ನಿಮ್ಮ ಸೇವೆ ಎಐಸಿಸಿಯಲ್ಲಿ ಹೆಚ್ಚಿನ ಅಗತ್ಯವಿದೆ. ಹೀಗಾಗಿ ಭವಿಷ್ಯದಲ್ಲಿ ನಿಮಗೆ ಕೇಂದ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ ದೊರೆಯಲಿದೆ ಎಂದು ಮುನಿಯಪ್ಪ ಅವರಿಗೆ ರಾಹುಲ್ ಗಾಂಧಿ ತಿಳಿಸಿದ್ದಾರೆ ಎನ್ನಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಪ್ರಬಲ ಆಕಾಂಕ್ಷಿಯಾಗಿರುವ ಕೆ.ಎಚ್. ಮುನಿಯಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಇತ್ತೀಚೆಗೆ ದೆಹಲಿಗೆ ತೆರಳಿ ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿದ್ದಾರೆ. ಅಲ್ಲದೆ, ತಮ್ಮನ್ನು ಈ ಹುದ್ದೆಗೆ ಪರಿಗಣಿಸುವಂತೆ ಕೋರಿದರು. ಈ ನಿಯೋಗದಲ್ಲಿ ಸಂಸದ ಡಿ.ಎಂ. ಚಂದ್ರಪ್ಪ, ಆರ್.ಬಿ. ತಿಮ್ಮಾಪುರ ಸೇರಿದಂತೆ ಹಲವರು ಇದ್ದರು ಎಂದು ಮೂಲಗಳು ಹೇಳಿವೆ.
ಈ ಮೂಲಗಳ ಪ್ರಕಾರ ಮುನಿಯಪ್ಪ ಅವರ ಆಗ್ರಹಪೂರ್ವಕ ಕೋರಿಕೆಯನ್ನು ಸಹನೆಯಿಂದಲೇ ಕೇಳಿದ ರಾಹುಲ್ ಗಾಂಧಿ ಅವರು ಅಂತಿಮವಾಗಿ ಕೆಪಿಸಿಸಿ ಅಧ್ಯಕ್ಷ ಗಾದಿಗೆ ರಾಜ್ಯಾದ್ಯಂತ ಇಮೇಜ್ ಹೊಂದಿರುವ ಹಾಗೂ ಎಲ್ಲಾ ಸಮುದಾಯ ಗಳನ್ನು ಒಟ್ಟಿಗೆ ಒಯ್ಯುವ ಸಾಮರ್ಥ್ಯವಿರುವ ವ್ಯಕ್ತಿಯನ್ನು ಪರಿಗಣಿಸುತ್ತಿದ್ದೇವೆ. ನಿಮ್ಮ ಸೇವೆ ಎಐಸಿಸಿಯಲ್ಲಿ ಹೆಚ್ಚಿನ ಅಗತ್ಯವಿದೆ. ಹೀಗಾಗಿ ಭವಿಷ್ಯದಲ್ಲಿ ನಿಮಗೆ ಕೇಂದ್ರದಲ್ಲಿ ಹೆಚ್ಚಿನ ಹೊಣೆಗಾರಿಕೆ ದೊರೆಯಲಿದೆ ಎಂದು ತಿಳಿಸಿದರು ಎಂದು ಮೂಲಗಳು ತಿಳಿಸಿವೆ.
ಇಷ್ಟಾದರೂ ಪಟ್ಟು ಬಿಡದ ಮುನಿಯಪ್ಪ ಅವರು ದಲಿತರನ್ನು ಕೆಪಿಸಿಸಿ ಅಧ್ಯಕ್ಷ ಗಾದಿಯಿಂದ ತೆಗೆದರೆ ಅದರ ಬದಲಾಗಿ ದಲಿತರಿಗೇ ಈ ಹುದ್ದೆ ನೀಡಬೇಕು. ಚುನಾವಣೆಗಳಲ್ಲಿ ಗೆಲ್ಲುವ ತಂತ್ರಗಾರಿಕೆ ಇತರರಿಗಿಂತ ಹೆಚ್ಚು ನನಗಿದೆ. ಹೀಗಾಗಿ ಈ ಅಂಶಗಳನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದು, ಇದಕ್ಕೆ ರಾಹುಲ್ ಅವರು ಸದ್ಯಕ್ಕೆ ಕೆಪಿಸಿಸಿ ಅಧ್ಯಕ್ಷ ಗಾದಿ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿಲ್ಲ ಎಂದರು ಎನ್ನಲಾಗಿದೆ.
