ಮಾಡಲು ಈ ಹೇಳಿಕೆ ನೀಡಿಲ್ಲವೆಂದು ಹೇಳಿದ್ದಾರೆ.
ಮಂಗಳೂರು (ಫೆ.28): ಕೇರಳ ಸಿಎಂ ಪಿಣರಾಯಿ ವಿಜಯನ್ ಬಂದಾಗ ಸಂವಿಧಾನ ವಿರೋಧಿಯಾಗಿ ಬಂದ್ ಮಾಡುವವರು ಪಿಣರಾಯಿ ವಿಜಯನ್ ಅವರ ಚಪ್ಪಲಿಗೂ ಸಮಾನರಲ್ಲ ಎಂಬ ವಿವಾದಾತ್ಮಕ ಹೇಳಿಕೆಯು ಮಾತಿನ ನಡುವೆ ಬಾಯಿ ತಪ್ಪಿನಿಂದ ಬಂದಿದೆ. ಈ ಬಗ್ಗೆ ವಿಷಾದವಿದೆ , ಆದರೆ ಕ್ಷಮೆ ಕೇಳುವುದಿಲ್ಲ ಎಂದು ಸಚಿವ ಯು .ಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಖಾದರ್ ನಾನು ಯಾರನ್ನು ಅವಮಾನ, ನೋವು ಮಾಡಲು ಈ ಹೇಳಿಕೆ ನೀಡಿಲ್ಲವೆಂದು ಹೇಳಿದ್ದಾರೆ.
ದೇಶಕ್ಕೆ ಪಾಕಿಸ್ತಾನ ಪ್ರಧಾನ ಮಂತ್ರಿ ಬಂದಾಗ ಯಾರು ವಿರೋಧಿಸಿಲ್ಲ. ಹಿರಿಯರಾದ ಮತ್ತು ಬಿಲ್ಲವ ಸಮುದಾಯದಿಂದ ಬಂದಂತಹ ದೇಶದ ಏಕೈಕ ಸಿಎಂ ಮಂಗಳೂರಿಗೆ ಬಂದಾಗ ವಿರೋಧಿಸಿ ಬಂದ್ ನಡೆಸಿದ್ದಾರೆ, ಸಿಪಿಎಂ ಕಚೇರಿಗೆ ಬೆಂಕಿ, ಬಸ್ ಗೆ ಕಲ್ಲು ತೂರಾಟ ನಡೆಸಿದ್ದಾರೆ. ಇದೆಲ್ಲ ಸಂವಿಧಾನ ಬಾಹಿರ. ಜಿಲ್ಲೆಗೆ ಕೆಟ್ಟ ಹೆಸರು ಬರುತ್ತಿದೆ ಎಂಬ ಕಾರಣಕ್ಕೆ ಮಾತನಾಡಿದ್ದೇನೆಂದು ಖಾದರ್ ಹೇಳಿದ್ದಾರೆ.
ಇದೊಂದು ಜಾನಪದ ನುಡಿಮುತ್ತಿನಂತೆ ಬಂದ ಪದ. ಈ ಬಗ್ಗೆ ಹಿರಿಯ ರಾಜಕಾರಣಿ ಜನಾರ್ದನ ಪೂಜಾರಿ ಮತ್ತು ನನ್ನ ಸಣ್ಣ ಮಗಳು ಕೂಡ ಹೀಗೆ ಮಾತನಾಡಿದ್ದು ತಪ್ಪು ಎಂದಿದ್ದಾರೆ. ಮುಂದೆ ಈ ರೀತಿ ಮಾತನಾಡುವುದಿಲ್ಲವೆಂದು ಅವರು ಹೇಳಿದ್ದಾರೆ.
